Sunday, 5th January 2025

Robin Uthappa: ವಂಚನೆ ಆರೋಪ; ರಾಬಿನ್ ಉತ್ತಪ್ಪ ವಿರುದ್ಧ ಅರೆಸ್ಟ್ ವಾರಂಟ್ ಜಾರಿ

Robin Uthappa

ಬೆಂಗಳೂರು: ವಂಚನೆಯ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಟೀಂ ಇಂಡಿಯಾ (Team India)ದ ಮಾಜಿ ಕ್ರಿಕೆಟಿಗ, ಕನ್ನಡಿಗ ರಾಬಿನ್ ಉತ್ತಪ್ಪ (Robin Uthappa) ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಅರೆಸ್ಟ್‌ ವಾರೆಂಟ್‌ ಜಾರಿ ಮಾಡುವಂತೆ ಮಾಡುವಂತೆ ಪಿಎಫ್‌ಒ ಪ್ರಾದೇಶಿಕ ಆಯುಕ್ತ ಷಡಾಕ್ಷರಿ ಗೋಪಾಲ ರೆಡ್ಡಿ ಅವರು ಪುಲಿಕೇಶಿ ನಗರ ಪೊಲೀಸರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸೆಂಚುರಿಸ್ ಲೈಫ್ ಸ್ಟೈಲ್ ಬ್ರಾಂಡ್ ಪ್ರೈವೆಟ್ ಲಿಮಿಟೆಡ್ ಎಂಬ ಖಾಸಗಿ ಕಂಪೆನಿ ನಡೆಸುತ್ತಿದ್ದ ರಾಬಿನ್ ಉತ್ತಪ್ಪ ಅವರು ಇದರಲ್ಲಿನ ಹಲವು ಉದ್ಯೋಗಿಗಳಿಗೆ ಪಿಎಫ್ ಹಣ ಪಾವತಿಸದೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

ಏನಿದು ಪ್ರಕರಣ?

ರಾಬಿನ್ ಉತ್ತಪ್ಪ ಒಡೆತನದ ಸೆಂಚುರಿಸ್ ಲೈಫ್ ಸ್ಟೈಲ್ ಬ್ರಾಂಡ್ ಪ್ರೈವೆಟ್ ಲಿಮಿಟೆಡ್ ಕಂಪೆನಿಯು ಉದ್ಯೋಗಿಗಳ ಸಂಬಳದಲ್ಲಿ ಪಿಎಫ್ ಹಣ ಕಟ್ ಮಾಡಿದ್ದರೂ, ಅವರ ಖಾತೆಗೆ ಹಾಕದೆ 23 ಲಕ್ಷ ರೂ. ವಂಚಿಸಿದೆ ಎಂದು ಆರೋಪಿಸಲಾಗಿದೆ. ಹೀಗಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಷಡಾಕ್ಷರಿ ಗೋಪಾಲ ರೆಡ್ಡಿ ಅವರು ಪೊಲೀಸರಿಗೆ ಪತ್ರ ಬರೆದಿದ್ದಾರೆ. ಸದ್ಯ ರಾಬಿನ್ ಉತ್ತಪ್ಪ ತಮ್ಮ ಬೆಂಗಳೂರಿನ ಮನೆ ತೊರೆದು ದುಬೈಯಲ್ಲಿ ವಾಸವಾಗಿದ್ದಾರೆ. ಹೀಗಾಗಿ ಅವರಿಗೆ ವಾರೆಂಟ್ ಜಾರಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಈ ಪ್ರಕರಣ ಕುತೂಹಲ ಕೆರಳಿಸಿದೆ.

ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರು 2022ರಲ್ಲಿ ಎಲ್ಲ ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಬಳಿಕ ಅವರು ದುಬೈಯಲ್ಲಿ ವಾಸವಾಗಿದ್ದಾರೆ. ಕೊಡಗು ಮೂಲದ ಅವರು 2006ರಲ್ಲಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದರ್ಪಣೆ ಮಾಡಿ ವಿಕೆಟ್ ಕೀಪರ್ ಆಗಿ ಟೀಂ ಇಂಡಿಯಾದಲ್ಲಿ ಮಿಂಚಿದ್ದರು. 2007ರ ಟಿ20 ವಿಶ್ವಕಪ್ ಚಾಂಪಿಯನ್ ತಂಡದ ಸದಸ್ಯರಾಗಿದ್ದರು. 2015ರ ಬಳಿಕ ಟೀಂ ಇಂಡಿಯಾದಲ್ಲಿ ಅವಕಾಶ ವಂಚಿತರಾಗಿದ್ದ ರಾಬಿನ್ ಉತ್ತಪ್ಪ, ಐಪಿಎಲ್ ಹಾಗೂ ರಣಜಿ ಕ್ರಿಕೆಟ್ ಆಡುತ್ತಿದ್ದರು. ಟೀಮ್ ಇಂಡಿಯಾ ಪರ 46 ಏಕದಿನ ಪಂದ್ಯಗಳಲ್ಲಿ 42 ಇನಿಂಗ್ಸ್ ಆಡಿರುವ ರಾಬಿನ್ ಉತ್ತಪ್ಪ ಒಟ್ಟು 934 ರನ್ ಕಲೆ ಹಾಕಿದ್ದಾರೆ. 13 ಟಿ20 ಪಂದ್ಯಗಳಲ್ಲಿ ಅವರು 12 ಇನಿಂಗ್ಸ್​ಗಳಿಂದ 249 ರನ್ ಗಳಿಸಿದ್ದಾರೆ. 2009–2010ರಲ್ಲಿ ಅವರು ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಿದ್ದರು.

ಈ ಸುದ್ದಿಯನ್ನೂ ಓದಿ: IPL 2025: ʻಕೊಹ್ಲಿ-ಸಾಲ್ಟ್‌ ಓಪನರ್ಸ್‌ʼ-ತನ್ನ ನೆಚ್ಚಿನ ಆರ್‌ಸಿಬಿ ಪ್ಲೇಯಿಂಗ್‌ XI ಆರಿಸಿದ ರಾಬಿನ್‌ ಉತ್ತಪ್ಪ!