ಚಿಕ್ಕಬಳ್ಳಾಪುರ: ಅರಣ್ಯ(Forest) ದ ಹಸಿರು ಹೊದಿಕೆ ಮಾನವ ಸೇರಿದಂತೆ ಕೋಟ್ಯಂತರ ಜೀವಿಗಳ ಜೀವನಾಡಿ ಯಾಗಿದ್ದು, ಅಂತರಾಷ್ಟ್ರೀಯ ಮಾನದಂಡಗಳ ಪ್ರಕಾರ ಪ್ರತಿ ದೇಶ ತನ್ನ ಒಟ್ಟು ಭೂಭಾಗದ ಪೈಕಿ ಶೇ.33ರಷ್ಟು ಅರಣ್ಯ ಪ್ರದೇಶ (Forest area)ವನ್ನು ಹೊಂದಿರಬೇಕು. ಈ ವಿಷಯದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಮೂರನೇ ಸ್ಥಾನದಲ್ಲಿದೆಯೆಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ(Chickballapur DC) ಪಿ.ಎನ್.ರವೀಂದ್ರ ತಿಳಿಸಿದರು.
ಚಿಕ್ಕಬಳ್ಳಾಪುರ ನಗರ ಹೊರವಲಯದ ಸೂಲಾಲಪ್ಪನ ದಿನ್ನೆ ಅರಣ್ಯ ಪ್ರದೇಶದಲ್ಲಿ ಜಿಲ್ಲಾಡಳಿತ, ಅರಣ್ಯ ಇಲಾಖೆ ಆಯೋಜಿಸಿದ್ದ “ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮ”(National Forest Martyrs Day)ದಲ್ಲಿ ಹುತಾತ್ಮರಾದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜಿಲ್ಲಾಡಳಿತದ ಪರವಾಗಿ ಗೌರವ ನಮನ ಸಲ್ಲಿಸಿ ಮಾತನಾಡಿದರು.
ಇದನ್ನೂ ಓದಿ: ಶೀಘ್ರವೇ ಚುನಾವಣೆ ದಿನಾಂಕ ಘೋಷಣೆ ಮಾಡುವಂತೆ ಮೈತ್ರಿಪಕ್ಷದ ಮುಖಂಡರಿಂದ ಜಿಲ್ಲಾಧಿಕಾರಿಗೆ ಮನವಿ
ಜನಸಂಖ್ಯೆಯ ಹೆಚ್ಚಳ, ಅಭಿವೃದ್ಧಿ ಮತ್ತು ಒತ್ತುವರಿ ಮತ್ತಿತರ ಕಾರಣಗಳಿಂದಾಗಿ ಅರಣ್ಯದ ಪ್ರದೇಶದ ವಿಸ್ತೀರ್ಣ ಕಡಿಮೆಯಾಗುತ್ತಿರುವುದು ಆತಂಕದ ವಿಚಾರ. ಒಟ್ಡು ಭೂಭಾಗದಲ್ಲಿ ಶೇ.33ರಷ್ಟು ಅರಣ್ಯ ಪ್ರದೇಶ ಇರಬೇಕೆಂಬ ಮಾನದಂಡವನ್ನು ನಾವು ಪೂರೈಸಲಾಗುತ್ತಿಲ್ಲದಿರುವುದು ದುರದೃಷ್ಟಕರ. ಉತ್ತಮ ಗಾಳಿ, ಬೆಳಕು, ನೀರು ಮಾನವ ಸೇರಿದಂತೆ ಸಕಲ ಜೀವರಾಶಿಗಳು ಜೀವಂತವಾಗಿರಲು ಮತ್ತು ಆರೋಗ್ಯದಿಂದ ಇರಲು ಅತ್ಯಗತ್ಯವಾಗಿ ಬೇಕಾಗಿದೆ. ಆದರೆ, ಇದಕ್ಕೆ ಅರಣ್ಯ ಎಂಬ ಹಸಿರು ಹೊದಿಕೆ ನಿಗದಿತ ಪ್ರಮಾಣದಲ್ಲಿ ಇರಬೇಕು ಎಂಬುದನ್ನು ಅರಿಯಬೇಕು. ಕೇವಲ ಸಸಿ ನೆಟ್ಟರೆ ಸಾಲದು. ಅದನ್ನು ಮರವಾಗುವಂತೆ ಸಂರಕ್ಷಣೆ ಮಾಡಿದಾಗ ಮಾತ್ರ ಸಸಿ ಹಾಕಿದ್ದು ಸಾರ್ಥಕ ವಾಗುತ್ತದೆ. ಹಸಿರು ಪ್ರದೇಶವನ್ನು ವಿಸ್ತರಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಆರೋಗ್ಯಕ್ಕೆ ಉತ್ತಮ ಪರಿಸರವನ್ನು ಬಿಟ್ಟು ಹೋಗಬೇಕು. ಅರಣ್ಯ ಸಂರಕ್ಷಣೆ ವಾಡುವ ನಿಟ್ಟಿನಲ್ಲಿ ವಿದ್ಯಾರ್ಥಿ, ಯುವಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ಸಾರ್ವಜನಿಕರು ಎಲ್ಲರೂ ಗಿಡ ಮರಗಳನ್ನು ನೆಟ್ಟು ಸಂರಕ್ಷಣೆ ಮಾಡಿ ಬೆಳೆಸಬೇಕು. ಅರಣ್ಯಗಳು ಮತ್ತು ವನ್ಯಜೀವಿ ಗಳನ್ನು ರಕ್ಷಿಸುವ, ಕರ್ತವ್ಯದ ಸಾಲಿನಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದವರನ್ನು ಸ್ಮರಿಸಲು ಈ ದಿನವು ಪ್ರಮುಖ ದಿನವಾಗಿದೆ. ಅಧಿಕಾರಿಗಳು ಸಾರ್ವಜನಿಕರಲ್ಲಿ ಹಾಗೂ ಶಾಲಾ ವಿದ್ಯಾರ್ಥಿಗಳಲ್ಲಿ ಕಾಡು ನಾಶದಿಂದಾಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ಅನೇಕ ಸಂಘ ಸಂಸ್ಥೆಗಳು ಅರಣ್ಯ ರಕ್ಷಣೆ ಮಾಡುವಲ್ಲಿ ಸಕ್ರೀಯವಾಗಿ ಕಾರ್ಯೋನ್ಮುಖರಾಗಬೇಕು. ಅರಣ್ಯ ಸಂರಕ್ಷಣೆ ಮಾಡಿದಾಗ ಮಾತ್ರ ಪರಿಸರ ಸಮತೋಲನವಾಗಲು ಸಾಧ್ಯ ವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಮಾತನಾಡಿ 2013 ರಲ್ಲಿ, ಕೇಂದ್ರ ಪರಿಸರ ಸಚಿವಾಲಯವು ಸೆಪ್ಟೆಂಬರ್ 11 ಅನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವೆಂದು ಘೋಷಿಸಿತು. ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನದ ಇತಿಹಾಸವನ್ನು ಗಮನಿಸುವುದಾದರೆ 1730 ರಲ್ಲಿ ರಾಜಸ್ಥಾನದ ಮಹಾರಾಜ ಅಭಯ್ ಸಿಂಗ್ ಖೇಜಾರ್ಲಿಯ ಬಿಷ್ಣೋಯ್ ಗ್ರಾಮದಲ್ಲಿ ಮರಗಳನ್ನು ಕಡಿಯಲು ಆದೇಶಿಸಿದರು. ಈ ಕ್ರಮಕ್ಕೆ ಬಿಷ್ಣೋಯ್ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ದಂಗೆಯ ನೇತೃತ್ವವನ್ನು ಅಮೃತಾ ದೇವಿ ಬಿಷ್ಣೋಯ್ ಎಂಬ ಮಹಿಳೆ ವಹಿಸಿದ್ದರು. ಗ್ರಾಮಸ್ಥರು ತಮ್ಮ ಮರ ಗಳನ್ನು ಒಪ್ಪಿಸಲು ನಿರಾಕರಿಸಿದರು. ಖೇಜ್ರಿ ಮರಗಳು ಬಿಷ್ಣೋಯಿಗಳಿಗೆ ಪವಿತ್ರವೆಂದು ಅಮೃತಾ ದೇವಿ ಹೇಳಿದರು, ಮತ್ತು ಅವರ ನಂಬಿಕೆಯು ಮರಗಳನ್ನು ಕಡಿಯಲು ಅನುಮತಿಸುವುದನ್ನು ನಿಷೇಧಿಸಿತು. ಮರಗಳನ್ನು ಕಡಿಯಲು ಅವಕಾಶ ನೀಡುವುದಕ್ಕಿಂತ ಸಾಯುವುದೇ ಮೇಲು ಎಂದು ಅಮೃತಾ ಘೋಷಿಸಿದರು. ಅವರು ಮತ್ತು ಅವರ ಕುಟುಂಬ ದವರು ಖೇಜ್ರಿಮರಗಳನ್ನು ತಬ್ಬಿಕೊಳ್ಳಲಾರಂಭಿಸಿದರು.
ಇದು ರಾಜನಿಗೆ ಕೋಪಗೊಳ್ಳಲು ಕಾರಣವಾಗಿ ಮರಗಳನ್ನು ಕಡಿಯಲು ಪ್ರಾರಂಭಿಸುವ ಮೊದಲು ಅಮೃತಾ ದೇವಿ ಮತ್ತು ಅವರ ಮೂವರು ಹೆಣ್ಣುಮಕ್ಕಳ ಶಿರಚ್ಛೇದ ಮಾಡಿದರು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು, ಅಲ್ಲಿ ಬಿಷ್ಣೋಯ್ ಸಮುದಾಯದ ವೃದ್ಧರು, ಯುವಕರು, ಪುರುಷರು ಮತ್ತು ಮಹಿಳೆಯರು ಎಲ್ಲರೂ ಮರಗಳನ್ನು ಅಪ್ಪಿಕೊಳ್ಳಲು ಮತ್ತು ರಕ್ಷಿಸಲು ಒಟ್ಟುಗೂಡಿದರು,ಇದರಲ್ಲಿ ಸುಮಾರು 363 ಬಿಷ್ಣೋಯಿಗಳು ಕೊಲ್ಲಲ್ಪಟ್ಟರು. ಈ ಘಟನೆಯಿಂದ ರಾಜ ಅಭಯ್ ಸಿಂಗ್ ತುಂಬಾ ಆಘಾತಕ್ಕೊಳಗಾದರು, ಅವರು ತಮ್ಮ ಸೈನ್ಯವನ್ನು ಹಿಂತೆಗೆದು ಕೊಂಡರಲ್ಲದೆ ಗ್ರಾಮಸ್ಥರನ್ನು ಖುದ್ದಾಗಿ ಭೇಟಿ ಮಾಡಿ ಕ್ಷಮೆಯಾಚಿಸಿದರು. ಮುಂದೆ ಇಂತಹ ಘಟನೆ ಮರುಕಳಿಸ ದಂತೆ ಗ್ರಾಮಸ್ಥರಿಗೆ ಭರವಸೆ ನೀಡಿದರು. ವನ್ಯಜೀವಿಗಳ ಮತ್ತು ಅರಣ್ಯದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೂ ಅರ್ಪಿಸಿದ ಇಂತಹ ವೀರರಿಗೆ ಗೌರವ ಸಲ್ಲಿಸುವ ದಿನವಾಗಿದೆ. ಈ ಆಚರಣೆಯು ಕಾಡುಗಳು ಮತ್ತು ಪರಿಸರವನ್ನು ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಕುಶಲ್ ಚೌಕ್ಸೆ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ಎಂ.ಆರ್ ಮಂಜುನಾಥ್ ಅವರು ಅರಣ್ಯ ಹುತಾತ್ಮರಿಗೆ ಗೌರವ ಸಲ್ಲಿಸಿದರು. ಈ ವೇಳೆ ಅರಣ್ಯ ಹುತಾತ್ಮರರಿಗೆ ಮೌನ ಆಚರಣೆ ಮಾಡುವ ಮೂಲಕ ಗೌರವ ಸಲ್ಲಿಸ ಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ಚಿನ್ನಪ್ಪಯ್ಯ, ವಲಯ ಅರಣ್ಯ ಅಧಿಕಾರಿ ವಾಸುದೇವ ಮೂರ್ತಿ, ಸಾಮಾಜಿಕ ಅರಣ್ಯ ವಿಭಾಗದ ಎಂ.ಸಿ ಗೀತಾ, ಗಸ್ತು ಅರಣ್ಯ ಪಾಲಕ ರಾಮಪ್ಪ, ಕ್ಷೇಮಾಭಿವೃದ್ಧಿ ಅರಣ್ಯ ನೌಕರರ ಸಂಘ ಸುಬ್ಬಾರೆಡ್ಡಿ, ಹಾಗೂ ಅರಣ್ಯ ಇಲಾಖೆ ಸಿಬಂದ್ದಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.