Wednesday, 11th December 2024

ಯುವತಿ ಮದುವೆಗೆ ಖಾಕಿ ಭದ್ರತೆ

ಬೆಂಗಳೂರು: ರೌಡಿ ಬೆದರಿಕೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಮೇ 9 ಮತ್ತು 10ರಂದು ನಡೆಯಲಿರುವ ಯುವತಿ ಯೊಬ್ಬಳ ಮದುವೆಗೆ ಭದ್ರತೆ ಕಲ್ಪಿಸುವಂತೆ ಕರ್ನಾಟಕ ಹೈಕೋರ್ಟ್ ಕೆಂಗೇರಿ ಪೊಲೀಸರಿಗೆ ನಿರ್ದೇಶಿಸಿದೆ.

ಯುವತಿಯೊಬ್ಬರು ತನ್ನ ಮದುವೆಗೆ ಭದ್ರತೆ ಕಲ್ಪಿಸಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್‌.ಎಸ್‌.ಸಂಜಯ ಗೌಡ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ. ಅರ್ಜಿದಾರೆಯ ಮದುವೆ ನಗರದ ಹೋಟೆಲ್‌ವೊಂದರಲ್ಲಿ ಮೇ 9 ಮತ್ತು 10ರಂದು ನಡೆಯಲಿದೆ.

ತಂದೆಯ ವ್ಯಾಪಾರದಲ್ಲಿ ಪಾಲುದಾರನಾದ ಕೆ. ಶಿವರಾಜ್‌ ಗೌಡ, ಹಣಕಾಸು ವಿವಾದವನ್ನು ಮುಂದಿಟ್ಟುಕೊಂಡು ತನ್ನ ಮದುವೆ ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ಆತಂಕ ವ್ಯಕ್ತಪಡಿಸಿದ್ದಾರೆ.