ಬೆಂಗಳೂರು: ಕುಂದ ಕನ್ನಡ ಭಾಷೆಯ ಮೇಲಿನ ಅಭಿಮಾನದಿಂದ ಕುಂದಾಪುರ ಮೂಲದ ಜನರು ವಿಶ್ವದ ಎಲ್ಲೆಡೆ ವಿಶ್ವ ಕುಂದಾಪ್ರ ಕನ್ನಡ ದಿನವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಆಸಾಡಿ ಅಮಾವಾಸ್ಯೆ ಪ್ರಯುಕ್ತ ಬೆಂಗಳೂರಿನ ವಿಜಯನಗರದ ಬಂಟರ ಸಂಘದ ಹಾಲಿನಲ್ಲಿ ವಿಶ್ವಕುಂದಾಪ್ರ ಕನ್ನಡ ದಿನಾಚರಣೆಯನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ.
ಸಂಜೆ ನಾಲ್ಕು ಗಂಟೆಯಿಂದ ಕುಂದಾಪ್ರ ಭಾಷಿ, ಬದ್ಕಿನ ಕುರಿತಾದ ಹಲವು ಕಾರ್ಯಕ್ರಮ ಗಳು ಆಯೋಜನೆಗೊಂಡಿದೆ. ವಿಶೇಷ ವಾಗಿ ಕುಂದಾಪುರ ಆಚಾರ-ಸಂಸ್ಕ್ರತಿ-ಆಚರಣೆ ಕುರಿತಾದ ಕುಂದಾಪುರ ಕಟ್ಕಟ್ಲೆ, ಕುಂದಾಪ್ರ ಗೀತಗಾಯನ, ಮನು ಹಂದಾಡಿ ಮಾತು, ಚೇತನ್ ನೈಲಾಡಿ ತಂಡದ ಹೆಂಗಸರ ಪಂಚಾಯ್ತಿ, ಕುಶಲವ ಯಕ್ಷಗಾನ, ಕಿರುಚಿತ್ರ ಬಿಡುಗಡೆ ಸೇರಿ ಹಲವು ಸಾಂಸ್ಕ್ರತಿಕ ಕಾರ್ಯಕ್ರಮಗಳ ರಸದೌತಣ ಇರಲಿದೆ.
ಕಾರ್ಯಕ್ರಮದಲ್ಲಿ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು, ಮಂದಾರ್ತಿ ಮೂಲದ ನಿರ್ದೇಶಕ ಯೋಗರಾಜ್ ಭಟ್, ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಜಯಪ್ರಕಾಶ್ ಹೆಗ್ಡೆ, ನಟ ಪ್ರಮೋದ್ ಶೆಟ್ಟಿ ಸೇರಿ ಹಲವರು ಉಪಸ್ಥಿತರಿರಲಿದ್ದಾರೆ. ಹೀಗಾಗಿ, ಈ ಕಾರ್ಯ ಕ್ರಮದಲ್ಲಿ ಎಲ್ಲಾ ಭಾಷಾಭಿಮಾನಿಗಳ ಬರುವಿಕೆಯ ನಿರೀಕ್ಷೆಯಲ್ಲಿ ಆಯೋಜಕರಿದ್ದಾರೆ.