Monday, 25th November 2024

Tumkur News: ಜಗಜೀವನರಾಂ ಭವನ ನಿರ್ಮಾಣಕ್ಕೆ ಆಸಕ್ತಿ ತೋರಿಸಿ: ಬೇವಿನಹಳ್ಳಿ ಚನ್ನಬಸವಯ್ಯ ಪಟ್ಟು


ಚಿಕ್ಕನಾಯಕನಹಳ್ಳಿ: ಡಾ.ಬಾಬು ಜಗಜೀವನರಾಂ ಭವನ ನಿರ್ಮಾಣ ಪ್ರಸ್ತುತ ಸ್ಥಳದ ವಿವಾದದಿಂದಾಗಿ ನೆನೆಗುದಿಗೆ ಬಿದ್ದಿದ್ದು ಹಲವು ವರ್ಷಗಳ ಬೇಡಿಕೆ ಈಡೇರಿಸಲು ತಾಲ್ಲೂಕು ಆಡಳಿತ ಮುಂದಾಗಬೇಕೆಂದು ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ ಪಟ್ಟು ಹಿಡಿದಿದ್ದಾರೆ.

ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ಸಮಾಜ ಕಲ್ಯಾಣ ಇಲಾಖೆ ಆಯೋಜನೆ ಮಾಡಿದ್ದ ದಲಿತ ಕುಂದು ಕೊರತೆ ಸಭೆಯಲ್ಲಿ ಶಾಸಕರ ಸಮ್ಮುಖದಲ್ಲಿ ಜಗಜೀವನರಾಂ ಭವನದ ವಿಚಾರ ಮುನ್ನ ಲೆಗೆ ಬಂದು ಪ್ರಯತ್ನಗಳು ನಡೆದವು. ಶಾಸಕ ಸಿ.ಬಿ.ಸುರೇಶಬಾಬು ಇದಕ್ಕೆ ಆಸಕ್ತಿ ವಹಿಸಿ ದಬ್ಬೆಘಟ್ಟ ಸರ್ವೆ ನಂ ೨೨ ರಲ್ಲಿ ಹಳೆಯ ತಾಲ್ಲೂಕು ಕಚೇರಿಯ ಪಕ್ಕದಲ್ಲಿರುವ 200*200 ನಿವೇಶನದಲ್ಲಿ ನಿರ್ಮಾಣದ ನೀಲನಕ್ಷೆ ತಯಾರು ಮಾಡಿಸಿ ಭವನ ನಿರ್ಮಿಸಿ ಕೊಡುವುದಾಗಿ ಹೇಳಿದ್ದರು. ಆದಾಗ್ಯೂ ಆ ಭರವಸೆಯೂ ಈಡೇರಲಿಲ್ಲ. ಜನಪ್ರತಿನಿಧಿ ಗಳ, ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದಾಗಿ ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ಭವನ ನಿರ್ಮಾಣ ನೆನೆಗುದಿಗೆ ಬಿದ್ದಿದೆ ಎಂದು ಬೇಸರ ವ್ಯಕ್ತಪಡಿದರು.

ಇದನ್ನೂ ಓದಿ: 1984 anti-Sikh riots: ಸಿಖ್‌ ವಿರೋಧಿ ದಂಗೆ- 4 ದಶಕ ಕಳೆದರೂ ಮುಗಿದಿಲ್ಲ ಕಾನೂನು ಸಮರ- ಕೋರ್ಟ್‌ ಕದ ತಟ್ಟಿದ ಕಾಂಗ್ರೆಸ್‌ ನಾಯಕ

ತಾಲ್ಲೂಕು ಮಾದಿಗ ದಂಡೋರದ ಕಾರ್ಯದರ್ಶಿ ತರಬೇನಹಳ್ಳಿ ಚಿದಾನಂದ್ ಮಾತನಾಡಿ ಭವನ ನಿರ್ಮಾಣ ಆಗುವವರೆಗೂ ಹಂತ ಹಂತವಾಗಿ ಹೋರಾಟ ರೂಪಿಸಲಾಗುವುದು. ಈ ಹೋರಾಟದಲ್ಲಿ ದಲಿತ ಸಂಘಟನೆಗಳು, ಪ್ರಗತಿಪರ ಚಿಂತಕರು, ಶೋಷಿತ ಸಮುದಾಯಗಳ ಮುಖಂಡರು ಸೇರಿ ಸಮಿತಿ ರಚಿಸಿಕೊಂಡು ಹೋರಾಟಕ್ಕಿಳಿ ಯಲಾಗುವುದು ಎಂದು ಎಚ್ಚರಿಸಿದರು.

ಮೂರು ಕೋಟಿ ಹಣ ಬಿಡುಗಡೆ
ಭವನ ನಿರ್ಮಾಣಕ್ಕೆ ಸರಕಾರ 3 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಆದರೆ ಭವನ ನಿರ್ಮಾಣಕ್ಕೆ ಸೂಕ್ತ ವಾದ ಜಾಗ ಗೊತ್ತುಪಡಿಸದ ಕಾರಣ ಬಾಬು ಜಗಜೀವನರಾಂ ಭವನ ನಿರ್ಮಾಣ ಕಾರ್ಯ ನೆನಗುದಿಗೆ ಬಿದ್ದಿದೆ. ಭವನ ನಿರ್ಮಾಣಕ್ಕೆ ಬಿಡುಗಡೆಯಾದ 3 ಕೋಟಿ ರೂ ಖಜಾನೆಯಲ್ಲಿ ಕೊಳೆಯುತ್ತಿದೆ. ಹಾಗಾಗಿ ನಗರದಲ್ಲಿ ಭವನ ನಿರ್ಮಾಣ ಆಗುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಮಾದಿಗ ದಂಡೋರ ತಾ. ಅಧ್ಯಕ್ಷ ಚಿಕ್ಕರಾಂಪುರ ಚಂದ್ರಶೇಖರ್ ಗುಡುಗಿದರು.