ಬೆಂಗಳೂರು: ‘ಮಾಯಾಮೃಗ’ ಮಧ್ಯಾಹ್ನ ಕಳೆದು ಸಂಜೆ ಆಗುತ್ತಿರುವ ಹಾಗೆ ಜನ ಟೀ ಕುಡಿಯೋದನ್ನಾದರೂ ಮರೆತಾರು, ಮಾಯಾಮೃಗ ಸೀರಿಯಲ್ ಮಿಸ್ ಮಾಡಲ್ಲ ಅನ್ನೋ ಕಾಲವೊಂದಿತ್ತು. ಸೀಮಿತ ಧಾರಾವಾಹಿಗಳಷ್ಟೇ ಇದ್ದ ಆ ದಿನಗಳಲ್ಲಿ ಮನೆ ಮನೆಗಳಲ್ಲೂ ಸಂಜೆಯಾಗ್ತಿದ್ದ ಹಾಗೆ ‘ಮಯಾಮೃಗ ಮಾಯಾಮೃಗವೆಲ್ಲಿ… ‘ ಅನ್ನುವ ಶೀರ್ಷಿಕೆ ಗೀತೆಯ ಸೌಂಡ್. ಆಗಷ್ಟೇ ಶಾಲೆ ಮುಗಿಸಿ ಬಂದ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲಾ ವಯೋಮಿತಿಯ ಜನರನ್ನು ಟಿವಿ ಮುಂದೆ ಕೂರಿಸಿದ್ದ ಧಾರಾವಾಹಿ ಇದು. ಬದುಕಿನ ಕಷ್ಟ ಸುಖ, ಪರಂಪರೆ ಆಧುನಿಕತೆಯ ಮುಖಾಮುಖಿ, ಮಧ್ಯಮ ವರ್ಗ, ಮೇಲ್ಮಧ್ಯಮ ವರ್ಗದ ಜನರ ಮಾನಸಿಕ ತುಮುಲಗಳು ಇವನ್ನೆಲ್ಲ ಚಿಕ್ಕ ಮಕ್ಕಳಿಗೂ ಅರ್ಥ ಆಗೋ ಥರ ಕನ್ವೇ ಮಾಡುವಲ್ಲಿ ಟಿ ಎನ್ ಸೀತಾರಾಂ (TN Seetharam) ಗೆದ್ದಿದ್ದರು.
ಲಾಯರ್ ವೃತ್ತಿಯಲ್ಲಿ ಅಂಥಾ ಯಶಸ್ಸು ಸಾಧಿಸಲು ಸಾಧ್ಯವಾದಿದ್ದರೂ ಸೀರಿಯಲ್ನಲ್ಲಿ ಸಿಎಸ್ಪಿಯಾಗಿ ನುರಿತ ಲಾಯರ್ ಪಾತ್ರದಲ್ಲಿ ಮಿಂಚಿದ ಅವರನ್ನು ಒಂದಿಡೀ ಜನರೇಶನ್ ಇಂದು ಮಿಸ್ ಮಾಡುತ್ತಿದೆ. ತಮ್ಮ ಅಭಿಮಾನಿ ಬಳಗಕ್ಕೆ ಅಂದು ನಿರಾಸೆ ಮಾಡದಿದ್ದ ಟಿಎನ್ಎಸ್ ಇದೀಗ ಮತ್ತೆ ಲಾಯರ್ ಆಗಿ ಹೊಸ ಧಾರಾವಾಹಿ ಮೂಲಕ ವೀಕ್ಷಕರಿಗೆ ಮನೋರಂಜನೆ ನೀಡುವ ಜೊತೆಗೆ ಚಿಂತನೆಗೆ ಹಚ್ಚುವುದಕ್ಕೂ ಸಜ್ಜಾಗುತ್ತಿದ್ದಾರೆ.
‘ಮಾಯಾಮೃಗ’ ಧಾರಾವಾಹಿಯನ್ನು ಟಿ. ಎನ್. ಸೀತಾರಾಮ್ ಜೊತೆಗೆ ಪಿ. ಶೇಷಾದ್ರಿ ಮತ್ತು ನಾಗೇಂದ್ರ ಶಾ ನಿರ್ದೇಶಿಸಿದ್ದರು. ಇದನ್ನು ಮೊದಲ ಬಾರಿಗೆ ಡಿಡಿ ಚಂದನ ಟಿವಿ ವಾಹಿನಿಯಲ್ಲಿ 1998 ರಲ್ಲಿ ಪ್ರಸಾರ ಮಾಡಲಾಯಿತು. ಮತ್ತು ಇದು ಮಾರ್ಚ್ 10, 2014 ರಂದು ಝೀ ಕನ್ನಡ ದೂರದರ್ಶನ ವಾಹಿನಿಯಲ್ಲಿ ಮತ್ತೆ ಪ್ರಸಾರವಾಗಿತ್ತು. ಅಮೇಲೆ ಭೂಮಿಕಾ ಓಟಿಟಿಯಲ್ಲಿ ಬಿಡುಗಡೆಯಾಯ್ತು. ಜನ ಅಂದು ನೋಡಿದ್ದ ನೆನಪಲ್ಲೇ ಈ ಸೀರಿಯಲ್ನ ಮತ್ತೆ ಮತ್ತೆ ನೋಡಿದರು. ಆದರೆ ಅದದನ್ನೇ ಎಷ್ಟು ಸಲ ನೋಡಲು ಸಾಧ್ಯ, ಹಾಗಾಗಿ ಹೊಸ ಹಾಗೂ ನೂತನ ಕಥಾಹಂದರ ಇರುವ ವಧು(Vadhu) ಸೀರಿಯಲ್(Serials) ಮುಖಾಂತರ ಸಿಎಸ್ ಪಿ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ.
ಪರಮೇಶ್ವರ್ ಗುಂಡ್ಕಲ್ ಪ್ರೊಡಕ್ಷನ್ಹೌಸ್ ನಿರ್ಮಾಣದಲ್ಲಿ ಈ ಹೊಚ್ಚ ಹೊಸ ಧಾರಾವಾಹಿ ಬರುತ್ತಿದ್ದು ಇದರಲ್ಲಿ ಟಿ.ಎನ್.ಸೀತಾರಾಮ್ ಅವರು ಅಭಿನಯ ಮಾಡುತ್ತಿದ್ದಾರೆ. ಸೀರಿಯಲ್ಗಳಲ್ಲಿ ವಕೀಲರ(Lawyer) ಪಾತ್ರದ ಮೂಲಕವೇ ಟಿ.ಎನ್.ಸೀತಾರಾಮ್ ಅವರು ಖ್ಯಾತಿ ಪಡೆದಿದ್ದ ಇವರು ಈಗ ಮತ್ತೆ ಸಿಎಸ್ಪಿ ಪಾತ್ರದಲ್ಲಿ ಮಿಂಚಲಿದ್ದು, ವಾಹಿನಿಯಲ್ಲಿ ಈ ಧಾರಾವಾಹಿಯ ಪ್ರೋಮೋ ಕೂಡ ರಿಲೀಸ್ ಆಗಿದೆ.
ಇನ್ನು ಈ ಕುರಿತು ಟಿ ಎನ್ ಸೀತಾರಾಮ್ ಅವರ ಫೇಸ್ಬುಕ್ ಪೋಸ್ಟ್(Facebook Psot) ಹಂಚಿಕೊಂಡಿದ್ದು,
‘’ಪ್ರೀತಿಯ ಗೆಳೆಯ ಕಲರ್ಸ್ ಮುಖ್ಯರಾದ ಪರಮ್ ಕೆಲ ದಿನಗಳ ಹಿಂದೆ ಫೋನ್ ಮಾಡಿ ನನ್ನ ಸ್ವಂತ ಧಾರಾವಾಹಿ ಶುರು ಮಾಡುತ್ತಿದ್ದೇನೆ..ನೀವು ಪಾತ್ರ ಮಾಡಬೇಕು ಎಂದರು. ಏನು ಕಥೆ, ಏನು ಪಾತ್ರ ಎಂದೆ. ಕೋರ್ಟ್ ಕಥೆ. ನಿಮ್ಮದು ಸಿ.ಎಸ್.ಪಿ. ಪಾತ್ರ ಎಂದರು. ಒಂದು ಕ್ಷಣ ನನ್ನ ಮನಸ್ಸು ಆಕಾಶದಲ್ಲಿ ಹಾರಿ ವಾಪಸ್ ಬಂತು. ನನ್ನ ಇಷ್ಟದ ಪಾತ್ರ, ತಿಂಗಳಗೊಮ್ಮೆ ಕನಸಿನಲ್ಲಿ ಬರುವ ಪಾತ್ರ. ಎರಡು ತಿಂಗಳಿಗೊಮ್ಮೆ ಕನಸಿನಲ್ಲಿ ಪಾಟೀ ಸವಾಲು ಬರುತ್ತದೆ. ಅರ್ಧ ಸೆಕೆಂಡಿನಲ್ಲಿ ಹೂ ಎಂದೆ. ಮೊನ್ನೆ ಗುರುವಾರ ಪ್ರೊಮೋ ಶೂಟಿಂಗ್ ಆಗಿಯೇ ಹೋಯಿತು. ಎಷ್ಟು ದಿನ ಬರುತ್ತಾರೆ ಎಂದು ಗೊತ್ತಿಲ್ಲ. ಕೆಲವು ದಿನವಾದರೂ ಸಿ.ಎಸ್.ಪಿ ನಿಮ್ಮ ಮುಂದೆ ಬರುತ್ತಾನೆ’’ ಎಂದು ಫೇಸ್ಬುಕ್ನಲ್ಲಿ ಟಿ ಎನ್ ಸೀತಾರಾಮ್ ಬರೆದುಕೊಂಡಿದ್ದಾರೆ.
ಈ ಹಿಂದೆ ಕನ್ನಡ ಕಿರುತೆರೆಯಲ್ಲಿ ವೀಕ್ಷಕರ ಮನಗೆದ್ದಿದ್ದ ‘ಮನ್ವಂತರ’, ‘ಮುಕ್ತ’, ‘ಮುಕ್ತ ಮುಕ್ತ’, ‘ಮತ್ತೆ ಮಾಯಾಮೃಗ’, ‘ಮಗಳು ಜಾನಕಿ’ ಧಾರಾವಾಹಿಗಳಲ್ಲಿ ಲಾಯರ್ ಸಿಎಸ್ಪಿ ಪಾತ್ರ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಇದೀಗ ಪರಮೇಶ್ವರ್ ಗುಂಡ್ಕಲ್ ಅವರ ಹೊಸ ಸೀರಿಯಲ್ನಲ್ಲೂ ಟಿ ಎನ್ ಸೀತಾರಾಮ್ ಲಾಯರ್ ಸಿಎಸ್ಪಿ ಆಗಿ ನಿಮ್ಮ ಮುಂದೆ ಬರಲಿದ್ದಾರೆ.
ಈ ಸುದ್ದಿಯನ್ನು ಓದಿ: Yearender 2024: ಈ ವರ್ಷ ಡಿವೋರ್ಸ್ ಪಡೆದು ನಾನೊಂದು ತೀರ, ನೀನೊಂದು ತೀರ ಎಂತಾದ ಸೆಲೆಬ್ರಿಟಿಗಳಿವರು