Sunday, 15th December 2024

Self Harming: ಪತ್ನಿ- 2 ಮಕ್ಕಳಿಗೆ ವಿಷ ನೀಡಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಕ್ಯಾಬ್ ಡ್ರೈವರ್

self harming

ಬೆಂಗಳೂರು: ರಾಜಧಾನಿಯಲ್ಲಿ (Bengaluru Crime News) ಕಲಬುರಗಿ ಮೂಲದ ಕ್ಯಾಬ್ ಚಾಲಕನೊಬ್ಬ (Cab Driver) ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ವಿಷ ಹಾಕಿ ಕೊಂದು (Poisoning) ತಾನೂ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾನೆ. ಒಂದೇ ಕುಟುಂಬದ ನಾಲ್ವರ ಸಾವಿನ ದುರಂತ ಪರಿಸರದಲ್ಲಿ ಶೋಕದ ಛಾಯೆ ಮೂಡಿಸಿದೆ.

ಕಲಬುರಗಿ ಮೂಲದ ಅವಿನಾಶ್ (38) ಕುಟುಂಬದೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಕ್ಯಾಬ್‌ ಚಾಲಕ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತರಾದ ಇನ್ನಿತರರನ್ನು ಪತ್ನಿ ಮಮತಾ (30) ಹಾಗೂ ಮಗಳಾದ ಅಧೀರ್ (5) ಮತ್ತು ಅಣ್ಣಯ್ಯ (2.5) ಎಂದು ಗುರುತಿಸಲಾಗಿದೆ. ಮೊದಲಿಗೆ ಮಕ್ಕಳನ್ನು ವಿಷ ನೀಡಿ ಕೊಂದು ಆ ಬಳಿಕ ಪತಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿಯ ಯಡಿಯೂರಪ್ಪ ನಗರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ಅವಿನಾಶ್ ಕಲಬುರಗಿ ಮೂಲದವರಾಗಿದ್ದು, ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಇಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಸಿಂಗನಾಯಕನಹಳ್ಳಿಯ ನರಸಪ್ಪ ಎನ್ನುವವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು. ಇಂದು ಬೆಳಗ್ಗೆ ಎಷ್ಟೇ ಹೊತ್ತಾದರೂ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಮನೆ ಮಾಲೀಕರು ಕಿಟಕಿಯಿಂದ ನೋಡಿದಾಗ ಪತಿ ಪತ್ನಿ ನೇಣಿಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಕೂಡಲೇ ಚಾಲಕನ ಸಹೋದರನಿಗೆ ಮಾಹಿತಿ ನೀಡಲಾಗಿದೆ.

ಸ್ಥಳಕ್ಕೆ ಬಂದ ಅವಿನಾಶ್‌ನ ಸಹೋದರ ಉದಯ್, ಮನೆಯಲ್ಲಿ ಎಲ್ಲರೂ ಮೃತಪಟ್ಟಿರುವುದನ್ನು ನೋಡಿ ಶಾಕ್ ಆಗಿದ್ದಾರೆ. ಕುಟುಂಬದವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಳೆದ ರಾತ್ರಿ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದುಬಂದಿದೆ. ಕೂಡಲೇ ರಾಜಾನುಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ರಾಜಾನುಕುಂಟೆ ಪೊಲೀಸರು ಭೇಟಿ‌ ಪರಿಶೀಲನೆ ಮಾಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ಅವರು, ಕಲಬುರಗಿ ಮೂಲದ ವ್ಯಕ್ತಿ ಕಳೆದ 5 ರಿಂದ 6 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ವಾಸವಾಗಿದ್ದರು. ವೃತ್ತಿಯಲ್ಲಿ ಓಲಾ, ಉಬರ್ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಸಹೋದರ ಬಂದು ಅಣ್ಣ ಫೋನ್ ತೆಗೆಯುತ್ತಿಲ್ಲ ಎಂದು ಬಾಗಿಲು ತೆರೆದಾಗ ಅಣ್ಣ ನೇಣಿಗೆ ಶರಣಾಗಿದ್ದು, ಇನ್ನು ಅತ್ತಿಗೆ ಮತ್ತು ಮಕ್ಕಳನ್ನು ಎಬ್ಬಿಸಲು ಮುಂದಾದಾಗ ಅವರೂ ಕೂಡ ಮೃತಪಟ್ಟಿರುವುದು ಗೊತ್ತಾಗಿದೆ. ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ನಾವು ಬಂದು ಸ್ಥಳ ಪರಿಶೀಲನೆ ಮಾಡಿದ್ದು, ಯಾವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಇನ್ನು ಆತ್ಮಹತ್ಯೆ ಮತ್ತು ಹೆಂಡತಿ, ಮಕ್ಕಳ ಕೊಲೆ ಬಗ್ಗೆ ಎರಡು ಕೇಸು ದಾಖಲಿಸಿ ತನಿಖೆ ಮಾಡಲಾಗುತ್ತದೆ. ಅವರ ಸಂಬಂಧಿಕರಿಂದ ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: Self Harming: ಲಿವ್ ಇನ್ ರಿಲೇಶನ್‌ನಲ್ಲಿದ್ದ ನಟಿ ಮದುವೆಗೆ ನಿರಾಕರಣೆ; ಆತ್ಮಹತ್ಯೆಗೆ ಶರಣಾದ ಯುವಕ