Saturday, 14th December 2024

ಟ್ವಿಟರ್​ ಅರ್ಜಿ ವಜಾ: 50 ಲಕ್ಷ ರೂ. ದಂಡ

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದ ಸಾಮಾಜಿಕ ಜಾಲತಾಣ ಕಂಪನಿ ಟ್ವಿಟರ್​ಗೆ ತೀವ್ರ ಹಿನ್ನಡೆಯಾಗಿದೆ. ಹೈಕೋರ್ಟ್​, 50 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ.

ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್​ ಅವರು, ‘ಟ್ವೀಟ್​ಗಳನ್ನು ತೆಗೆದುಹಾಕಿ, ಟ್ವಿಟರ್​ ಅಕೌಂಟ್​ ಗಳನ್ನು ಬ್ಲಾಕ್ ಮಾಡಿ ಎಂದು ಟ್ವಿಟರ್ ಕಂಪನಿಗೆ ಆದೇಶ ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ’ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿ ಗಡಿ ಭಾಗಗಳಲ್ಲಿ 2020ರ ಆಗಸ್ಟ್​ನಿಂದ 2021ರ ಡಿಸೆಂಬರ್​ವರೆಗೆ ಪ್ರತಿಭಟನೆ ನಡೆಸಿದ್ದರು. ಹಾಗೇ, 2020ರಿಂದ ಕೊವಿಡ್ 19 ಸಾಂಕ್ರಾಮಿಕವೂ ಪ್ರಾರಂಭವಾಯಿತು. ಈ ರೈತರ ಪ್ರತಿಭಟನೆ ಮತ್ತು ಕೊವಿಡ್ 19 ಬಗ್ಗೆ ಟ್ವಿಟರ್​​ನಲ್ಲಿ 2021ರಿಂದ 2022ರ ನಡುವೆ ಹಲವು ತಪ್ಪು ಮಾಹಿತಿಗಳು ಟ್ವೀಟ್ ಆಗಿದ್ದವು. ಕೆಲವು ಅಕೌಂಟ್​ಗಳಂತೂ ಬರೀ ಸುಳ್ಳು ವಿಷಯಗಳನ್ನೇ ಟ್ವೀಟ್ ಮಾಡಿದ್ದವು. ಫೇಕ್​ ನ್ಯೂಸ್​ಗಳನ್ನು ಹಬ್ಬಿಸು ತ್ತಿರುವ ಆರೋಪ ಕೇಳಿಬಂದಿತ್ತು.

ರೈತರ ಪ್ರತಿಭಟನೆ, ಕೊವಿಡ್ 19 ಬಗ್ಗೆ ಹೀಗೆ ಸದಾ ತಪ್ಪು ಮಾಹಿತಿ ನೀಡುತ್ತಿರುವ ಒಂದಷ್ಟು ಟ್ವಿಟರ್​ ಅಕೌಂಟ್​ಗಳನ್ನು ಬ್ಲಾಕ್ ಮಾಡುವಂತೆ ಮತ್ತು ಅಂಥ ಟ್ವೀಟ್​ಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಟ್ವಿಟರ್​ಗೆ ಸೂಚನೆ ನೀಡಿತ್ತು. ಆದರೆ ಟ್ವಿಟರ್  ಕೇಂದ್ರದ ಆದೇಶವನ್ನು ಪ್ರಶ್ನಿಸಿತ್ತು.