ಚಿಕ್ಕಬಳ್ಳಾಪುರ : ರಾಜಕೀಯದಲ್ಲಿ ಹಲವು ವರ್ಷಗಳ ಅನುಭವವುಳ್ಳ ಸಿ.ಟಿ.ರವಿಯವರ ತಾಳ್ಮೆ ಕಳೆದುಕೊಂಡು ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮತ್ತು ಇಡೀ ಸ್ತ್ರೀ ಕುಲಕ್ಕೆ ಅಪಮಾನ ಮಾಡಿದ್ದಾರೆ. ಅನುಭವಿಗಳಾಗಿ ಈ ರೀತಿಯ ವರ್ತನೆ ಅಕ್ಷಮ್ಯ. ಅವರು ದೇಶದ ಮಹಿಳೆಯರನ್ನು ಬೇಷರತ್ ಕ್ಷಮೆಯಾಚಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗಟ್ಟಿತನದ ಮಹಿಳೆಯಾದ ಕಾರಣ ಅಪಮಾನವನ್ನು ಸಹಿಸಿಕೊಂಡಿದ್ದಾರೆ. ಅವರ ನೋವಿನೊಂದಿಗೆ ನಾವೆಲ್ಲರೂ ಇರುತ್ತೇವೆ. ಬೇರೆಯವರಿಗೆ ಈ ರೀತಿ ಆಗಬಾರದು ಎಂಬ ಕಾರಣಕ್ಕೆ ಅವರು ದೂರು ನೀಡಿದ್ದಾರೆ. ದೇಶ ಮತ್ತು ರಾಜ್ಯವಷ್ಟೇ ಅಲ್ಲದೆ ಒಟ್ಟಾರೆ ಮಹಿಳಾ ಸಮೂಹಕ್ಕೆ ಸಿ ಟಿ ರವಿ ಅವಮಾನಿಸಿದ್ದಾರೆ. ಇದನ್ನ ಯಾರೊಬ್ಬರು ಕ್ಷಮಿಸುವುದಿಲ್ಲ. ಇಂತವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಬೆಳಗಾವಿಗೆ ೧೦೦ ಮಂದಿ
೧೯೨೪ರ ಡಿ.೨೬ರಂದು ಮಹಾತ್ಮ ಗಾಂಧೀಜಿ ಅವರು ಜವಾಹರ್ ಲಾಲ್ ನೆಹರು ಅವರೊಂದಿಗೆ ಬೆಳಗಾವಿಗೆ ಬಂದು ಆಗಿನ ಕಾರ್ಯದರ್ಶಿ ಗಂಗಾಧರ್ ದೇಶಪಾಂಡೆಯವರನ್ನು ಭೇಟಿ ಮಾಡಿ ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ದ್ದರು. ಅದೇ ದಿನ ಕಾರ್ಯಕಾರಿ ಸಮಿತಿ ಸದಸ್ಯರ ಬೃಹತ್ ಸಮಾವೇಶ ನಡೆಸಿದ್ದರು. ಆ ಸಮಾವೇಶ ನಡೆದು ೨೬ ಡಿಸೆಂಬರ್ ೨೦೨೪ಕ್ಕೆ ೧೦೦ ವರ್ಷ ತುಂಬುತಿದೆ. ಇದರ ನೆನಪಿನಲ್ಲಿ ಬೆಳಗಾವಿಯಲ್ಲಿ ಡಿಸೆಂಬರ್ ೨೭ರಂದು ಬೃಹತ್ ಸಮಾವೇಶ ನಡೆಸಲು ಪಕ್ಷದ ಅಧ್ಯಕ್ಷರು ಕರೆ ಕೊಟ್ಟಿದ್ದಾರೆ. ಆ ಹಿನ್ನೆಲೆಯಲ್ಲಿ ಶುಕ್ರವಾರ ನಮ್ಮ ಕಾರ್ಯಕರ್ತ ರೊಂದಿಗೆ ಸಭೆ ನಡೆಸಿದ್ದು, ಚಿಕ್ಕಬಳ್ಳಾಪುರದಿಂದ ೧೦೦ ಜನ ಬೆಳಗಾವಿ ಸಮಾವೇಶಕ್ಕೆ ಹೋಗಬೇಕು ಎಂದು ತೀರ್ಮಾನಿಸಲಾಗಿದೆ ಎಂದರು.
ಬಿಜೆಪಿ ಒಳಮನಸ್ಸು ಬಹಿರಂಗ
ಅಂಬೇಡ್ಕರ್ ವಿರುದ್ಧ ಅಮಿತ್ ಶಾ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಇದು ಬಿಜೆಪಿಯವರ ಒಳಮನಸ್ಸು ಬಹಿರಂಗವಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ಅವರ ಧ್ವಂಧ್ವ ನಿಲುವುಗಳನ್ನು ತಾಳುತ್ತಾರೆ. ಹೇಳಿಕೆ ಕೊಟ್ಟಿದ್ದಾರೆ. ಅಂಬೇಡ್ಕರ್ ಅವರ ಕೊಡುಗೆಯಿಂದ ಇಂದು ಅವರು ದೇಶದ ಗೃಹ ಸಚಿವರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಇದನ್ನು ಕ್ಷಮಿಸುವುದಿಲ್ಲ. ಇದಕ್ಕಾಗಿ ಪಕ್ಷದ ವತಿಯಿಂದ ದೊಡ್ಡ ಹೋರಾಟವನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಭವನಕ್ಕೆ ಭೂಮಿಪೂಜೆ
ಜಿಲ್ಲಾ ಕಾಂಗ್ರೆಸ್ ಭವನದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕಾಂಗ್ರೆಸ್ ಭವನಕ್ಕಾಗಿ ಸ್ಥಳ ಗುರುತಿಸಲಾಗಿದೆ. ವರಿಷ್ಠರ ಗಮನಕ್ಕೂ ತರಲಾಗಿದೆ. ಈ ಕುರಿತು ಸರಕಾರಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ೧-೨ ತಿಂಗಳೊಳಗೆ ಭೂಮಿಪೂಜೆ ನೆರವೇರಲಿದ್ದು, ೩ ವರ್ಷಗಳೊಳಗಾಗಿ ಕಟ್ಟಡ ಲೋಕಾರ್ಪಣೆ ಆಗಲಿದೆ ಎಂದು ಆಶ್ವಾಸನೆ ವ್ಯಕ್ತಪಡಿಸಿದರು.
ಶೀಘ್ರವೇ ಕನ್ನಡ ಭವನ ಲೋಕಾರ್ಪಣೆ
ಶೀಘ್ರವೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಜಿಲ್ಲೆಗೆ ಆಹ್ವಾನಿಸಿ ಅವರ ಅಮೃತ ಹಸ್ತದಿಂದ ಕನ್ನಡ ಭವನ ನೂತನ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮ ನಡೆಸಲಾಗುವುದು ಎಂದು ಡಾ.ಎಂ.ಸಿ.ಸುಧಾಕರ್ ತಿಳಿಸಿದರು. ಜಿಲ್ಲಾ ಕನ್ನಡ ಭವನದ ಕಾಮಗಾರಿ ವೀಕ್ಷಿಸಿದ ನಂತರ ಮಾದ್ಯಮದೊಂದಿಗೆ ಮಾತನಾಡಿ ಈ ವಿಚಾರ ತಿಳಿಸಿದರು.
ಈವೇಳೆ ಜಿಲ್ಲಾಧಿಕಾರಿ ಪಿಎನ್ ರವೀಂದ್ರ, ಉಪವಿಭಾಗಾಧಿಕಾರಿ ಅಶ್ವಿನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಸೇರಿ ಇತರೆ ಅಧಿಕಾರಿಗಳು ಇದ್ದರು