Thursday, 12th December 2024

ವಿದ್ಯಾರ್ಥಿಗಳು ಪರಿಸರ ರಾಯಭಾರಿಗಳು : ಅರುಣ್

ಚಿಕ್ಕನಾಯಕನಹಳ್ಳಿ : ವಿದ್ಯಾರ್ಥಿಗಳು ಸಮಾಜದಲ್ಲಿ ಪರಿಸರ ರಾಯಭಾರಿಗಳಂತೆ ಕಾರ್ಯ ನಿರ್ವಹಿಸಬೇಕು, ಯಾವುದೇ ಸ್ವಾರ್ಥವಿಲ್ಲದೆ ನೂರಾರು ಮರಗಳಿಗೆ ನೀರೆರದು ಪೋಷಿಸುವಂತೆ ವಲಯ ಅರಣ್ಯಾಧಿಕಾರಿ ಅರುಣ್ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.

ಪಟ್ಟಣದ ಸರಕಾರಿ ಪ್ರಥಮದರ್ಜೆ ಕಾಲೇಜಿನ ಭಾರತ್ ಸ್ಕೌಟ್ಸ್ ಅಂಡ್ ಗೈಡ್, ಸ್ವಾಮಿ ವಿವೇಕಾನಂದ ರೋವರ್ಸ ಕಿತ್ತೂರು ರಾಣಿ ಚನ್ನಮ್ಮ ರೇಂಜರ್ಸ ಘಟಕದ ಸಹಭಾಗಿತ್ವದಲ್ಲಿ ಸಾಮಾಜಿಕ ಹಾಗು ವಲಯ ಅರಣ್ಯ ಇಲಾಖೆ ವತಿಯಿಂದ ಸೋಮವಾರ ಆಚರಿಸಲಾದ ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಮಾತನಾಡಿದರು.

ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿದ್ಯಾರ್ಥಿ ಜೀವನದಿಂದಲೇ ಪ್ರಕೃತಿ ಯನ್ನು ಪ್ರೀತಿಸಬೇಕಿದ್ದು, ಕಾಲೇಜಿನ ಪರಿಸರವನ್ನು ಶುಚಿತ್ವದಿಂದ ಇಡುವುದು ನಿಮ್ಮೆಲ್ಲರ ಕರ್ತವ್ಯವಾಗಬೇಕು. ಕಾಡು ಬೆಳಸುವುದು ಕೇವಲ ಅರಣ್ಯ ಇಲಾಖೆ ಕೆಲಸವಲ್ಲ. ಜನರಲ್ಲಿ ಜಾಗೃತಿ ಬರಬೇಕು. ಪ್ರತಿಯೊಬ್ಬರು ಕರ್ತವ್ಯದಂತೆ ಕೈಜೋಡಿಸಿದರೆ ಮಾತ್ರ ನಾವು ಪ್ರಕೃತಿಯನ್ನು ಕಾಪಾಡಬಹುದೆಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಶಿವಕುಮಾರ್ ವಿದ್ಯಾರ್ಥಿಗಳು ತಮ್ಮ ನೆನಪಿಗಾಗಿ ಕಾಲೇಜಿನ ಪರಿಸರದಲ್ಲಿ ಗಿಡವನ್ನು ನೆಟ್ಟು ಬೆಳಸಬೇಕು. ಪರಿಸರವನ್ನು ನಾವು ಕಾಪಾಡಿದರೆ ಮಾತ್ರ ನಾವೆಲ್ಲರೂ ಆರೋಗ್ಯಯುತವಾದ ಜೀವನ ನಡೆಸಬಹುದಾಗಿದೆ. ಅದಕ್ಕಾಗಿ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸು ವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭ ರೋವರ್ಸ ಘಟಕದ ಸಂಚಾಲಕ ನಾಗರಾಜಕುಮಾರ್, ರೇಂಜರ್ಸ ಘಟಕದ ಮಮತ, ದೈಹಿಕ ಶಿಕ್ಷಣದ ಮುಖ್ಯಸ್ಥ ಶೈಲೇಂದ್ರ ಕುಮಾರ್, ಸಮಾಜ ಕಾರ್ಯ ವಿಭಾಗದ ನಾಗರಾಜ, ಅರಣ್ಯ ಇಲಾಖೆಯ ಮಂಜುನಾಥ್, ಶೇಖರ್, ಹಾಗು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಅರಣ್ಯ ಸಂರಕ್ಷಿಸುವ ಘೋಷಣೆಯೊಂದಿಗೆ ವಿದ್ಯಾರ್ಥಿಗಳು ಜಾಥ ನಡೆಸಿದರು.