Friday, 20th September 2024

MP Dr K Sudhakar: ಎಲ್ಲರೂ ಪಕ್ಷವನ್ನು ಅನುಸರಿಸಿ, ಪಕ್ಷದ ಯಾವುದೇ ಘಟಕದ ಅಧ್ಯಕ್ಷರ ಆದೇಶವನ್ನು ಪಾಲಿಸಿ

ಬಿಜೆಪಿ ಸದಸ್ಯತ್ವ ಚಿಕ್ಕಬಳ್ಳಾಪುರವನ್ನು ಮಾದರಿಯಾಗಿಸಲು ಸಂಸದ ಡಾ.ಕೆ.ಸುಧಾಕರ್ ಕರೆ

ಚಿಕ್ಕಬಳ್ಳಾಪುರ: ಬಯಲುಸೀಮೆ ಎಂದರೆ ಬಿಜೆಪಿಗೆ ಮರುಭೂಮಿ ಎನ್ನಲಾಗುತ್ತಿತ್ತು. ಇಂತಹ ಪ್ರದೇಶದಲ್ಲೇ ಬಿಜೆಪಿಯನ್ನು ಗಟ್ಟಿಯಾಗಿ ಕಟ್ಟುವ ಮೂಲಕ, ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಸದಸ್ಯತ್ವ ಅಭಿಯಾನದಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗಿಸಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ಕಾರ್ಯಕರ್ತರಿಗೆ ಕರೆ ನೀಡಿದರು.

ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಸದಸ್ಯತ್ವ ಅಭಿಯಾನದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.  

ಒಂದು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಕ್ಕೆ ಹೆಚ್ಚು ಸದಸ್ಯರಿದ್ದರೆ, ಚುನಾವಣೆ ಬಂದಾಗ ಅಲ್ಲಿ ನಮ್ಮ ಅಭ್ಯರ್ಥಿಯನ್ನು ನಿಲ್ಲಿಸಬಹುದು ಎಂಬ ವಿಶ್ವಾಸ ಮೂಡುತ್ತದೆ.ಇದೇ ಕಾರಣಕ್ಕೆ ಹೆಚ್ಚಿನ ಸದಸ್ಯತ್ವ ಮಾಡಿಸಬೇಕಿದೆ. ಜನರ ಬಳಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಸಾಧನೆಗಳನ್ನು ತಿಳಿಸಬೇಕು. ಬಯಲುಸೀಮೆ ಎಂದರೆ ಬಿಜೆಪಿಗೆ ಮರುಭೂಮಿ ಎನ್ನಲಾಗುತ್ತಿತ್ತು. ಇಂತಹ ಪ್ರದೇಶದಲ್ಲೇ ಬಿಜೆಪಿಯನ್ನು ಗಟ್ಟಿಯಾಗಿ ಕಟ್ಟಬೇಕು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಜನರ ಹೆಸರು ನೋಂದಾಯಿಸಿ, ಇಡೀ ರಾಜ್ಯಕ್ಕೆ ಮಾದರಿ ಮಾಡಬೇಕು ಎಂದರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 15 ಸಾವಿರ, ಶಿಡ್ಲಘಟ್ಟದಲ್ಲಿ 10 ಸಾವಿರ ಜನರು ಬಿಜೆಪಿ ಸದಸ್ಯರಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇನ್ನುಳಿದ ಮೂರು ಕ್ಷೇತ್ರಗಳಲ್ಲಿ ಒಂದೂವರೆಯಿ0ದ ಎರಡು ಸಾವಿರ ಜನರು ನೋಂದಾಯಿಸಿಕೊಂಡಿದ್ದಾರೆ. ಆದರೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 1 ಲಕ್ಷದ ಗುರಿ ಇದೆ. ಇನ್ನಷ್ಟು ಜನರನ್ನು ನೋಂದಾಯಿಸಲು ಶ್ರಮಿಸಲಾಗುವುದು ಎಂದರು.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿಲ್ಲ. ಇಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಜನರ ಹೆಸರು ನೋಂದಾಯಿಸಲಾಗಿದೆ. ಚಿಂತಾಮಣಿಯಲ್ಲಿ ಮುಖಂಡರು ಮನಸ್ಸು ಮಾಡಿದರೆ 50 ಸಾವಿರ ಜನರ ಹೆಸರು ನೋಂದಾಯಿಸಬಹುದು. ಯಾರೂ ವ್ಯಕ್ತಿಯ ಹಿಂದೆ ಹೋಗುವುದು ಬೇಡ. ಆದರೆ ಪಕ್ಷವನ್ನು ಎಲ್ಲರೂ ಅನುಸರಿಸಬೇಕು. ಪಕ್ಷದ ಯಾವುದೇ ಘಟಕದ ಅಧ್ಯಕ್ಷರ ಆದೇಶವನ್ನು ಎಲ್ಲರೂ ಪಾಲಿಸಬೇಕು. ಸದಸ್ಯತ್ವ ನೋಂದಣಿ ಕುರಿತು ಪ್ರತಿ ದಿನ ಸಭೆಗಳನ್ನು ಮಾಡಿ ಚರ್ಚಿಸುತ್ತೇನೆ ಎಂದರು.

ಸಭೆಯಲ್ಲಿ ಮರಳುಕುಂಟೆ ಕೃಷ್ಣಮೂರ್ತಿ,ಎಂಎಫ್‌ಸಿ ನಾರಾಯಣಸ್ವಾಮಿ, ಕೆ.ವಿ.ನಾಗರಾಜ್, ಆವುಲಕೊಂಡ ರಾಯಪ್ಪ, ಚನ್ನಕೇಶವರೆಡ್ಡಿ, ಲೀಲಾವತಿ ಶ್ರೀನಿವಾಸ್, ಅನು ಆನಂದ್, ಎಸ್‌ಆರ್‌ಎಸ್ ದೇವರಾಜ್, ಮುನಿರಾಜು, ಮತ್ತಿತರರು ಇದ್ದರು.

ಇದನ್ನೂ ಓದಿ: MP Dr K Sudhakar: ಸಂಸದ ಸುಧಾಕರ್, ನಗರಸಭೆ ನಿಯೋಜಿತ ಅಧ್ಯಕ್ಷ ಉಪಾಧ್ಯಕ್ಷರ ವಿರುದ್ಧ ತಿರುಗಿ ಬಿದ್ದ ಕಾಂಗ್ರೆಸ್ ಮುಖಂಡರು