ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ನಡುವೆ ಇಂದಿನಿಂದ ಬರೋಬ್ಬರಿ ಆರು ರೈಲುಗಳ ಸಂಚಾರ ಆರಂಭವಾಗಲಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲುಗಳ ಸೇವೆ ಆರಂಭಿಸಲಾಗಿತ್ತು. ಈ ರೈಲುಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನ ಹಳ್ಳಿಗೆ ಬಂದು ನಿಲ್ಲುತ್ತಿದ್ದವು. ಅಷ್ಟೂ ರೈಲುಗಳನ್ನು ಈಗ ಚಿಕ್ಕಬಳ್ಳಾಪುರದವರೆಗೂ ಸಂಚರಿಸಲು ಹಸಿರು ನಿಶಾನೆ ತೋರಲಾಗಿದೆ. ಬೆಂಗಳೂರಿ ನಿಂದ ದೇವನಹಳ್ಳಿವರೆಗೂ ಇದ್ದ ರೈಲು ಸಂಚಾರವನ್ನು ಕಂಟೋನ್ವೆಂಟ್ ನಿಂದ ಚಿಕ್ಕಬಳ್ಳಾಪುರಕ್ಕೆ ವಿಸ್ತರಿಸಲಾಗಿದೆ.
ದೇವನಹಳ್ಳಿಯಿಂದ ಬೆಂಗಳೂರುವರೆಗೂ ಇದ್ದ ರೈಲು ಸಂಚಾರ ಚಿಕ್ಕಬಳ್ಳಾಪುರದಿಂದ ಕಂಟೋನ್ವೆಂಟ್‌ವರೆಗೂ ವಿಸ್ತರಿಸಲಾಗಿದೆ.
ಭಾನುವಾರ ಹೊರತುಪಡಿಸಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ ಮತ್ತು ಕೋಲಾರದ ನಡುವೆ ಎರಡು ರೈಲುಗಳು ಸಂಚರಿಸುತ್ತಿವೆ. ಬೆಳಗ್ಗೆ ಮತ್ತು ಸಂಜೆ ರೈಲು ಸೇವೆ ಇದೆ.
ಕೇವಲ 20 ರೂ. ಕೊಟ್ಟು ಬೆಂಗಳೂರಿಗೆ ಹೋಗುವ ಅವಕಾಶ ರೈಲ್ವೆ ಸೇವೆಯಿಂದ ಲಭ್ಯವಾಗಲಿದೆ. ದುಬಾರಿ ಟಿಕೆಟ್ ದರ ಕೊಟ್ಟು ಬೆಂಗಳೂರಿಗೆ ಹೋಗುವ ಬದಲು ಕಡಿಮೆ ವೆಚ್ಚದಲ್ಲಿ ಬೆಂಗಳೂರಿಗೆ ಹೋಗಲು ಇದರಿಂದ ಅನುಕೂಲವಾಗಲಿದೆ. ಅಲ್ಲದೇ ಬೆಳಗ್ಗೆ ಮಧ್ಯಾಹ್ನ, ಸಂಜೆ ಕೂಡಾ ರೈಲು ಸೇವೆ ಇರುವುದರಿಂದ ಪಾಸ್ ಮಾಡಿಸಿದರೆ ಇನ್ನಷ್ಟು ಅಗ್ಗವಾಗಲಿದೆ.
ಇನ್ನೊಂದೆಡೆ ರೈಲ್ವೆ ನಿಲ್ದಾಣದಲ್ಲಿ ಸರಿಯಾದ ವಿದ್ಯುತ್ ದೀಪಗಳು ಇಲ್ಲದೆ ಸಂಜೆಯಾದರೆ ಬಿಕೋ ಎನ್ನುತ್ತದೆ. ಇನ್ನು ರೈಲ್ವೆ ನಿಲ್ದಾಣದ ಮೂಲಕವೇ ರೈಲ್ವೆ ಹಳಿಗಳ ಮೇಲೆ ದ್ವಿಚಕ್ರವಾಹನಗಳಲ್ಲಿ ಪಕ್ಕದ ವಾರ್ಡ್‌ಗಳಿಗೆ ಹೋಗುವವರ ಸಂಖ್ಯೆಯೂ ಹೆಚ್ಚಿದೆ. ಸದ್ಯಕ್ಕೆ ಚಿಕ್ಕಬಳ್ಳಾಮರಕ್ಕೆ ಹೆಚ್ಚಿನ ರೈಲು ಸಂಪರ್ಕ ಕಲ್ಪಿಸಿರುವುದು ಉದ್ಯೋಗ ಬಯಸಿ ಹೋಗುವ ಕಾರ್ಮಿಕರಿಗೆ ಸಾಕಷ್ಟು ಅನುಕೂಲವಾಗಲಿದೆ.