Monday, 23rd December 2024

Bengaluru News: ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಪೂಜೆ, ಜಪಾನುಷ್ಠಾನ ಸಂಪನ್ನ

Bengaluru News

ಬೆಂಗಳೂರು: ಬದುಕಿನ ಕಷ್ಟ ಕಾರ್ಪಣ್ಯಗಳನ್ನ ಕಳೆದುಕೊಂಡು, ಸತತ ವೈಫಲ್ಯಗಳಿಂದ ಮುಕ್ತಿ ಹೊಂದಿ ಭಕ್ತಿ ಮಾರ್ಗದಲ್ಲಿ ಮುನ್ನಡೆಯಲು ನೆರವಾಗಲು ಬೆಂಗಳೂರು ನಗರದ (Bengaluru News) ಸುಜಾತಾ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ರೇಣುಕಾ ಯಲ್ಲಮ್ಮ ದೇವಿಯ ಪೂಜೆ, ಜಪಾನುಷ್ಠಾನ ಕಾರ್ಯಕ್ರಮ ಸಂಪನ್ನಗೊಂಡಿತು.

ಅಧ್ಯಾತ್ಮ ಚಿಂತಕ ಹಾಗೂ ಜ್ಯೋತಿಷಿ ಪ್ರಾಣೇಶ್ ಅವರ ನೇತೃತ್ವದಲ್ಲಿ ನಡೆದ ಪೂಜಾ ವಿಧಾನವು ನಾನಾ ಕ್ರಮಗಳಲ್ಲಿ ಕೈಗೊಳ್ಳಲಾಯಿತು. ಹೋಮ, ಪೂರ್ಣಾಹುತಿ, ಸಹಸ್ರನಾಮ ಪಾರಾಯಣ ಹಾಗೂ ರೇಣುಕಾ ಯಲ್ಲಮ್ಮ ಜಪವಿಧಿಯ ಮೂಲಕ ತಾಯಿಯ ಅನುಗ್ರಹ ಕೋರಲಾಯಿತು. ಬಳಿಕ ಮಾತನಾಡಿದ ಅಧ್ಯಾತ್ಮ ಚಿಂತಕ, ಉದ್ಯಮಿ ಹಾಗೂ ಜ್ಯೋತಿಷಿ ಪ್ರಾಣೇಶ್ ಅವರು, ‘ಸತತ ಸೋಲಿನಿಂದ ಮುಕ್ತಿ ಹೊಂದಿ ಯಶಸ್ಸಿನ ಮಾರ್ಗದಲ್ಲಿ ಮುನ್ನಡೆಯಲು ಈ ಪೂಜಾ ಕ್ರಮ ನೆರವಾಗಲಿದೆ. ಸಾಮಾನ್ಯರಿಗೂ ತಾಯಿ ಯಲ್ಲಮ್ಮಳ ಪೂಜೆ ಹಾಗೂ ಜಪ ಕ್ರಮ ತಿಳಿಸಿಕೊಟ್ಟು ನಿತ್ಯ ಅನುಸರಿಸಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಕೃಪೆಗೆ ಪಾತ್ರರಾಗಬೇಕೆಂಬ ಉದ್ದೇಶದಿಂದ ಈ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾರ್ಗದರ್ಶಕ ಡಾ. ಕುಮಾರ್ ಕೆಂಚೇಗೌಡ ಮಾತನಾಡಿ, ದುಷ್ಟ ಸಂಹಾರಿಣಿ, ಶಿಷ್ಟ ರಕ್ಷಕಿ ಯಲ್ಲಮ್ಮನ ಅನುಗ್ರಹ ದೊರೆತರೆ ಬದುಕಿನಲ್ಲಿ ಅಗಾಧ ಬದಲಾವಣೆ ಸಾಧ್ಯವಿದೆ. ಪೂಜೆ, ಜಪ ಹಾಗೂ ಧ್ಯಾನಕ್ಕೆ ಅಧ್ಯಾತ್ಮ ಪ್ರಪಂಚದಲ್ಲಿ ಮಹತ್ತರ ಶಕ್ತಿಯಿದೆ. ಅಂದುಕೊಂಡಿದ್ದನ್ನ ಸಾಧಿಸುವುದಕ್ಕೆ ಇದ್ಯಾವುದಾದರು ಒಂದು ಕ್ರಮವನ್ನು ಅನುಸರಿಸಲೇಬೇಕು. ಹೀಗಾಗಿ ಸಮಾಜದ ಪ್ರತಿ ಆಸ್ತಿಕ ವ್ಯಕ್ತಿಗೂ ಈ ಪ್ರಕ್ರಿಯೆ ಅರ್ಥವಾಗಬೇಕು, ಅನುಸರಿಸಲು ನೆರವಾಗಬೇಕೆಂಬ ಸದುದ್ದೇಶದಿಂದ ಈ ಕೈಂಕರ್ಯ ಆಯೋಜಿಸಲಾಗಿದೆ. ನೆಮ್ಮದಿಯ ಬದುಕಿಗೆ ಈ ಪೂಜಾ ಕ್ರಮ ನೆರವಾಗಲಿದೆ. ಬರುವ ದಿನಗಳಲ್ಲಿ ಇನ್ನಷ್ಟು ಈ ರೀತಿಯ ಕಾರ್ಯಕ್ರಮಗಳನ್ನ ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Stock Market: ಚೇತರಿಸಿಕೊಂಡ ಷೇರುಪೇಟೆ- ಸೆನ್ಸೆಕ್ಸ್‌ನಲ್ಲಿ 507.18 ಅಂಕ ಜಂಪ್‌

ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡು ವಿಧಿ ವಿಧಾನ ಪೂರ್ವಕವಾಗಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ರೇಣುಕಾ ಯಲ್ಲಮ್ಮಳ ಅನುಗ್ರಹಕ್ಕೆ ಪಾತ್ರರಾದರು.