Saturday, 4th January 2025

BGS: ಇಸ್ರೋ ಸ್ಪೇಡೆಕ್ಸ್ ಯೋಜನೆಯಲ್ಲಿ ಬಿಜಿಎಸ್ ಅರ್ಪಿತ್ ಪೇಲೋಡ್ ಭಾಗಿ

ಚಿಕ್ಕಬಳ್ಳಾಪುರ : ಬಾಹ್ಯಾಕಾಶ ಯಾತ್ರೆಯಲ್ಲಿ ಭಾರತ ಹೊಸ ಮೈಲಿಗಲ್ಲು ಸೃಷ್ಟಿಸಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಸ್ಪೇಡೆಕ್ಸ್ (ಸ್ಪೇಸ್ ಡಾಕಿಂಗ್ ಎಕ್ಸ್ ಪೆರಿಮೆಂಟ್) ಯೋಜನೆಯಲ್ಲಿ ನಮ್ಮ ಎಸ್.ಜೆ.ಸಿ.ಐ.ಟಿ ಯಲ್ಲಿ ವಿನ್ಯಾಸಗೊಳಿಸಿರುವ ಬಿಜಿಎಸ್ ಅರ್ಪಿತ್ ಪೇಲೋಡ್ ಕೂಡಾ ಭಾಗಿಯಾಗಿರುವುದು ಜಿಲ್ಲೆಯ ಕೀರ್ತಿಯನ್ನು ಇಮ್ಮಡಿಗೊಳಿಸಿದೆ.

ಇಸ್ರೋದ ಮಹತ್ವಾಕಾಂಕ್ಷಿ ‘ಸ್ಪೇಸ್ ಡಾಕಿಂಗ್’ ಯೋಜನೆಯಡಿ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ ರಾತ್ರಿ ಎರಡು ಉಪಗ್ರಹ ಉಡಾವಣೆಗೊಳಿಸಲಾಯಿತು. ಉಪಗ್ರಹದ ಪೆಲೋಡ್ ನಿರ್ಮಾಣದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠಕ್ಕೆ ಸೇರಿದ ಚಿಕ್ಕಬಳ್ಳಾಪುರದ ಎಸ್.ಜೆ.ಸಿ ತಾಂತ್ರಿಕ ಮಹಾವಿದ್ಯಾಲಯ ಸಹಭಾಗಿತ್ವ ನೀಡಿದೆ.

ಇಸ್ರೋ ಸ್ಪೇಡೆಕ್ಸ್ ಯಶಸ್ವಿ ಉಡಾವಣೆ ಸಂಭ್ರಮದಲ್ಲಿ ಇಸ್ರೋ ಅಧ್ಯಕ್ಷ ಸೋಮನಾಥ್, ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಹಾಗೂ ವಿಜ್ಞಾನಿಗಳ ಜೊತೆ  ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ|| ನಿರ್ಮಲಾನಂದನಾಥ ಮಹಾಸ್ವಾಮೀಜಿ ಭಾಗಿಯಾಗಿದ್ದರು.

ಬಿ.ಜಿ.ಎಸ್ ಅರ್ಪಿತ್ ಪೇಲೋಡ್ ಪ್ರಾಜೆಕ್ಟನ್ನು ಎಸ್.ಜೆ.ಸಿ.ಐ.ಟಿಯ ವಿದ್ಯುನ್ಮಾನ ವಿಭಾಗದ ದೃತ್ವಾನ್ ಸ್ಪೇಸ್ ಲ್ಯಾಬ್‌ನಲ್ಲಿ ಅಧ್ಯಾಪಕ ಮತ್ತು ವಿದ್ಯಾರ್ಥಿಗಳ ತಂಡವು ಪೂಜ್ಯ ಮಹಾಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸಂಶೋಧನೆಯಲ್ಲಿ ತೊಡಗಿಸಿಕೊಂಡು ಸಿದ್ದಪಡಿಸಿದೆ.

ಈ ಪೇಲೋಡ್ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯ ಅನುಭವವನ್ನು ನೀಡುತ್ತದೆ. ಆಡಿಯೋ ಸಂದೇಶಗಳು, ಟೆಲಿಮಿಟ್ರಿ ಟ್ರಾನ್ಸ್ಮಿಷನ್, ಇಮೇಜ್ ಟ್ರಾನ್ಸ್ಮಿಷನ್, ಡೇಟಾ ಮತ್ತು ಅಮೆಚೂರ್ ರೇಡಿಯೋ ಸೇವೆಗಳಿಗೆ ನೆರವು ನೀಡುತ್ತದೆ.

ಸ್ಪೆಡೆಕ್ಸ್ ಉಡಾವಣೆಯಲ್ಲಿ ಬಿಜಿಎಸ್ ಅರ್ಪಿತ್ ಪೇಲೋಡ್ ತಯಾರಿಕೆಗೆ ಕಾರಣರಾದ ತಂಡಕ್ಕೆ ಪ್ರಾಂಶುಪಾಲ ಡಾ|| ಜಿ.ಟಿ ರಾಜು ಮತ್ತು ಕುಲಸಚಿವರು  ಸುರೇಶ.ಜೆ ಅಭಿನಂದಿಸಿದರು.

೧ಸಿಬಿಪಿಎA೯: ಇಸ್ರೋ ಸ್ಪೇಡೆಕ್ಸ್ ಯಶಸ್ವಿ ಉಡಾವಣೆ ಸಂಭ್ರಮದಲ್ಲಿ ಇಸ್ರೋ ಅಧ್ಯಕ್ಷ ಸೋಮನಾಥ್, ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಹಾಗೂ ವಿಜ್ಞಾನಿಗಳ ಜೊತೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ|| ನಿರ್ಮಲಾನಂದನಾಥ ಮಹಾಸ್ವಾಮೀಜಿ ಭಾಗಿಯಾಗಿದ್ದರು.