ಬೆಂಗಳೂರು: ಬೆಂಗಳೂರು ಮೂಲದ ಬೈಜುಸ್ ಸಂಸ್ಥೆ ಇದೀಗ ಉದ್ಯೋಗ ಕಡಿತಕ್ಕೆ ಆಲೋಚಿಸುತ್ತಿದೆ ಎಂಬಂ ತಹ ಸುದ್ದಿ ಪ್ರಕಟವಾಗಿದೆ.
ಬೈಜುಸ್ ಸಂಸ್ಥೆ 1000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕುವ (Layoff) ಸಾಧ್ಯತೆ ಇದೆ. ಈ ಬಗ್ಗೆ ಬೈಜುಸ್ ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಹಿಂದೆ ಒಂದೆರಡು ಬಾರಿ ಬೈಜುಸ್ ಸಂಸ್ಥೆ ತನ್ನ ಕೆಲ ಉದ್ಯೋಗಿಗಳನ್ನು ಲೇ ಆಫ್ ಮಾಡಿತ್ತು. ಜನವರಿ ತಿಂಗಳಲ್ಲೂ 1,000 ಮಂದಿಯನ್ನು ಬೈಜುಸ್ ಆಡಳಿತ ಮನೆಗೆ ಕಳುಹಿಸಿತ್ತು.
ಲೇ ಆಫ್ ಆಗುತ್ತಿರುವವರಲ್ಲಿ ಬೈಜುಸ್ನ ಸೇಲ್ಸ್ ವಿಭಾಗದಲ್ಲಿರುವವರು ಮತ್ತು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಇರಲಿದ್ದಾರೆ. ಈ ಹಿಂದೆ ನಡೆದ ಲೇ ಆಫ್ನಲ್ಲಿ ಕಂಟೆಂಟ್, ಮೀಡಿಯಾ, ಟೆಕ್ನಾಲಜಿ ಮತ್ತು ಪ್ರಾಡಕ್ಟ್ ಟೀಮ್ಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಬಾಧೆ ಯಾಗಿತ್ತು. ವರ್ಷಕ್ಕೆ ಒಂದು ಕೋಟಿ ರೂಗೂ ಹೆಚ್ಚು ಸಂಬಳ ಪಡೆಯುತ್ತಿದ್ದ ಸೀನಿಯರ್ ವೈಸ್ ಪ್ರೆಸಿಡೆಂಟ್ಗಳು ಸೇರಿದಂತೆ ಹಲವು ಉನ್ನತ ಮಟ್ಟದ ಅಧಿಕಾರಿಗಳನ್ನು ಕೆಲಸದಿಂದ ತೆಗೆಯಲಾಗಿತ್ತು.
ಭಾರತದ ಮೊದಲ ಹಾಗೂ ಅಗ್ರಗಣ್ಯ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಎನಿಸಿರುವ ಬೈಜುಸ್ ಹಣಕಾಸು ಬಿಕ್ಕಟ್ಟಿಗೆ ಸಿಲುಕಿರುವುದರಿಂದ ಉದ್ಯೋಗಕಡಿತ ಅನಿವಾರ್ಯವೂ ಎನಿಸಿದೆ.