Tuesday, 26th November 2024

Baagina: ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯಿಂದ ಗೌರಿಗಣೇಶ ಹಬ್ಬದ ಆಚರಣೆ : ಬಾಗಿನ ಅರ್ಪಣೆ

ಚಿಕ್ಕಬಳ್ಳಾಪುರ : ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯಿಂದ ಗೌರಿ ಹಾಗೂ ಗಣಪತಿ ಚೌತಿಯನ್ನು ಆಚರಿಸಲಾಯಿತು. ಗೌರಿಗೆ ಹರಿಸಿಣ ಕುಂಕುಮ ಬಳೆ ಹೊಸಬಟ್ಟಯ ಬಾಗೀನ ಅರ್ಪಣೆ ಸಲ್ಲಿಸಿದರೆ, ಗಣಪತಿಗೆ ಗರಿಕೆ ಎಳ್ಳುಂಡೆ ಮೋದಕ ಸಹಿತ ಬಗೆಬಗೆಯ ಹಣ್ಣುಹಂಪಲು ಭಕ್ಷ್ಯಭೋಜ್ಯಗಳನ್ನು ಅರ್ಪಿಸಿ ಭಕ್ತಿಯ ಪಾರಮ್ಯ ಮೆರೆದರು.

ಶ್ರಾವಣದ ಹಸಿರಿನ ನಡುವೆ ಬಂದಿರುವ ಗಣೇಶ ಚೌತಿಯನ್ನು ಜಿಲ್ಲೆಯ ಜನತೆ ಸಂತೋಷದಲ್ಲಿ ಸ್ವಾಗತಿಸಿ,ತಾಯಿ ಗೌರಿಗೆ ಮೊದಲ ಪೂಜೆ ಸಲ್ಲಿಸಿ ನಂತರ ಗಣನಾಥನ ಆರಾಧನೆಗೆ ಮುಂದಾಗಿರುವುದು ಎಲ್ಲೆಡೆ ಕಂಡು ಬಂದಿತು. ಗಣೇಶ ಚೌತಿಯನ್ನು ಹಿರಿಯ ಕಿರಿಯರೆ ಹೆಣ್ಣು ಗಂಡು ಎಂಬ ಬೇಧವಿಲ್ಲದೆ, ಸಂಘಸಂಸ್ಥೆಗಳ ಸಾರಥ್ಯದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.ಚಿಕ್ಕಬಳ್ಳಾಪುರ ಚಿಂತಾಮಣಿಯಲ್ಲಿ ಮುಸ್ಲಿಂ ಬಾಂಧವರು ಕೂಡ ಆಚರಣೆಯಲ್ಲಿ ಕೈಜೋಡಿಸಿ ಧಾರ್ಮಿಕ ಸಾಮರಸ್ಯ ಮೆರೆದರು.

ಚಿಕ್ಕಬಳ್ಳಾಪುರ ನಗರದ ೩೧ ವಾರ್ಡುಗಳಲ್ಲಿ ಬಹುತೇಕ ಗಣಪನ ಮೂತಿಗಳನ್ನು ಪ್ರತಿಷ್ಟಾಪಿಸಿದ್ದು ಒಂದು ದಿನದಿಂದ ೧೫ ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳ ಸಹಿತ ವಿಶೇಷಪೂಜೆಗಳನ್ನು ನಡೆಸುತ್ತಾ,ಭಕ್ತಿಯಲ್ಲಿ ಮಿಂದೆದ್ದರು.

ನಗರದ ಆರ್ಯವೈಶ್ಯ ನಗರ್ತಮಂಡಳಿ ಸದಸ್ಯರು ಗೌರಿಹಬ್ಬದ ದಿನ ಪ್ರತಿವರ್ಷದಂತೆ ತಾಯಿ ಗೌರಿಯನ್ನು ಪ್ರತಿಷ್ಟಾಪಿಸಿ ಧಾರ್ಮಿಕ ವಿಧಿಗಳಂತೆ ವ್ರತಾಚರಣೆ ಮಾಡಿದರಲ್ಲದೆ,ಸುಮಂಗಲಿಯರು ತಾಯಿಗೆ ಬಾಗೀನ ಅರ್ಪಿಸಿ ಕೃತಾರ್ಥರಾದರು.

ಕೆಳಗಿನ ತೋಟದ ವಾರ್ಡ್ ೨೨ರಲ್ಲಿ ಹೆಚ್.ಎಸ್.ಗಾರ್ಡನ್ ಗಣೇಶೋತ್ಸವ ಸಮಿತಿ ೧೪ನೇ ವರ್ಷದ ಆಚರಣೆಯನ್ನು ಅದ್ಧೂರಿಯಾಗಿ ನೆರವೇರಿಸಿದ್ದರು.ಭಾನುವಾರ ಜೀ-ಕನ್ನಡ ಕಾಮಿಡಿ ಕಿಲಾಡಿಗಳ ಖ್ಯಾತಿಯ ಹಾಸ್ಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಈ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ,ಗಣ್ಯರಿಗ ಸನ್ಮಾನ,ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗ ಏರ್ಪಡಿಸಿದ್ದರು.

ಇದರಂತೆ ದೊಡ್ಡಭಜನೆ ಮನೆ ರಸ್ತೆ,ಕಂದವಾರಪೇಟೆ, ಚಾಮರಾಜನಗರ,ಪ್ರಶಾಂತ್‌ನಗರ,ಪೊಲೀಸ್ ಕ್ವಾಟ್ರಸ್,ರೈಲ್ವೇ ಸ್ಟೇಷನ್ ರಸ್ತೆ,ದೊಡ್ಡಭಜನೆ ಮನೆರಸ್ತೆ,ಕೊರಚರಬೀದಿ, ಗಂಗಮ್ಮ ಗುಡಿರಸ್ತೆ,ಇಂದಿರಾನಗರ, ನಗರ್ತರ ಬೀದಿ ಸೇರಿದಂತೆ ಎಲ್ಲೆಡೆ ಗಣಪತಿ ಆಚರಣೆಯನ್ನು ವಿಶೇಷವಾಗಿ ಮಾಡಿದ್ದರು.

ಜಿಲ್ಲೆಯ ಗೌರಿಬಿದನೂರು,ಗುಡಿಬಂಡೆ,ಬಾಗೇಪಲ್ಲಿ,ಶಿಡ್ಲಘಟ್ಟ, ಚಿಂತಾಮಣಿ ತಾಲೂಕಿನಾದ್ಯಂತ ಗೌರಿಗಣೇಶ ಪೂಜೆಯನ್ನು ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಆಚರಣೆ ಮಾಡಲಾಯಿತು.