Sunday, 15th December 2024

Ganesh chaturthi: ಗಣೇಶ ಹಬ್ಬದ ಪ್ರಸಾದಕ್ಕೆ FSSAI ಅನುಮತಿ ಕಡ್ಡಾಯ; ಹಿಂದುಗಳ ಆಚರಣೆಗೆ ಹುಳಿ ಹಿಂಡಿದ ಬಿಬಿಎಂಪಿ!

Ganesh chaturthi

ಬೆಂಗಳೂರು: ಅನೇಕ ವರ್ಷಗಳಿಂದ ಹಿಂದು ಸಮಾಜ ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಗಣೇಶೋತ್ಸವವನ್ನು (Ganesh chaturthi) ಆಚರಿಸುತ್ತಾ ಬಂದಿದೆ. ಈ ಮೂಲಕ ಇಡೀ ಸಮಾಜ ಯಾವುದೇ ಭೇದವಿಲ್ಲದೆ ಒಂದಾಗುತ್ತದೆ. ಈ ಗಣೇಶೋತ್ಸವ ಪೆಂಡಾಲುಗಳಲ್ಲಿ ತಲೆತಲಾಂತರಗಳಿಂದ ನಮ್ಮ ಬಂಧು ಮಿತ್ರರಿಗೆ ಪ್ರಸಾದ (Prasadam) ಹಂಚುವುದು, ಅನ್ನ ಸಂತರ್ಪಣೆಯಂತಹ ಪುಣ್ಯಕಾರ್ಯಗಳನ್ನು ಮಾಡಲಾಗುತ್ತದೆ. ಈ ವೇಳೆ ಪೆಂಡಾಲುಗಳಲ್ಲಿ ಪ್ರಸಾದ ತಯಾರಿಸುವ ವ್ಯಕ್ತಿ FSSAI ಪ್ರಮಾಣಪತ್ರ ಪಡೆದಿರಬೇಕೆಂಬ ಕಡ್ಡಾಯ ಆದೇಶ ಜಾರಿಗೊಳಿಸಿ ಬಿಬಿಎಂಪಿ ಈ ಪುಣ್ಯಕಾರ್ಯದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದೆ ಎಂದು ಹಿಂದು ಜನಜಾಗೃತಿ ಸಮಿತಿ ಆಕ್ರೋಶ ಹೊರಹಾಕಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಹಿಂದು ಜನಜಾಗೃತಿ ಸಮಿತಿ ಸಮನ್ವಯಕ ಶರತ್ ಕುಮಾರ್, ಅನೇಕ ಕಡೆಗಳಲ್ಲಿ ಗಣೇಶ ಭಕ್ತರು ಅತ್ಯಂತ ಶ್ರದ್ಧೆ ಭಕ್ತಿಯಿಂದ ತಮ್ಮ ತಮ್ಮ ಮನೆಗಳಲ್ಲಿ ಪ್ರಸಾದದ ತಯಾರಿ ಮಾಡಿ ಅದನ್ನು ಪೆಂಡಾಲುಗಳಲ್ಲಿ ಇತರರಿಗೆ ಹಂಚುತ್ತಾರೆ. ಹೀಗಿರುವಾಗ ಅಂಥವರು FSSAI ಸರ್ಟಿಫಿಕೇಟ್ ಎಲ್ಲಿಂದ ತರಬೇಕು?, ಇಫ್ತಾರ್ ಮತ್ತಿತರ ಸಂದರ್ಭದಲ್ಲಿ ಅಕ್ರಮವಾಗಿ ರಸ್ತೆ ಮಧ್ಯದಲ್ಲಿಯೇ ಅಡುಗೆ ಮಾಡಿ ವಿತರಣೆ ಮಾಡಲಾಗುತ್ತದೆ. ಇದರ ಗುಣಮಟ್ಟ ಪರಿಶೀಲನೆ ಬಗ್ಗೆ ಬಿಬಿಎಂಪಿ ಎಂದಾದರೂ ಪ್ರಶ್ನಿಸುವುದೇ ಎಂದು ಕಿಡಿಕಾರಿದ್ದಾರೆ.

ಅನೇಕ ವರ್ಷಗಳಿಂದ ಹಿಂದು ಸಮಾಜ ಈ ಪ್ರಸಾದ ಸೇವೆ ಮಾಡುತ್ತಾ ಬಂದಿದೆ. ಇದುವರೆಗೆ ಇದರ ಬಗ್ಗೆ ಹಿಂದು ಸಮಾಜದಲ್ಲಿ ಯಾವುದೇ ಆಕ್ಷೇಪವಿಲ್ಲದಿರುವಾಗ ಬಿಬಿಎಂಪಿಗೆ ಇದರಲ್ಲಿ ಮೂಗು ತೂರಿಸುವ ಆವಶ್ಯಕತೆ ಏನಿದೆ? ಕೇವಲ ಹಿಂದು ಹಬ್ಬಗಳ ಸಂದರ್ಭದಲ್ಲಿ ಇಂತಹ ಧೋರಣೆಗಳನ್ನು ತಂದು ಕಾಂಗ್ರೆಸ್ ಪುನಃ ತನ್ನ ಹಿಂದುದ್ವೇಷವನ್ನು ಎತ್ತಿ ಹಿಡಿದಿದ್ದಲ್ಲದೆ ಹಿಂದುಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನು ಹಿಂದು ಸಮಾಜ ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | Minister K N Rajanna: ಶ್ರೀ ವಿದ್ಯಾಗಣಪತಿ ಮಹಾಮಂಡಳಿ ಪೂಜಾ ಕಾರ್ಯಕ್ರಮ

ಗಣೇಶ ಚೌತಿಗೆ ಮಾತ್ರ ಯಾಕೆ, ಇಪ್ತಾರ್‌ ಕೂಟಕ್ಕೂ ನಿಯಮ ಮಾಡಲಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತರಾಟೆ

prahlad joshi ganesh chaturthi

ಹುಬ್ಬಳ್ಳಿ: ಗಣೇಶ ಚತುರ್ಥಿಯ (Ganesh Chaturthi) ಸಂದರ್ಭದ ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪ್ರಸಾದ ಸಿದ್ಧಪಡಿಸಲು ಆಹಾರ ಸುರಕ್ಷತಾ ಇಲಾಖೆ ಪರವಾನಿಗೆ (ಎಫ್‌ಎಸ್‌ಎಸ್‌ಎಐ – FSSAI) ಪಡೆದವರೇ ಆಗಬೇಕು ಎಂದಿರುವ ರಾಜ್ಯ ಸರ್ಕಾರದ ಆದೇಶಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Prahlad Joshi) ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯ ಆಹಾರ ಇಲಾಖೆ ಹುಚ್ಚರ ರೀತಿಯಲ್ಲಿ ಇಂಥ ಆದೇಶ ಹೊರಡಿಸಿದೆ ಅಷ್ಟೇ ಎಂದು ಟೀಕಿಸಿದರು. ಎಂಪ್ಯಾನಲ್ ಅದವರಿಂದಲೇ ಪ್ರಸಾದ ತಯಾರಿಸಬೇಕು ಎಂದಿರುವ ರಾಜ್ಯ ಸರ್ಕಾರದ ಈ ಸೂಚನೆ ಸರಿಯಲ್ಲ ಎಂದು ಖಂಡಿಸಿದರು

ಗಣೇಶ ಹಬ್ಬದ ವೇಳೆ ದೇಶಾದ್ಯಂತ, ರಾಜ್ಯಾದ್ಯಂತ ಬಹಳ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಆಹಾರ ಸುರಕ್ಷಾ ಕ್ರಮ ಕೈಗೊಳ್ಳುವುದು ಸರಿ. ಆದರೆ, ಹೀಗೆ ಹುಚ್ಚರ ರೀತಿ ಅಲ್ಲ ಎಂದು ರಾಜ್ಯ ಸರ್ಕಾರವನ್ನು ತಿವಿದರು.

ರಾಜ್ಯದಲ್ಲಿ ಹಿಂದೂ ಹಬ್ಬಕ್ಕೆ ತೊಂದರೆ ಕೊಡಲೆಂದೇ ರಾಜ್ಯ ಸರ್ಕಾರದಿಂದ ಇಂಥ ಆದೇಶ ಹೊರ ಬಿದ್ದಿದೆ. ಗಣೇಶ ಪ್ರತಿಷ್ಠಾಪನೆ ಮಾಡುವ ಸಂಘಟಕರು ಇದಕ್ಕೆ ಕಿವಿಗೊಡಬೇಕಿಲ್ಲ ಎಂದು ಹೇಳಿದರು. ಎಲ್ಲಾದರೂ ದುರುದ್ದೇಶದಿಂದ ಪ್ರಸಾದದಲ್ಲಿ ವಿಷ ಬೆರೆಸುವಂತ ಪ್ರಕರಣ ನಡೆದರೆ ಕ್ರಿಮಿನಲ್ ಕೇಸ್ ದಾಖಲಿಸಲಿ. ಆದರೆ ಸರ್ಕಾರವೇ ಹೀಗೆ ದುರುದ್ದೇಶ ಇಟ್ಟುಕೊಂಡು ಆದೇಶ ಹೊರಡಿಸಿದರೆ ಹೇಗೆ ಎಂದು ಪ್ರಶ್ನಿಸಿದರು.

ಹಿಂದೂಗಳ ಹಬ್ಬ ಬಂದಾಗ ಮಾತ್ರ ಆಹಾರ ಸುರಕ್ಷತಾ ನಿಯಮ ಇರೋದು ನೆನಪಾಗುತ್ತದೆಯೇ? ಎಂದ ಸಚಿವ ಜೋಶಿ, ಇಫ್ತಿಯಾರ್ ಕೂಟ ಇದ್ದಾಗ ಇಂಥ ಆದೇಶ ಹೊರಡಿಸಿ ನೋಡೋಣ ಎಂದು ಸವಾಲು ಹಾಕಿದರು.

ಈ ಸುದ್ದಿ ಓದಿ: Prahlad Joshi: ಲೋಕಸಭೆ, ವಿಧಾನಸಭೆ ನಮಾಜ್ ಮಾಡುವ ಸ್ಥಳವೇ? ಪ್ರಹ್ಲಾದ್‌ ಜೋಶಿ ಕಿಡಿ

ಗಣೇಶ ಪೆಂಡಾಲ್ ಗಳಲ್ಲಿ ಪ್ರಸಾದ ತಯಾರಿಕೆ ವೇಳೆ ಸ್ವಚ್ಛತೆ, ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದ ಸಚಿವರು, ಅಗತ್ಯ ಬಿದ್ದರೆ ರಾಜ್ಯ ಸರ್ಕಾರದ ಈ ಆದೇಶ ಧಿಕ್ಕರಿಸಿ ಎಂದು ಕರೆ ಕೊಟ್ಟರು.