Friday, 22nd November 2024

Chikkaballapur: ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಜನಗಣತಿ ಸಮೀಕ್ಷಾ ವರದಿ ಕೂಡಲೇ ಜಾರಿ ಜಾರಿಗೊಳಿಸಬೇಕು

ಚಿಕ್ಕಬಳ್ಳಾಪುರ : ರಾಜ್ಯದ ಎಲ್ಲಾ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ತಯಾರಿಸಲಾಗಿರುವ ಸಮೀಕ್ಷಾ ವರದಿಯನ್ನು ಈ ಕೂಡಲೇ ಮುಖ್ಯಮಂತ್ರಿಗಳು ಮತ್ತವರ ಸಂಪುಟ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕುರುಬರ ಸಂಘ ಚಿಕ್ಕಬಳ್ಳಾಪುರ ತಾಲ್ಲೂಕು ಘಟಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಿದರು.

ಕುರುಬರ ಸಂಘ ಚಿಕ್ಕಬಳ್ಳಾಪುರ ತಾಲ್ಲೂಕು ಅಧ್ಯಕ್ಷ ಎಂ ಆನಂದ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಸಮುದಾಯದ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.

ಕರ್ನಾಟಕವು ೧೨ನೇ ಶತಮಾನದಲ್ಲೇ ಸಮಸಮಾಜವನ್ನು ಪ್ರತಿಪಾದಿಸಿದ ರಾಜ್ಯ. ಇಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೈಸೂರು ಸಂಸ್ಥಾನದಲ್ಲಿ ಮೀಸಲಾತಿ ಜಾರಿ ಮಾಡಲಾಗಿತ್ತು. ದಿವಂಗತ ದೇವರಾಜ ಅರಸು ಅವರು ‘ಹಾವನೂರು ಆಯೋಗ’ ರಚಿಸಿ ಹಿಂದುಳಿದ ವರ್ಗಗಳ ಅಧ್ಯಯನಕ್ಕೆ ಮುನ್ನುಡಿ ಬರೆದರು. ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರು ಮೀಸಲಾತಿ ಮಿತಿಯನ್ನು ಶೇಕಡಾ ೭೩ಕ್ಕೆ ಏರಿಸುವ ಪ್ರಯತ್ನ ಮಾಡಿದ್ದರು.

ಹೀಗೆ ಸಾಮಾಜಿಕ ನ್ಯಾಯದ ಪರವಾಗಿರುವ ಕರ್ನಾಟಕ ಈಗ ಜಾತಿ ಜನಗಣತಿ ಅಥವಾ ರಾಜ್ಯದ ಎಲ್ಲಾ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ಸಮೀಕ್ಷಾ ವರದಿಯನ್ನು ತಯಾರಿಸಿರು ವುದು ಇಡೀ ದೇಶಕ್ಕೆ ಮಾದರಿಯಾಗಿದೆ. ರಾಜ್ಯದ ಜನಸಂಖ್ಯೆಯ ಮುಕ್ಕಾಲು ಭಾಗಕ್ಕೂ ಜಾಸ್ತಿ ಇರುವ ಅಹಿಂದ ವರ್ಗಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ, ಉದ್ಯೋಗದ ಅವಕಾಶಗಳು ಮತ್ತು ವಿದ್ಯಾಭ್ಯಾಸದ ಅವಕಾಶಗಳು ಲಭಿಸಿಲ್ಲ. ಅಹಿಂದೆ ವರ್ಗಗಗಳಲ್ಲಿ ಅರಿವು ಮತ್ತು ಸಂಘಟನೆಯ ಕೊರತೆಯ ಕಾರಣಕ್ಕಾಗಿ ಅವಕಾಶಗಳು ಸಿಕ್ಕಿಲ್ಲ ಎನ್ನುವುದರ ಜೊತೆಗೆ ನಿರ್ಧಿಷ್ಟವಾಗಿ ಅವರ ಜನಸಂಖ್ಯಾ ಪರಿಸ್ಥಿತಿ ಗೊತ್ತಿಲ್ಲದಿರುವುದು ಪ್ರಮುಖ ಕಾರಣವಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಜಾತಿ ಜನಗಣತಿಯ ವರದಿ ಬಂದರೆ ಜಾತಿಗಳ ವಸ್ತುಸ್ಥಿತಿ ತಿಳಿಯಲಿದೆ. ಅದಕ್ಕೆ ಪೂರಕವಾಗಿ ಸರ್ಕಾರಗಳು ಕಾರ್ಯಕ್ರಮಗಳನ್ನು ರೂಪಿಸಬಹುದಾಗಿದೆ.ಈಗ ರಾಜ್ಯದ ಸುಮಾರು ಆರೂವರೆ ಕೋಟಿ ಜನಸಂಖ್ಯೆಯ ಅಧ್ಯಯನವಾಗಿರುವುದರಿಂದ ಜಾತಿ ಜನಗಣತಿಯನ್ನು ಸರ್ಕಾರ ಒಪ್ಪಿಕೊಳ್ಳುವುದರಿಂದ ಎಲ್ಲಾ ಜಾತಿಗಳಿಗೂ ಒಂದಲ್ಲ ಒಂದು ರೀತಿಯಲ್ಲಿ ಅನುಕೂಲ ಆಗಲಿದೆ. ಹಾಗಾಗಿ ಎಲ್ಲಾ ಜಾತಿಗಳು ಕೂಡ ಜಾತಿ ಜನಗಣತಿ ವರದಿ ಬಿಡುಗಡೆಗೆ ಸರ್ಕಾರದ ಮೇಲೆ ಒತ್ತಡ ತರಬೇಕು.

ಮೀಸಲಾತಿ ಪರಿಷ್ಕರಣೆ, ಜಾತಿಗಳನ್ನು ಹೊಸ ವರ್ಗಕ್ಕೆ ಸೇರಿಸುವುದು ಅಥವಾ ಕೈಬಿಡುವುದು ಎಲ್ಲಕ್ಕೂ ಸುಪ್ರೀಂ ಕೋರ್ಟ್ ಯಾವುದಾದರೂ ಸಾಂವಿಧಾನಿಕ ಸ್ಥಾನಮಾನ ಇರುವ ಆಯೋಗದ ದತ್ತಾಂಶವನ್ನು ಕೇಳುತ್ತದೆ. ಇದು ಮಂಡಲ್ ವರದಿ ಅನುಷ್ಠಾನವನ್ನು ಪ್ರಶ್ನಿಸಿದ್ದ ಆರ್ಬಿಯಿಂದ ಹಿಡಿದು ಹಲವಾರು ಪ್ರಕರಣಗಳಲ್ಲಿ ಕಂಡುಬAದಿದೆ. ಆದುದರಿಂದ ಜಾತಿಗಳ ನಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ತಯಾರಿಸ ಲಾಗಿರುವ ಸಮೀಕ್ಷಾವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡು ಬಿಡುಗಡೆ ಮಾಡಬೇಕಾಗಿರುವುದು ಅತ್ಯಾವಶ್ಯಕ ವಾಗಿದೆ. ಹಿರಿಯ ನ್ಯಾಯವಾದಿ ಎಚ್. ಕಾಂತರಾಜು ಅವರ ನೇತೃತ್ವದಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಮೀಕ್ಷೆಗೆ ಅಂಕಿ-ಅAಶಗಳನ್ನೂ ಸಂಗ್ರಹಿಸಿದ ವಿಧಾನವನ್ನು ತಜ್ಞರ ಸಮಿತಿ ಮತ್ತು ಐಐಎಂ ಸಂಸ್ಥೆಗಳು ದೃಢೀಕರಿಸಿವೆ.

ಬಡವರು, ರೈತರು, ಮಹಿಳೆಯರು, ದಲಿತರು, ಅಲ್ಪ ಸಂಖ್ಯಾತರು ಮತ್ತು ಹಿಂದುಳಿದವರ್ಗದವರ ಬಗ್ಗೆ ಅಪಾರ ವಾದ ಕಾಳಜಿ ಇರುವ ಸದಾ ಸಾಮಾಜಿಕ ನ್ಯಾಯದ ಪರ ಇರುವ ಸಿದ್ದರಾಮಯ್ಯ ರವರು ಮುಖ್ಯಮಂತ್ರಿ ಯಾಗಿರುವುದರಿ0ದ ಅವರು ರಾಜ್ಯದ ಏಳು ಕೋಟಿ ಜನರಿಗೂ ಅನುಕೂಲ ಆಗುವಂತಹ ಈ ಜಾತಿ ಜನಗಣತಿ ವರದಿಯನ್ನು ಒಪ್ಪಿ ಬಿಡುಗಡೆ ಮಾಡಬೇಕು. ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಜಾತಿ ಜನಗಣತಿ ನಡೆಸುವುದಾಗಿ ವಾಗ್ದಾನ ನೀಡಿತ್ತು ಎನ್ನುವುದನ್ನು ಮರೆಯಬಾರದು. ಕೊಟ್ಟ ಮಾತಿನಂತೆ ಈಗ ಜಾತಿ ಜನಗಣತಿ ವರದಿಯನ್ನು ಒಪ್ಪಿ ಬಿಡುಗಡೆ ಮಾಡಿ ‘ನಾವು ನಡೆದಂತೆ ನಡೆಯುವವರು’ ಎನ್ನುವುದನ್ನು ಸಾಬೀತು ಮಾಡಬೇಕು ಇಂದು ಮನವಿಯಲ್ಲಿ ತಿಳಿಸಿದ್ದಾರೆ.

ಅಕ್ಟೋಬರ್ ೨೫ ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ವರದಿಯನ್ನು ಮಂಡಿಸಿದಾಗ ಕೆಲವರು ಆಕ್ಷೇಪ ಎತ್ತಿ ಅದನ್ನು ಒಪ್ಪಬೇಕೋ ಬೇಡವೋ ಎಂದು ನಿರ್ಧರಿಸುವ ಅಭಿಪ್ರಾಯ ಸಂಪುಟ ಸಭೆಯ ಅಧಿಕಾರ. ಆದರೆ ಸಂಪುಟ ಸಭೆಯಲ್ಲಿ ಮಂಡಿಸಬಾರದು ಎಂಬುದು ಗೂಂಡಾ ಪ್ರವೃತ್ತಿ. ಸರ್ವಾಧಿಕಾರಿ ಧೋರಣೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಇಂತಹ ಜೊಳ್ಳು ಬೆದರಿಕೆಗೆ ತಲೆ ಕೆಡಿಸಿಕೊಳ್ಳದೆ ಮಾನ್ಯ ಸಿದ್ದರಾಮಯ್ಯ ನವರು ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು.

ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಅಕ್ಟೋಬರ್ ೨೫ ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ವರದಿಯನ್ನು ಒಪ್ಪಿ ಬಿಡುಗಡೆಗಾಗಿ ಒತ್ತಾಯಿಸಿ ಅಕ್ಟೋಬರ್ ೨೩ ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಕ್ಕೊತ್ತಾಯ ಸಮಾವೇಶ ಆಯೋಜಿಸುತ್ತಿದ್ದೇವೆ. ಈ ಸಮಾವೇಶದಲ್ಲಿ ನಾಡಿನ ಅಹಿಂದ ವರ್ಗ, ಶೋಷಿತ ಸಮುದಾಯಗಳ ಜನತೆ, ಸಂಘ ಸಂಸ್ಥೆಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ನಿರ್ಧರಿಸಿದ್ದೇವೆ ಎಂದು ಮನವಿಯಲ್ಲಿ ಈ ಮೂಲಕ ತಿಳಿಸಲಾಗಿದೆ.

ಇದೇ ಸಂದರ್ಭದಲ್ಲಿ ಕುರುಬರ ಸಂಘ ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ಎಂ ಆನಂದ್, ಗೌರವ ಅಧ್ಯಕ್ಷ ರಾಮಕೃಷ್ಣಪ್ಪ, ಖಜಾಂಚಿ ಎಂ ಲಕ್ಷ್ಮಯ್ಯ, ಕಾರ್ಯದರ್ಶಿ ಎನ್ ಸುರೇಶ್ ಬಾಬು, ಪ್ರಧಾನ ಕಾರ್ಯದರ್ಶಿ ಸಿ ಪ್ರಕಾಶ್, ಮುಖಂಡರಾದ ವೆಂಕಟರಮಣಪ್ಪ, ಮಿಲ್ಟ್ರಿ ಹೋಟೆಲ್ ಮಂಜುನಾಥ್, ರಾಮಾಂಜಿನಪ್ಪ, ಶ್ರೀನಿವಾಸ್, ನರೇಂದ್ರ, ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್, ಸೇರಿದಂತೆ ಇನ್ನೂ ಅನೇಕ ಪದಾಧಿಕಾರಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ: Chikkaballapur News: ನ.24 ರಂದು ಆದಿಕವಿ, ವಾಗ್ದೇವಿ ಪುರಸ್ಕಾರ ಪ್ರದಾನ ಸಮಾರಂಭ