Tuesday, 26th November 2024

ಮನವಿ ಪತ್ರ ಸಲ್ಲಿಕೆ

ಮಧುಗಿರಿ: ರಾಜಸ್ಥಾನ ರಾಜ್ಯದ ಜಾಲೂರು ಜಿಲ್ಲೆಯ ಸರಾನಾ ಗ್ರಾಮದ ಸರಸ್ವತಿ ವಿದ್ಯಾಮಂದಿರದ ವಿಧ್ಯಾರ್ಥಿಯನ್ನು ಹತ್ಯೆ ಮಾಡಿರುವ ಆರೋಪಿಗಳಿಗೆ ಮರಣ ದಂಡನೆ ವಿಧಿಸಬೇಕು ಎಂದು ಒತ್ತಾಯಿಸಿ ತಾಲೂಕು ದಲಿತ ಸಾಹಿತ್ಯ ಪರಿಷತ್ ಮತ್ತು ಆದಿಜಾಂಭವ ಮಹಸಭಾ ವತಿಯಿಂದ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸದ ಪದಾಧಿಕಾರಿಗಳು ಶಿಕ್ಷಕ ಚೈಲ್‌ಸಿಂಗ್ ನಿಂದ ಹಲ್ಲೆಗೆ ಒಳಗಾಗಿ ಸಾವನ್ನಪ್ಪಿರುವ ದಲಿತ ವಿದ್ಯಾರ್ಥಿ ಇಂದ್ರ ಮೇಘವಾಲ್ ಮೃತನ ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡುಬೇಕು ಹಾಗೂ ಅವರ ಕುಟುಂಬಕ್ಕೆ ಸರ್ಕಾರಿ ಉದ್ಯೋಗವನ್ನು ನೀಡಬೇಕು ಮತ್ತು ಹಲ್ಲೆ ಮಾಡಿದ ಶಿಕ್ಷಕನನ್ನು ಗಡಿಪಾರು ಇಲ್ಲವೇ ಮರಣ ದಂಡನೆ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹರಾಜು ಮಾತನಾಡಿ, ವಿದ್ಯಾರ್ಥಿ ಇಂದ್ರ ಮೇಘವಾಲ್ ಮೇಲೆ ನಡೆದಂತಹ ಮಾರಣಾಂತಿಕ ಹಲ್ಲೆ ಮತ್ತು ಹತ್ಯೆಯನ್ನ ಖಂಡಿಸುತ್ತೇವೆ. ಇದಕ್ಕೆ ಕಾರಣನಾದ ಶಿಕ್ಷಕನನ್ನು ಗಡಿಪಾರು ಇಲ್ಲವೇ ಮರಣ ದಂಡನೆಗೆ ಗುರಿಪಡಿಸುವಂತೆ ಸರ್ಕಾರದ ಗಮನಕ್ಕೆ ತರಲು ಇಂದು ಸಂಘಟನೆ ವತಿಯಿಂದ ಮನವಿಯನ್ನು ನೀಡಲಾಗುತ್ತಿದೆ. ಕೂಡಲೇ ಈ ವಿಚಾರವಾಗಿ ಸಂಬ0ಧ ಪಟ್ಟವರು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಈ ಘಟನೆಯನ್ನು ಖಂಡಿಸಿ ದಲಿತ ಸಂಘಟನೆಗಳಿ0ದ ಉಗ್ರ ಹೋರಾಟವನ್ನು ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಉಪಾಧ್ಯಕ್ಷ ಹನುಮಂತರಾಜು ಮಾತನಾಡಿ, ಇದು ಇಡೀ ಸಮಾಜವೇ ತಲೆ ತಗ್ಗಿಸುವಂತಹ ಕೆಲಸವಾಗಿದೆ. ಜಾತೀಯತೆಯನ್ನು ಹೋಗಲಾಡಿಸಬೇಕು ಎಂದು ಬೊಬ್ಬೆ ಹೊಡೆಯುವ ಜನಪ್ರತಿನಿಧಿಗಳು ಈ ವಿಚಾರದಲ್ಲಿ ಜಾಣಮೌನ ವಹಿಸಿರುವುದು ಶೋಚ ನೀಯ. ಮೃತನ ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡಬೇಕು ಹಾಗೂ ಹತ್ಯೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ತಾಪಂ ಸದಸ್ಯ ರಾಮಣ್ಣ, ಪದಾಧಿಕಾರಿಗಳಾದ ಡಿ.ಎನ್.ನರಸಿಂಹರಾಜು, ಸಿದ್ದರಾಜು, ರಮೇಶ್, ದರ್ಶನ್, ಶ್ರೇಯಸ್ ಭೂಷಣ್, ಅಶ್ವತ್ಥ್ ಯಾದವ್, ವಿಶ್ವನಾಥ್, ನಾಗೇಶ್, ತುಂಗೋಟಪ್ಪ, ಕದರಪ್ಪ, ನರಸಿಂಹಮೂರ್ತಿ, ರವಿ ಕುಮಾರ್, ರಂಗನಾಥ್ ಹಾಗೂ ಮುಂತಾದವರು ಇದ್ದರು.