ಬಾಗೇಪಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಕೇಂದ್ರ ಸಚಿವ ಸಂಪುಟದಿಂದ ಕೂಡಲೇ ವಜಾ ಮಾಡಿ, ಅಂಬೇಡ್ಕರ್ ನ್ನು ಅಪಹಾಸ್ಯ ಮಾಡಿ ಅವಮಾನಿಸಿರುವುದರಿಂದ ಕಾನೂನಿನ ರೀತಿ ಕ್ರಮ ಕೈಗೊಳ್ಳಬೇಕೆಂದು ಭಾರತ ಮಾರ್ಕ್ಸ್ ವಾದಿ-ಲೆನಿನ್ ವಾದಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಮಚಂದ್ರ ಆಗ್ರಹಿಸಿದರು.
ಎಂಎಲ್ ಪಿಐ ಪಕ್ಷದ ತಾಲೂಕು ಸಮಿತಿ ನೇತೃತ್ವದಲ್ಲಿ ಗುರುವಾರ ಪಟ್ಟಣದ ತಹಶೀಲ್ದಾರರ ಕಚೇರಿ ಮುಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರನ್ನು ವಜಾ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು, ಡಾ.ಬಿ.ಆರ್ ಅಂಬೇಡ್ಕರ್ ರವರು ಈ ದೇಶವನ್ನು ಮುನ್ನೆಡೆಸುತ್ತಿರುವ ಸಂವಿಧಾನ ವನ್ನು ರಚನೆ ಮಾಡಿ, ಪ್ರಜಾಪ್ರಭುತ್ವದ ಮೂಲಕ ಪ್ರತಿ ಪ್ರಜೆಯ ಆತ್ಮಗೌರವ ಹೆಚ್ಚಿಸಿದ ವ್ಯಕ್ತಿ. ಇಂತಹ ವ್ಯಕ್ತಿ ಯನ್ನು ಸಂಸತ್ತಿನಲ್ಲೆ ಅಪಹಾಸ್ಯ ಮಾಡಿ, ಅವಮಾನಿಸಿರುವ ಗೃಹ ಸಚಿವರನ್ನು ಕೂಡಲೇ ವಜಾ ಮಾಡಬೇಕು ಮತ್ತು ಕಾನೂನಿನ ರೀತಿ ಕ್ರಮ ಜರುಗಿಸಬೇಕು. ಅವರು ಕೇವಲ ಅಂಬೇಡ್ಕರ್ ರವರನ್ನು ಮಾತ್ರ ಅವಮಾನಿಸಿಲ್ಲ, ಜತೆಗೆ ಪ್ರಜಾಪ್ರಭುತ್ವ ಮೂಲಕ ದೇಶದ ಬಹು ಸಂಖ್ಯಾತರ,ಬಡ ಮಧ್ಯಮ,ಶ್ರಮಿಕರನ್ನೊಳಗೊಂಡ ಪ್ರಜಾ ಪ್ರಭುತ್ವ ವನ್ನೆ ಅವಮಾನಿಸಿದ್ದಾರೆ. ಹಾಗೇಯೆ ಜಾತಿ ಪದ್ಧತಿಯನ್ನು ಪೋಷಿಸುವ ಕುಮ್ಮಕ್ಕು ಕೊಟ್ಟಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಜಾತಿ ಪದ್ಧತಿ ನಿರ್ಮೂಲನೆ ಮಾಡಲಿ
ಕೇಂದ್ರ ಬಿಜೆಪಿ ಸರಕಾರವು ದೇಶದಲ್ಲಿ ದಲಿತ,ದಮನಿತ,ತಳಸಮುದಾಯಗಳ ಮೇಲೆ ನಿರಂತರ ದೌರ್ಜನ್ಯ ದಬ್ಬಾಳಿಕೆಗಳು ನಡೆಯುತ್ತಿದ್ದರೂ ತಮಗೂ ಅದಕ್ಕೂ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದೆ. ಜಾತಿ ತಾರತಮ್ಯ, ಧರ್ಮಾಂಧತೆಯನ್ನು ಪೋಷಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನೂ ಒಂದು ದೇಶ,ಒಂದು ಚುನಾವಣೆ ಎಂದು ಜಪ ಮಾಡುವವರು ಈ ದೇಶದಲ್ಲಿ ಜಾತಿರಹಿತ ಸಮಾಜ ನಿರ್ಮಾಣಕ್ಕೆ ಮುಂದಾಗಲಿ, ಯಾವುದೇ ರೀತಿಯ ಜಾತಿ ಪದ್ಧತಿ ಅನುಸರಿಸದಂತೆ ಕಾನೂನು ತರಲಿ ಎಂದು ರಾಮಚಂದ್ರಪ್ಪ ಸವಾಲೆಸೆದರು.
ಆದಿವಾಸಿಗಳ ಮೇಲಿನ ದಾಳಿ ಬಗ್ಗೆ ಚಕಾರವಿಲ್ಲ
ದೇಶದಲ್ಲಿರುವ ಆದಿವಾಸಿಗಳ ಮೇಲೆ ನಿರಂತರ ದಾಳಿಗಳು ನಡೆಸಲಾಗುತ್ತಿದೆ. ಅವರ ಆವಾಸಗಳನ್ನು ನಾಶಗೊಳಿಸಿ, ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಹಾಗಾಗಿ ಇಂತಹ ಅಮಾನವೀಯ ಘಟನೆಗಳಿಗೆ ಚಕಾರ ಎತ್ತದವರು, ಅಂಬೇಡ್ಕರ್ ಬಗ್ಗೆ ಅವಹೇಳನ ಮಾಡುತ್ತಿರುವುದು ಅಕ್ಷಮ್ಯ ಎಂದರು.
ಅಭಿವೃದ್ಧಿ ಬಗ್ಗೆ ಮಾತನಾಡಲಿ
ಇದೇ ವೇಳೆ ಎಂಎಲ್ ಪಿಐ ನ ತಾಲೂಕು ಕಾರ್ಯದರ್ಶಿ ಟಿಬಿ ಕ್ರಾಸ್ ಚಲಪತಿ ಮಾತನಾಡಿ, ಅಮಿತ್ ಶಾ ರವರು ದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡುವುದಿಲ್ಲ, ಬದಲಾಗಿ ಚುನಾವಣಾ ಸಂದರ್ಭಗಳಲ್ಲಿ ಮಾತ್ರ ರಾಜ್ಯಗಳನ್ನು ಸುತ್ತಾಡಿ, ಸಂವಿಧಾನದ ಆಶಯಗಳನ್ನು ಕುಗ್ಗಿಸುವಂತಹ ಕೆಲಸಗಳು ಮಾಡುತ್ತಿರುತ್ತಾರೆ. ಈ ಬಿಜೆಪಿಯವರಿಂದ ಜನರನ್ನು ದಿಕ್ಕು ತಪ್ಪಿಸುವುದನ್ನೆ ಕೆಲಸವನ್ನಾಗಿಸಿಕೊಂಡಿದ್ದಾರೆ ಎಂದರು.
ನAತರ ತಹಶೀಲ್ದಾರರ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾರವರನ್ನು ವಜಾಗೊಳಿಸಬೇಕೆಂದು ರಾಷ್ಟ್ರಪತಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಎಂಎಲ್ ಪಿಐ ಪಕ್ಷದ ತಾಲೂಕು ಸಮಿತಿಯ ಪದಾಧಿಕಾರಿಗಳಾದ ಯಲ್ಲಂಪಲ್ಲಿ ಸಿ.ವೆಂಕಟ ರಾಮಪ್ಪ, ರಾಮರೆಡ್ಡಿ, ಪ್ರಮೀಳಮ್ಮ, ರಮೇಶ, ಮುಜಾಮಿಲ್, ಶಂಕರಪ್ಪ, ರಾಜು,ಕಟ್ಟಡ ಕಾರ್ಮಿಕ ಸಂಘಟನೆಯ ಪದಾಧಿಕಾರಿ ವೆಂಕಟರಾಮಪ್ಪ, ಟಿಯುಸಿಐನ ಮುಭಾರಕ್ ಭಾನು, ತಾಜ್ಮಿನ್ ತಾಜ್ ಮತ್ತಿತರರು ಇದ್ದರು.