Sunday, 15th December 2024

ಓಲಾ, ಉಬರ್, ರ್‍ಯಾಪಿಡೋ ಅಪ್ಲಿಕೇಶನ್‌ಗಳ ನಿಷೇಧ: ಸರ್ಕಾರಕ್ಕೆ 7 ದಿನಗಳ ಗಡುವು

ಬೆಂಗಳೂರು: ಓಲಾ, ಉಬರ್ ಮತ್ತು ರ್‍ಯಾಪಿಡೋದಂತಹ ಅಗ್ರಿಗೇಟರ್‌ಗಳ ಮೂಲಕ ಚಲಿಸುವ ಆಟೋ ರಿಕ್ಷಾ ಗಳ ಮೇಲೆ ಸಾರಿಗೆ ಇಲಾಖೆ ಜಪ್ತಿ ಮಾಡಿದ್ದ ಒಂದು ದಿನದ ನಂತರ ಆಟೋ ರಿಕ್ಷಾ ಚಾಲಕರ ಒಕ್ಕೂಟಗಳ ಜಂಟಿ ಸಮಿತಿಯು ಎಲ್ಲಾ ಅಪ್ಲಿಕೇಶನ್‌ಗಳನ್ನು ನಿಷೇಧಿಸುವಂತೆ ಕೋರಿ ಸರ್ಕಾರಕ್ಕೆ 7 ದಿನಗಳ ಗಡುವನ್ನು ನಿಗದಿ ಪಡಿಸಿದೆ.

ಮಂಗಳವಾರ 13 ಆಟೋ ರಿಕ್ಷಾ ಯೂನಿಯನ್‌ಗಳು ಮತ್ತು ಸಂಘಗಳ ಮುಖಂಡರು ಕಳೆದ ಏಳು ವರ್ಷಗಳಿಂದ ಅಗ್ರಿಗೇಟರ್‌ಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ. ಚಾಲಕರು ಮತ್ತು ಪ್ರಯಾಣಿಕರಿಬ್ಬರಿಂದಲೂ ಲೂಟಿ ಮಾಡುತ್ತಿದ್ದಾರೆ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಕ್ಯಾಬ್ ಅಗ್ರಿಗೇಟರ್‌ಗಳೊಂದಿಗೆ ಕೈಜೋಡಿಸಿದ್ದಾರೆ ಎಂದು ಹೇಳಿದರು.

ಅನೇಕರು ಕೇರಳ ಸರ್ಕಾರದ ಮಲ್ಟಿಮೋಡಲ್ ಅಪ್ಲಿಕೇಶನ್ ಅನ್ನು ಉಲ್ಲೇಖಿಸಿದ್ದು, ಪ್ರಯಾಣಿಕರಿಗೆ ಮತ್ತು ಚಾಲಕರಿಗೆ ಸಹಾಯ ಮಾಡಲು ಕರ್ನಾ ಟಕವು ಇದೇ ರೀತಿಯ ಅಪ್ಲಿಕೇಶನ್‌ನೊಂದಿಗೆ ಬರಬೇಕೆಂದು ಒತ್ತಾಯಿಸಿದರು.

ಮುಂದಿನ ಏಳು ದಿನಗಳಲ್ಲಿ ಎಲ್ಲಾ ಅಪ್ಲಿಕೇಶನ್‌ಗಳನ್ನು ಸರ್ಕಾರ ನಿಷೇಧಿಸಬೇಕು. ಕ್ರಮ ಕೈಗೊಳ್ಳದಿದ್ದರೆ ಸಾರಿಗೆ ಸಚಿವರಿಗೆ ಘೇರಾವ್ ಮಾಡುತ್ತೇವೆ. ಪ್ರಯಾಣಿಕರು ಮತ್ತು ಚಾಲಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ನಾವು ಮುಷ್ಕರಕ್ಕೆ ಕರೆ ನೀಡುತ್ತಿಲ್ಲ ಎಂದು ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಒಕ್ಕೂಟದ ಅಧ್ಯಕ್ಷ ಎಂ.ಮಂಜುನಾಥ್ ಹೇಳಿದರು.