Monday, 25th November 2024

Baraguru Ramachandrappa: ಬಹುತ್ವ ಸಂಸ್ಕೃತಿ ಉಳಿಯಬೇಕು: ಬರಗೂರು ರಾಮಚಂದ್ರಪ್ಪ

ತುಮಕೂರು: ಭಾರತದ ಬಹುತ್ವ ಸಂಸ್ಕೃತಿಯನ್ನು ತಿಳಿಸಿದ ಬುದ್ಧ, ಬಸವ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಕುವೆಂಪು ಅವರಂತಹ ದಾರ್ಶನಿಕರ ವಿಚಾರಧಾರೆಗಳನ್ನು ಉಳಿಸಲು ಸಮತೆ, ಮಮತೆಗಳ  ಪರಂಪರೆ ಅಗತ್ಯ ಎಂದು ಸಾಹಿತಿ ಡಾ: ಬರಗೂರು ರಾಮಚಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

 ತುಮಕೂರು ದಸರಾ ಉತ್ಸವ ಅಂಗವಾಗಿ ನಗರದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದ ಪ್ರೊ.ಎಚ್.ಜಿ. ಸಣ್ಣಗುಡ್ಡಯ್ಯ ಹಾಗೂ ವೀಚಿ ವೇದಿಕೆಯಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ ಪರಂಪರೆ ಮತ್ತು ಸಾಮಾಜಿಕ ಜವಾಬ್ದಾರಿ ಕುರಿತು ಸಂವಾದಗೋಷ್ಠಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪರಂಪರೆ ಎಲ್ಲಾ ಕಾಲದಲ್ಲಿಯೂ ಬೆಳವಣ ಗೆ ಹೊಂದುತ್ತಾ ಬರುತ್ತಿದ್ದು, ಸಂಸ್ಕೃತಿ ಮತ್ತು ಪರಂಪರೆಗಳ ನಡುವಿನ ಸೂಕ್ಷ್ಮ ವ್ಯತ್ಯಾಸ ಗಳನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಬರವಣಿಗೆ ಸಂಸ್ಕೃತಿಯ ಜತೆಗೆ ಜನಮೂಲ ಸಂಸ್ಕೃತಿಯನ್ನು ತಿಳಿದಾಗ ಮಾತ್ರ ಈ ನೆಲದ ಮೂಲ ಪರಂಪರೆಯ ನೆಲೆಗಟ್ಟನ್ನು ನೋಡಲು ಸಾಧ್ಯ ಎಂದು ತಿಳಿಸಿದರು.

  ಜಿಲ್ಲೆಯು ಕನ್ನಡ ಭಾಷೆ ಹಾಗೂ ರಾಜ್ಯಕ್ಕೆ ಹಲವು  ಮೊದಲುಗಳನ್ನು ನೀಡಿದೆ. ಕನ್ನಡದ ಮೊದಲ ನಾಟಕ ಸಂಸ್ಥೆ, ಕನ್ನಡ ಮೊದಲ ಟಾಕಿ ಸಿನಿಮಾಗೆ ಚಿತ್ರಕಥೆ, ಸಾಹಿತ್ಯ, ಬರವಣಿಗೆ ಸೇರಿದಂತೆ ಕಲೆ, ವಿಜ್ಞಾನ, ಸಾಹಿತ್ಯ, ಸಿನಿಮಾ ಮತ್ತು  ಶೈಕ್ಷಣಿಕ ಕ್ಷೇತ್ರಗಳಲ್ಲಿ ಜಿಲ್ಲೆಗೆ ತನ್ನದೇ ಆದ ಇತಿಹಾಸ ಇರುವುದರಿಂದ ಜಿಲ್ಲೆಯ ಸಾಧಕರನ್ನು ಕುರಿತು ತಿಳಿಸುವಂತಹ ವಿವಿಧ ರೀತಿಯ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ತಿಳಿಸಿದರು.

ಸಾಹಿತಿಗಳು ಸಮಾಜದ ಸಾಕ್ಷಿ ಪ್ರಜ್ಞೆ: ಸಚಿವ ಪರಮೇಶ್ವರ್ 

 ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ್ ಮಾತನಾಡಿ, ಸಮಾಜದಲ್ಲಿನ ಆಗು-ಹೋಗುಗಳ ಕುರಿತು ತಮ್ಮದೆ ಆದ ದೃಷ್ಟಿಕೋನದಲ್ಲಿ ವಿಮರ್ಶಿಸುವ ಸಾಹಿತಿಗಳು ಸಮಾಜದ ನಿಜವಾದ ಸಾಕ್ಷಿಪ್ರಜ್ಞೆಗಳಾಗಿದ್ದಾರೆ ಎಂದು ತಿಳಿಸಿದರು. 

ವಿಶ್ವ ವಿದ್ಯಾನಿಲಯಗಳು ಕೇವಲ ಪದವಿಗಳನ್ನು ನೀಡುತ್ತವೆ.  ಆದರೆ ಭಾರತದ ಸಂಸ್ಕೃತಿ ಬದುಕನ್ನು ಕಟ್ಟಿ ಕೊಳ್ಳುವುದನ್ನು ಕಲಿಸುತ್ತದೆ. ಭಾರತದ ಮೂಲ ಸಂಸ್ಕೃತಿ ಪರಂಪರೆಯ ಬಗ್ಗೆ  ವಚನಕಾರರು, ಸಾಹಿತಿಗಳು, ಚಿಂತಕರು ತಿಳಿಸಿರುವ   ಕಾನೂನು ವ್ಯವಸ್ಥೆ, ಅಧುನಿಕ ಯುಗದಲ್ಲಿ ಮಹಿಳೆಯ ಪಾತ್ರ, ಸಮಾನತೆ, ಬಹುತ್ವ ವಿಷಯಗಳ ಕುರಿತು ಚರ್ಚೆ ನಡೆಯಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ  ಶಾಸಕ ಎಂ. ಟಿ. ಕೃಷ್ಣಪ್ಪ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ, ಸಾಹಿತಿ ನಾಗಭೂಷಣ ಬಗ್ಗನಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಹಿರಿಯ ಪತ್ರಕರ್ತ ಎಸ್. ನಾಗಣ್ಣ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್, ಚಿತ್ರ ಕಲಾವಿದರಾದ ಕೋಟೆಕುಮಾರ್, ಪ್ರಭು ಹರಸೂರು, ಲಕ್ಷ್ಮಣ್ ದಾಸ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಹಾಗೂ ಕವಿಗೋಷ್ಠಿ ಉಪಸಮಿತಿ ಅಧ್ಯಕ್ಷ ಬಾಲಗುರುಮೂರ್ತಿ, ದಸರಾ ಕವಿಗೋಷ್ಠಿ ಸಮಿತಿ ಸದಸ್ಯರಾದ ಪ್ರಜಾಪ್ರಗತಿ ದಿನ ಪತ್ರಿಕೆ ವರದಿಗಾರ ಹರೀಶ್ ಆಚಾರ್ಯ ಹಾಗೂ ವಿಶ್ವವಾಣಿ ದಿನ ಪತ್ರಿಕೆ ಜಿಲ್ಲಾ ವರದಿಗಾರ ರಂಗನಾಥ ಕೆ. ಮರಡಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: Tourist Places: ಅಕ್ಟೋಬರ್‌ ರಜೆಯಲ್ಲಿ ನೀವು ಪ್ರವಾಸ ಮಾಡಬಹುದಾದ 5 ಅದ್ಭುತ ಸ್ಥಳಗಳಿವು!