ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಕಚೇರಿ ಎದುರು ಡಿಡಿಪಿಐ ಹಠಾವೋಗೆ ಆಗ್ರಹಿಸಿ ಪ್ರತಿಭಟನೆ
ಚಿಕ್ಕಬಳ್ಳಾಪುರ: ಖಾಸಗಿ ಶಾಲೆಗಳ ಮಾನ್ಯತೆ ನವೀಕರಿಸಲು ಕಟ್ಟಡ ಸುರಕ್ಷತಾ ಪ್ರಮಾಣ ಪತ್ರ, ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಹೊಂದಿಲ್ಲ ಎಂದು ಆರೋಪಿಸಿ ನವೀಕರಣ ತಡೆಹಿಡಿದು ವಿನಾಕಾರಣ ತೊಂದರೆ ನೀಡುತ್ತಿರುವ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಅಧಿಕಾರಿ ನಡೆ ಖಂಡಿಸಿ ಜಿಲ್ಲಾ ಅನುದಾನ ರಹಿತ ಶಾಲೆಗಳ ಸಂಘದ ಮುಖಂಡರು ಡಿಡಿಇಐ ಹಠಾವೋ ಖಾಸಗಿ ಶಾಲೆ ಬಜಾವೋ ಎನ್ನುತ್ತಾ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎದುರು ಗುರುವಾರ ಜಿಲ್ಲಾ ಖಾಸಗಿ ಶಾಲೆಗಳ ಸಂಘಟ ನೆಯ ಜಿಲ್ಲಾಧ್ಯಕ್ಷರು ಸೇರಿದಂತೆ ವಿವಿಧ ಶಾಲೆಗಳ ಮುಖ್ಯಸ್ಥರು ದಿಢೀರನೆ ಜಮಾಯಿಸಿ ಡಿಡಿಪಿಐ ಸರ್ವಾಧಿಕಾರಿ ಧೋರಣೆ ಖಂಡಿಸಿದರಲ್ಲದೆ, ಸರಕಾರದ ನಿಯಮಾನುಸಸಾರ ನವೀಕರಣಕ್ಕೆ ಬೇಕಾದ ಎಲ್ಲಾ ಮಾನದಂಡಗಳನ್ನು ಪೂರೈಸಿದ್ದರೂ,ದುರುದ್ಧೇಶ ಇಟ್ಟುಕೊಂಡು ನೋಟಿಸು ನೀಡುತ್ತಿದ್ದಾರೆ.ಜಿಲ್ಲೆಯಲ್ಲಿ 71 ಶಾಲೆಗಳನ್ನು ಕಪ್ಪುಪಟ್ಟಿಗೆ ಸೇರಿಸಿದ್ದಾರೆ. ಬಾಗೇಪಲ್ಲಿ ಎಂಎಲ್‌ಎ ಸುಬ್ಬಾರೆಡ್ಡಿಗೆ ಒಂದು ನ್ಯಾಯ ಸಾಮಾನ್ಯರಿಗೆ ಒಂದು ನ್ಯಾಯ ಮಾಡುತ್ತಿ ದ್ದಾರೆ. ಇವರನ್ನು ಕೂಡಲೇ ಬೇರೆಡೆ ವರ್ಗಾವಣೆ ಮಾಡಿ ಖಾಸಗಿ ಶಾಲೆಗಳನ್ನು ಉಳಿಸಿ ಸರಕಾರಕ್ಕೆ ಆಗ್ರಹಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಎಷ್ಟೋ ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕನಿಷ್ಟ ಕುಡಿಯಲು ನೀರಿಲ್ಲ, ಶೌಚಾಲಯವಿಲ್ಲ, ಸುಸಜ್ಜಿತವಾದ ಕಟ್ಟಡ ವಿಲ್ಲ, ಆಟದ ಮೈದಾನವಿರಲಿ, ಶಾಲೆಗೊಂದು ಕಾಂಪೌಂಡ್ ಇಲ್ಲ. ಇವರಿಗೆ ಯಾವ ನಿಯಮವೂ ಬೇಕಾಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಸರ್ವರಿಗೂ ಶಿಕ್ಷಣ ದೊರೆಯಬೇಕು ಎನ್ನುವ ಕಾರಣಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲೆ ಗಳನ್ನು ತೆರೆದು ಹಲವು ಸವಾಲುಗಳ ನಡುವೆ, ಇಲಾಖೆ ನಿಯಮಾನುಸಾರ ಗುಣಮಟ್ಟದ ಶಿಕ್ಷಣ ನೀಡುತ್ತಿ ದ್ದರೂ ಮಾನ್ಯತೆ ನವೀಕರಿಸಲು ಕಟ್ಟಡ ಸುರಕ್ಷತಾ ಪ್ರಮಾಣ ಪತ್ರ, ಅಗ್ನಿಸುರಕ್ಷತಾ ಪ್ರಮಾಣ ಪತ್ರ ಹೊಂದಿಲ್ಲ ಎಂದು ಆರೋಪಿಸಿ ಮಾನ್ಯತೆ ರದ್ಧುಪಡಿಸುವುದು ತಪ್ಪು. ಡಿಡಿಪಿಐ ಸಾಹೇಬರೇ ಮುಂದೆ ನಿಂತು ಇಂತಹ ಶಾಲೆಯ ಮಾನ್ಯತೆ ರದ್ಧಾಗಿದೆ ಎಂದು ಸುದ್ಧಿ ಹಬ್ಬಿಸಿದರೆ ಪೋಷಕರು, ಸಾರ್ವಜನಿಕರಿಗೆ ತಪ್ಪು ಸಂದೇಶ ಹೋಗಿ ದಾಖಲಾ ತಿಯೇ ಕುಸಿಯುತ್ತದೆ.ಇದಕ್ಕೆ ಯಾರನ್ನು ಹೊಣೆಗಾರರಾಗಿಸಬೇಕು, ನಮಗಾದ ನಷ್ಟವನ್ನು ಯಾರು ಭರಿಸುತ್ತಾರೆ ಎಂಬ ಬಗ್ಗೆ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಅಧಿಕಾರಿಯೇ ಹೇಳಬೇಕು ಸಿಟ್ಟಿಗೆದ್ದರು.
ಡಿಡಿಪಿಐ ಮಾತನಾಡಿ ಇದು ನಾನು ಮಾಡಿರುವ ಆದೇಶ ಅಲ್ಲ. ವಿದ್ಯಾರ್ಥಿಗಳ ಹಿದೃಷ್ಟಿಯಿಂದ ಕೇಂದ್ರ ಸರಕಾರ ಜಾರಿಗೊಳಿಸಿರುವ ನಿಯಮಾವಳಿಯನ್ನು ರಾಜ್ಯ ಸರಕಾರ ಅನುಷ್ಠಾನಕ್ಕೆ ತಂದಿದೆ.ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಅಧಿಕಾರಿಯಾಗಿ ನನಗೆ ದತ್ತವಾಗಿರುವ ಅಧಿಕಾರವನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಶಾಲಾ ಶಿಕ್ಷಣವನ್ನು ಸುಧಾರಿಸಲು ಹೊರಟಿದ್ದೇನೆ. ಜಿಲ್ಲಯಲ್ಲಿ 71 ಶಾಲೆಗಳು ಕಟ್ಟಡ ಸುರಕ್ಷತಾ ಪ್ರಮಾಣ ಪತ್ರ, ಅಗ್ನಿಸುರಕ್ಷತಾ ಪ್ರಮಾಣ ಪತ್ರ ಹೊಂದಿಲ್ಲದ ಕಾರಣ ನವೀಕರಣ ಮಾಡಲಾಗಿಲ್ಲ.ಎಲ್ಲಾ ಮಾನದಂಡಗಳನ್ನು ಪೂರೈಸಿರುವ ಶಾಲೆಗಳಿಗೆ ತೊಂದರೆ ನೀಡುವ ಪ್ರಮೇಯವೇ ಬರುವುದಿಲ್ಲ. ನಿನ್ನೆ ಖಾಸಗಿ ಶಾಲಾ ಸಂಘದ ಪದಾಧಿಕಾರಿಗಳು ನಿಮ್ಮ ಬಳಿ ಮಾತನಾಡಬೇಕು,ಕೆಲವು ಅನುಮಾನಗಳಿವೆ,ನಿಮ್ಮಿಂದ ಸ್ಪಷ್ಟನೆ ಬೇಕಾಗಿದೆ ಎಂದು ಕೇಳಿದ್ದರಿಂದ ಬನ್ನಿ ಎಂದು ಹೇಳಿದೆ. ಆದರೆ ಅವರು ದೊಡ್ಡ ಪ್ರಮಾಣದಲ್ಲಿ ಜನರನ್ನು ಸಂಘಟಿಸಿ ಹೀಗೆ ದೊಂಬಿ ಮಾಡುತ್ತಾ ರೆಂದರೆ ಭೇಟಿಗೆ ಅವಕಾಶವನ್ನೇ ನೀಡುತ್ತಿರಲಿಲ್ಲ ಎನ್ನುವುದು ಬೈಲಾಂಜಿನಪ್ಪ ಅವರ ಮಾತು.
ಖಾಸಗಿ ಶಿಕ್ಷಣ ಸಂಸ್ಥೆಗಳ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಮಾತನಾಡಿ ಜಿಲ್ಲೆಯಲ್ಲಿ ೭೦ಕ್ಕೂ ಹೆಚ್ಚು ಶಾಲೆಗಳಿಗೆ ನೋಟೀಸು ನೀಡಿದ್ದಾರೆ.ನೀವು ಶಾಲಾ ಅನುಮತಿಯನ್ನು ಅನಧಿಕೃತವಾಗಿ ಪಡೆದಿದ್ದೀರಿ ಎಂದು ನೋಟೀಸು ನೀಡಿದ್ದಾರೆ. ಈಸಂದರ್ಭದಲ್ಲಿ ನಾವು ನಿಮ್ಮ ನೋಟೀಸು ಸರಿಯಲ್ಲ, ಪರಿಶೀಲನೆ ಮಾಡಿ ಎಂದು ಎಷ್ಟೇ ಮನವಿ ಮಾಡಿದರು ಮೂರು ಮೂರು ನೋಟೀಸು ನೀಡಿ ನವೀಕರಣ ತಡೆಹಿಡಿಯುವ ಕೆಲಸ ಮಾಡಿದ್ದಾರೆ. ಇವರಿಗಿಂತ ಹಿಂದಿನ ಡಿಡಿಪಿಐ ೫ ವರ್ಷದ ಅವಧಿಗೆ ಮಾಡಿರುವ ನವೀಕರಣವನ್ನು ಇವರು ವಜಾ ಮಾಡಿ ಒಂದೊಂದು ವರ್ಷಕ್ಕೆ ನವೀಕರಣ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಆದರೂ ಹಣಪಡೆಯುವ ದುರುದ್ಧೇಶದಿಂದ ಹೀಗೆ ಮಾಡಿದ್ದಾರೆ.ಇದು ತಪ್ಪು ಕೂಡಲೇ ನೋಟೀಸು ವಾಪಸ್ಸು ಪಡೆದು ಶಾಲೆಗಳನ್ನು ನಡೆಸಲು ಅವಕಾಶ ಮಾಡಿ ಕೊಡಬೇಕು. ಇಲ್ಲದಿದ್ದರೆ ಇವರ ಭ್ರಷ್ಟಾಚಾರವನ್ನು ಎಳೆಎಳೆಯಾಗಿ ಬಿಡಿಸಿ ಜನರ ಮುಂದೆ ಇಡುತ್ತೇವೆ ಎಂದು ನೇರ ಆರೋಪ ಮಾಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರ ಕಚೇರಿ ಹೊರಗೆ ಪ್ರತಿಭಟನೆ ಮಾಡುತ್ತಿದ್ದ ಖಾಸಗಿ ಶಾಲಾ ಸಂಸ್ಥೆಗಳ ಸಂಘದ ಪದಾಧಿಕಾರಿಗಳು, ಡಿಡಿಪಿಐ ವಿರುದ್ದ ಘೋಷಣೆಗಳನ್ನು ಮೊಳಗಿಸಿ ಮಾಧ್ಯಮದವರಿಗೆ ತಮ್ಮ ಹೇಳಿಕೆ ನೀಡಿದ ನಂತರ ಏಕಾಏಕಿ ಅವರ ಕಚೇರಿ ಒಳಗೆ ನುಗ್ಗಿ ಅವರನ್ನು ಹೀನಾಮಾನ ಬೈದರಲ್ಲದೆ, ಕಮಿಷನರ್ ಬರುವರೆಗೆ ನೀವೂ ಹೋಗಬಾರದು, ನಾವೂ ಹೋಗುವುದಿಲ್ಲ ಎಂದು ಡಿಡಿಪಿಐ ಬೈಲಾಂಜನಿನಪ್ಪ ಅವರನ್ನು ಅಕ್ಷರಶಃ ಕಛೇರಿ ದಿಗ್ಬಂಧನಕ್ಕೆ ಒಳಪಡಿಸಿದರು. ಅವರು ಏನೇ ಸಮಜಾಯಿಷಿ ನೀಡಿದರೂ ಕೇಳದೆ, ನಿಮ್ಮಂತಹ ಅಧಿಕಾರಿಗಳಿಂದ ನಾವು ನೆಮ್ಮದಿಯಾಗಿ ಶಾಲೆ ನಡೆಸಲು ಆಗುತ್ತಿಲ್ಲ, ಏನೇನೂ ಸೌಲಭ್ಯ ಹೊಂದಿಲ್ಲದ ಶಿಡ್ಲಘಟ್ಟದ ಟಿಪ್ಪು ಶಾಲೆಗೆ ೧೦ ವರ್ಷ ನವೀಕರಣ ಮಾಡಿದ್ದೀರಿ. ಕೇಂದ್ರ ಸರಕಾರದ ನಿಯಮಾವಳಿ ಪಾಲಿಸಿರುವ ಶಾಲೆಗಳಿಗೆ ನೋಟೀಸು ಕೊಡುತ್ತೀರಿ? ಇದು ನ್ಯಾಯವಲ್ಲ ಎಂದು ಏರುದನಿಯಲ್ಲಿ ಮಾತನಾಡುತ್ತಾ ಒಂದು ಗಂಟೆಗೂ ಹೆಚ್ಚು ಕಾಲ ಮಾತಿನ ಜಟಾಪಟಿ ನಡೆಸಿ ಆದೇಶ ವಾಪಸಾತಿಗೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಡಾಲ್ಪಿನ್ ನಾಗರಾಜ್, ವಿಸ್ಡಮ್ ಶಾಲೆಯ ತಮೀಮ್, ಶ್ರೀನಿವಾಸರೆಡ್ಡಿ, ರಘುನಾಥ್, ಚಂದ್ರಮೌಳಿ, ರಾಜಣ್ಣ, ಮಾಲತಿ, ಮಂಜುನಾಥ್ ಮತ್ತಿತರರು ಇದ್ದರು.