Sunday, 5th January 2025

Chikkaballapur News: ಪರಿಸರ ಸಂರಕ್ಷಣೆಯಿಂದ ಎಲ್ಲರ ಬದುಕು ಹಸನು: ಜಿ.ಸಿ.ರಾಮಚಂದ್ರಯ್ಯ

ಗೌರಿಬಿದನೂರು : ನಿಯಂತ್ರಣ ಮೀರಿ ಸಾಗುತ್ತಿರುವ ಜನಸಂಖ್ಯೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಅಪವ್ಯಯ ವನ್ನು ನಿಯಂತ್ರಿಸುವ ಜತೆಗೆ ಸುತ್ತಲಿನ ಪರಿಸರ ಸಂರಕ್ಷಣೆಯಿಂದ ಮುಂದಿನ ಪೀಳಿಗೆಯನ್ನು ಉಳಿಸಿ ವಿದ್ಯಾರ್ಥಿಗಳ ಬದುಕನ್ನು ಹಸನು ಮಾಡಬೇಕಾಗಿದೆ ಎಂದು ಶಿಕ್ಷಕರಾದ ಜಿ.ಸಿ.ರಾಮಚಂದ್ರಯ್ಯ ತಿಳಿಸಿದರು.

ತಾಲ್ಲೂಕಿನ ಆರ್ಕುಂದ ಗ್ರಾಮದ ಹೊರವಲಯದಲ್ಲಿರುವ ಸಸ್ಯಕ್ಷೇತ್ರಕ್ಕೆ ನಗರದ ಕೋಟೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರೊಂದಿಗೆ ಭೇಟಿ ನೀಡಿ ಪರಿಸರ ಸಂರಕ್ಷಣಾ ಕಾರ್ಯದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭೂಮಿಯ ಮೇಲೆ ತಂತ್ರಜ್ಞಾನದ ಪ್ರಭಾವದಿಂದ ತಾಪಮಾನ ಹೆಚ್ಚಾಗುವ ಜತೆಗೆ ಜನಸಂಖ್ಯಾ ಪ್ರಮಾಣವೂ ಕೂಡ ಏರುತ್ತಿದೆ. ಇದಕ್ಕೆ ಪರ್ಯಾಯವಾಗಿ ನಾವೆಲ್ಲರೂ ನೆರೆಯ ಪ್ರದೇಶಗಳಲ್ಲಿ ಹೆಚ್ಚಿನ ಗಿಡಗಳನ್ನು ನೆಟ್ಟು ಪೋಷಣೆ ಮಾಡಿದಲ್ಲಿ ಪ್ರಕೃತಿಯನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ.

 ಇಕೋ ಕ್ಲಬ್ ನ ಸಂಚಾಲಕರಾದ ವಾಣಿಶ್ರೀ ಮಾತನಾಡಿ, ವಿದ್ಯಾರ್ಥಿಗಳು ಶಾಲಾ ಕಲಿಕೆಯ ಜೊತೆಗೆ ಸಮುದಾಯ ದಲ್ಲಿ ಪರಿಸರ ಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳ ಪೋಷಣೆ, ಜನಸಂಖ್ಯೆ ನಿಯಂತ್ರಣ, ಸ್ವಚ್ಛತೆ, ನೈರ್ಮಲೀಕರಣ ಸೇರಿದಂತೆ ಇತರ ವಿಷಯಗಳ ಬಗ್ಗೆ ಮಾಹಿತಿ ಪಡೆಯುವುದು ಅತ್ಯವಶ್ಯಕವಾಗಿದೆ. ಶಾಲಾ ಆವರಣ ಮತ್ತು ಮನೆಯ ಆವರಣದಲ್ಲಿ ಹೆಚ್ಚಿನ ಗಿಡಗಳನ್ನು ನೆಟ್ಟು ಪೋಷಣೆ ಮಾಡಿದಲ್ಲಿ ನಿಮ್ಮೊಂದಿಗೆ ಗಿಡಗಳೂ ಕೂಡ ಬೆಳೆದು ಸಮಾಜ ಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡುತ್ತವೆ. ಇಂತಹ ಸತ್ಕಾರ್ಯಗಳಿಂದ ಬದುಕು ಸಾರ್ಥಕ ಗೊಳ್ಳುತ್ತದೆ ಎಂದು ಹೇಳಿದರು.

 ಈ ವೇಳೆ ಶಾಲಾ ಸಹ ಶಿಕ್ಷಕಿಯರಾದ ಮಂಜುಳಾ, ಜಿ.ಎನ್.ಸುಮಾ, ಸ್ಥಳೀಯ ಮುಖಂಡರಾದ ಎ.ಎಸ್.ಜಗನ್ನಾಥ್  ಸೇರಿದಂತೆ ಇತರರು ಭಾಗವಹಿಸಿದ್ದರು.