Thursday, 12th December 2024

ಸರಕಾರಿ ಕಾರ್ಯಕ್ರಮಗಳಲ್ಲಿ ಕಲಾವಿದರಿಗೆ ಅವಕಾಶ ದೊರೆಯುತ್ತಿಲ್ಲ

tumkur

ತುಮಕೂರು: ಸರಕಾರಿ ಕಾರ್ಯಕ್ರಮಗಳಲ್ಲಿ ಪ್ರಖ್ಯಾತ ಕಲಾವಿದರು ಸೇರಿದಂತೆ ಕಲಾವಿದರುಗಳಿಗೆ ಸಿಗಬೇಕಾದ ಗೌರವ ದೊರೆಯುತ್ತಿಲ್ಲ. ಇದು ದುರಾದೃಷ್ಟದ ಸಂಗತಿ. ಕೇವಲ ನಾಡಗೀತೆ, ಟ್ಯಾಬ್ಲೋ ಮೆರವಣಿಗೆಗೆ ಮಾತ್ರ ಬಳಕೆಯಾಗುತ್ತಿರುವುದು ದುರಂತದ ಸಂಗತಿ ಎಂದು ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ , ಹಾಲಪ್ಪ ಪ್ರತಿಷ್ಠಾನ ಹಾಗೂ ಕರ್ನಾಟಕ ಸಾಂಸ್ಕೃತಿಕ ಸಂಘಟನೆಗಳ ರಾಜ್ಯ ಮಹಾ ಒಕ್ಕೂಟ ವತಿಯಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾಗಿರುವ ತುಮಕೂರು ಜಿಲ್ಲೆಯ ಕಲಾವಿದರೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜಕಾರಣಿಗಳ ಬರುವಿಕೆಗಾಗಿಯೇ ಕಾದು ಕುಳಿತುಕೊಳ್ಳುವ ಅಧಿಕಾರಿಗಳು, ಅವರು ಬಂದಾಕ್ಷಣ ದೀಪ ಹಚ್ಚಿಸಿ, ಭಾಷಣ ಮಾಡಿಸಿ ಕಳುಹಿಸಿಕೊಡುತ್ತಾರೆ. ಕಲೆ ಪ್ರದರ್ಶನಕ್ಕೆ ಅವಕಾಶಗಳೇ ದೊರೆಯುವುದಿಲ್ಲ. ಇದು ಬದಲಾಗಬೇಕು. ನಿಮ್ಮಲ್ಲಿರುವ ಪ್ರತಿಭೆ ಸಹ ವೇದಿಕೆಯ ಮೇಲೆ ಪ್ರದರ್ಶನಗೊಂಡರೆ, ಅದು ಮತ್ತಷ್ಟು ವಿಸ್ತಾರವಾಗಿ, ದೊಡ್ಡ ಮಟ್ಟದ ವೇದಿಕೆಗಳಲ್ಲಿ ಕಾರ್ಯಕ್ರಮಗಳ ನೀಡಲು ಸಹಕಾರಿಯಾಗುತ್ತದೆ ಎಂದರು.

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ , ನಾಟಕ ಅಕಾಡೆಮಿ ಸದಸ್ಯರಾದ ರವೀಂದ್ರ ಸಿರಿವರ, ಕರ್ನಾಟಕ ಸಾಂಸ್ಕೃತಿಕ ಸಂಘಟನೆಗಳ ರಾಜ್ಯ ಮಹಾಒಕ್ಕೂಟದ ರಾಜ್ಯಾಧ್ಯಕ್ಷ ವೀರೇಶ್ ಪ್ರಸಾದ್ , ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿದರು.

ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪುರಸ್ಕೃತರಾದ ಶಿವಕುಮಾರ್, ಮಯಾ ಬ್ರಹ್ಮಾಚಾರ್ ಗುಬ್ಬಿ, ಸತ್ಯನಾರಾಯಣ, ಹೇಮಮಾಲಿನಿ ತುಮಕೂರು ಹೆಚ್.ಎಲ್. ರಂಗನಾಥಪ್ಪ, ಎಸ್.ಎಮ್.ಖಾನ್ ಶಿರಾ, ಡಾ.ಕೆ.ಪಿ. ಆಶ್ವಥನಾರಾಯಣ ಮಧುಗಿರಿ, ಮುರೂಡಯ್ಯ ಚಿಕ್ಕನಾಯಕನಹಳ್ಳಿ,  ತುಮಕೂರು, ನಾಟಕ ಅಕಾಡೆಮಿ ಸದಸ್ಯರಾದ ಉಗಮಶ್ರೀನಿವಾಸ್, ರವೀಂದ್ರ ಸಿರಿವರ ಅವರುಗಳನ್ನು ಅಭಿನಂದಿಸಲಾಯಿತು.

ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ವೈ.ಎನ್.ಶಿವಣ್ಣ, ಕರ್ನಾಟಕ ಸಾಂಸ್ಕೃತಿಕ ಸಂಘಟನೆಗಳ ಮಹಾಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಸಿ.ಜಯಕುಮಾರ್, ಕಾರ್ಯದರ್ಶಿ ಬಸವರಾಜು ಐನಾಪುರ ಮತ್ತಿತರರು ವೇದಿಕೆಯಲ್ಲಿದ್ದರು.