Saturday, 14th December 2024

Chikkaballapur News: ಉಪಲೋಕಾಯುಕ್ತ ವೀರಪ್ಪ ಜಿಲ್ಲಾ ಲೋಕಾಯುಕ್ತ ಎಸ್ಪಿ ಸರಕಾರಿ ಆಸ್ಪತ್ರೆ, ಸರಕಾರಿ ವಸತಿ ನಿಲಯಕ್ಕೆ ದಿಢೀರ್ ಭೇಟಿ ಪರಿಶೀಲನೆ

ಚಿಂತಾಮಣಿ: ಉಪಲೋಕಾಯುಕ್ತ ಬಿ.ವೀರಪ್ಪ ಹಾಗೂ ಚಿಕ್ಕಬಳ್ಳಾಪುರದ ಲೋಕಾಯುಕ್ತ ಡಿವೈಎಸ್ಪಿ ವೀರೇಂದ್ರ ಕುಮಾರ್ ಚಿಂತಾಮಣಿ ನಗರದ ಸರ್ಕಾರಿ ಅಸ್ಪತ್ರೆ, ಪಾಲಿಟೆಕ್ನಿಕ್ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಿರ್ಲಕ್ಷ್ಯ ತೋರಿದ್ದ ಅಧಿಕಾರಿಗಳಿಗೆ ಚಳಿ ಬಿಡಿಸಿ ಸರಿಯಾಗಿ ಕರ್ತವ್ಯ ಪಾಲಿಸುವಂತೆ ತಾಕೀತು ಮಾಡಿದರು.

ನಗರದ ಸರ್ಕಾರಿ ಅಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ವೈದ್ಯರು ಔಷಧಿಗಳನ್ನು ಹೊರಗಡೆಯಿಂದ ತರಿಸಲು ಚೀಟಿ ಬರೆದುಕೊಡುವುದನ್ನು ಕಂಡು ತೀವ್ರ ಅಸಮದಾನ ವ್ಯಕ್ತಪಡಿಸಿದರು. ಸರಕಾರ ಬಡವರಿಗೆಂದೇ ಔಷಧಿಗಳನ್ನು ಒದಗಿಸಿ ಎಂದು ಲಕ್ಷಾಂತರ ರೂ  ಅನುದಾನ ಬಿಡುಗಡೆ ಮಾಡುತ್ತದೆ. ಅಕಸ್ಮಾತ್ ಯಾವುದಾದರೂ ತುರ್ತು ಔಷಧಿ ಬೇಕಾದರೆ ದಿನಕ್ಕೆ 10 ಸಾವಿರವರೆಗೂ ಖರ್ಚು ಮಾಡಿ ತರಿಸಿಕೊಳ್ಳಲು ಅವಕಾಶವಿದೆ. ಇಷ್ಟಾದರೂ ವೈದ್ಯರು ಚೀಟಿ ಬರೆದುಕೊಡುವ ಹಳೆಯ ಹವ್ಯಾಸ ನಿಲ್ಲಿಸಿಲ್ಲ. ಸರ್ಕಾರಿ ವೈದ್ಯರು ಹೊರಗಡೆ ಔಷದಿ ತೆಗೆದುಕೊಳ್ಳಿ ಎಂದು ಬರೆದು ಕೊಡುವುದು ಅವಮಾನ ಎಂದರು.

ಚೀಟಿ ಬರೆದುಕೊಟ್ಟು ಉಪಲೋಕಾಯುಕ್ತರಿಗೆ ಸಿಕ್ಕಿಬಿದ್ದ ವೈದ್ಯ ಶಿವಕುಮಾರ್ ಅವರನ್ನು ಸ್ಥಳದಲ್ಲಿಯೇ ತರಾಟೆಗೆ ತೆಗೆದುಕೊಂಡರು. ಇದು ಸರ್ಕಾರಿ ಆಸ್ಪತ್ರೆಯೋ ಅಥವಾ ಖಾಸಗಿ ಕ್ಲಿನಿಕ್ಕೋ ಎಂದು ಪ್ರಶ್ನಿಸಿದರು. ಬಡರೋಗಿಗಳಿಗೆ ಚೀಟಿ ಬರೆದುಕೊಟ್ಟು ಹೊರಗಡೆಯಿಂದ ಔಷಧಿ ತರಿಸುತ್ತಾರೆ. ಇಲ್ಲಿನ ಔಷಧಿಗಳು ಸಂಗ್ರಹಾಗಾರದಲ್ಲಿ ಜನಬಳಕೆಗೆ ಬಾರದೆ ಕೊಳೆಯುತ್ತವೆ. ಅವಧಿ ಮುಗಿದ ನಂತರ ತ್ಯಾಜ್ಯ ಮಾಡಿ ಕಸಕ್ಕೆ ಹಾಕುತ್ತಾರೆ ಎಂದು ಸುದ್ದಿಗಾರರಿಗೆ ತಿಳಿಸಿ ತಮ್ಮ ಅಸಮಧಾನ ಹೊರಹಾಕಿದರು.

ಭೇಟಿಯ ವೇಳೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆಯ ಶೌಚಾಲಯಗಳು, ಔಷಧಿಗಳ ದಾಸ್ತಾನು ಕೊಠಡಿ ಸೇರಿದಂತೆ ಆಸ್ಪತ್ರೆಯ ಎಲ್ಲ ವಿಭಾಗಗಳನ್ನು ಪರಿಶೀಲಿಸಿದರು. ವೈದ್ಯರ ಮೇಲೆ ನಂಬಿಕೆಯೇ ಇಲ್ಲ. ಬಹುತೇಕ ವೈದ್ಯರು ಹೊರಗಡೆಗೆ ಬರೆದುಕೊಡುತ್ತಾರೆ. ಇಲ್ಲಿಗೆ ಬರುವವರೆಲ್ಲ ಬಡವರು. ಶೌಚಾಲಯಗಳನ್ನು ರಿಪೇರಿ ಮಾಡುವುದಾಗಿ ಆಡಳಿತ ವೈದ್ಯಾಧಿಕಾರಿ ಸಂತೋಷ್ ತಿಳಿಸಿದ್ದಾರೆ. ಮತ್ತೊಮ್ಮೆ ಇಲ್ಲಿಗೆ ಬರುವುದಾಗಿ ತಿಳಿಸಿದರು.

ರಾಜ್ಯ ಕಾನೂನು ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗಲೂ ಇಲ್ಲಿನ ಸರ್ಕಾರಿ ಅಸ್ಪತ್ರೆಗೆ ಭೇಟಿ ನೀಡಿದ್ದೆ. ಆಸ್ಪತ್ರೆಯ ವ್ಯವಸ್ಥೆ ಸಮಾದಾನ ತರುವುದಿಲ್ಲ. ಗಂಡಸರ ಎಲ್ಲ ಶೌಚಾಲಯಗಳಿಗೂ ಬೀಗ ಹಾಕಲಾಗಿದೆ. ಮಹಿಳೆಯರ ಒಂದು ಶೌಚಾಲಯ ಮಾತ್ರ ತೆಗೆದಿದ್ದಾರೆ. ಹಾಸಿಗೆಗಳು ಹಾಳಾಗಿವೆ. ಆಡಳಿತ ವೈದ್ಯಾಧಿಕಾರಿಗಳು ರಿಪೇರಿ ಎಂದು ಸಬೂಬು ಹೇಳಿದ್ದಾರೆ ಎಂದು ತಿಳಿಸಿದರು.

ವಿದ್ಯಾರ್ಥಿನಿಲಯಕ್ಕೆ ಭೇಟಿ ವಾರ್ಡನ್‌ಗೆ ತರಾಟೆ: ನಗರದ ಸರ್ಕಾರಿ ಪಾಲಿಟೆಕ್ನಿಕ್ ಪಕ್ಕದ ವಿದ್ಯಾರ್ಥಿನಿಯರ  ನಿಲಯ ಹಾಗೂ ಸಬ್ ಜೈಲು ಬಳಿ ಇರುವ ಮೂರು ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿದ್ದರು. ಎರಡು ದಿನಗಳ ಹಿಂದೆ ಊಟದಲ್ಲಿ ಜಿರಳೆ ಪತ್ತೆಯಾದ ಪೋಟೋವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು ಇದೇ ಪೋಟೊ ತೋರಿಸಿ ದೂರು ಹೇಳಿದಾಗ ಉಪಲೋಕಾಯುಕ್ತರು ವಾರ್ಡನ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ನಿಮ್ಮ ಮನೆಯ ಮಕ್ಕಳಿಗೆ ಇದೇ ರೀತಿಯ ಊಟ ನೀಡುತ್ತೀರಾ? ಎಂದು ಪ್ರಶ್ನಿಸಿ, ನಿಮ್ಮ ವಿರುದ್ಧ ಕ್ರಮಕೈಗೊಳ್ಳುವು ದಾಗಿ ಎಚ್ಚರಿಸಿದರು. ಅಡುಗೆ ಕೋಣೆ, ಆಹಾರ ದಾಸ್ತಾನು ಕೊಠಡಿ, ವಸತಿ ಕೊಠಡಿಗಳನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳಿಂದ ಊಟ, ವಸತಿ ಬಗ್ಗೆ ಮಾಹಿತಿ ಪಡೆದರು.

ವಿದ್ಯಾರ್ಥಿನಿಲಯದಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಒದಗಿಸುತ್ತಿಲ್ಲ. ಒಂದು ಕೊಠಡಿಯಲ್ಲಿ ಅನೇಕ ವಿದ್ಯಾರ್ಥಿನಿಯರಿಗೆ ಅವಕಾಶ ನೀಡಿರುವುಯದರಿಂದ ಇಕ್ಕಟ್ಟಾಗಿದ್ದು, ಅಭ್ಯಸ ಮಾಡಲು ತೊಂದರೆಯಾಗಿದೆ. ಅಡಿಗೆದಾರರು ಸ್ಪಂದಿಸುವುದಿಲ್ಲ, ಬಟ್ಟೆ ತೊಳೆಯುವ ಸ್ಥಳ ಕೊಳಕಾಗಿದೆ. ಸಮರ್ಪಕ ಬೆಡ್ ವ್ಯವಸ್ಥೆ, ಸ್ನಾನಕ್ಕೆ ಬಿಸಿನೀರು ಇಲ್ಲ, ಸಾರು ಸರಿಯಾಗಿ ಮಾಡುವುದಿಲ್ಲ ಎಂದು ವಿದ್ಯಾರ್ಥಿನಿಯರು ದೂರುಗಳ ಸುರಿಮಳೆಯನ್ನೇ ಸುರಿಸಿದರು.

ಕೊಠಡಿಗಳ ಕಿಟಕಿ, ಬಾಗಿಲು, ಆಹಾರ ದಾಸ್ತಾನು ಸ್ಥಳವನ್ನು ಗಮನಿಸಿ ಉಪಲೋಕಾಯುಕ್ತರು ಅಸಮದಾನ ವ್ಯಕ್ತಪಡಿಸಿದರು. ಮಕ್ಕಳು ತಾವೇ ಕಸ ಹೊಡೆದು, ಧೂಳು ಹೊಡೆಯುವ ವ್ಯವಸ್ಥೆ ಬದಲಾಗಬೇಕು. ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು.