ಚಿಕ್ಕಬಳ್ಳಾಪುರ : ಲೋಕಸಭೆಯಲ್ಲಿ ಗೃಹಸಚಿವ ಅಮಿತ್ ಷಾ ಅಂಬೇಡ್ಕರ್ ಬಗ್ಗೆ ಲೇವಡಿ ಮಾಡಿರುವ ಉದ್ದಟತನ ವನ್ನು ಖಂಡಿಸಿ ಚಿಕ್ಕಬಳ್ಳಾಪುರ ನಗರದಲ್ಲಿ ಗುರುವಾರ ದಲಿತ ಮುಖಂಡರು ಖಂಡನೆ ವ್ಯಕ್ತಪಡಿಸಿದ್ದಾರೆ.
ವಿರೋಧ ಪಕ್ಷದವರು ಪದೇ ಪದೇ ಅಂಬೇಡ್ಕರ್ ಅಂಬೇಡ್ಕರ್ ಎಂದು ಹೇಳುವ ಬದಲಿಗೆ ದೇವರ ಹೆಸರೇಳಿದ್ದರೆ ಸ್ವರ್ಗನಾದರೂ ದೊರೆಯುತ್ತಿತ್ತು ಎಂದು ಹೇಳುವ ಮೂಲಕ ಅಮಿತ್ ಷಾ ಬಾಬಾ ಸಾಹೇಬರಿಗೆ ಅಪಮಾನ ಮಾಡಿದ್ದಾರೆ. ಪ್ರಧಾನಿ ಮೋದಿ ಕೂಡಲೇ ಅವರನ್ನು ಸಂಪುಟದಿ0ದ ವಜಾಗೊಳಿಸಿ ದೇಶದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ನಗರದಲ್ಲಿ ಗುರುವಾರ ಸುದ್ದಿಮಾಧ್ಯಮದೊಂದಿಗೆ ಮಾತನಾಡಿದ ಸುಧಾ ವೆಂಕಟೇಶ್ ಬಿಜೆಪಿ ಸರಕಾರ ಮನುವಾದಿ ಸರಕಾರ ಎಂಬುದನ್ನು ಪದೇ ಪದೇ ಸಾಬೀತು ಮಾಡುತ್ತಿದ್ದಾರೆ. ಸಂವಿಧಾನವನ್ನು ಬದಲಾವಣೆ ಮಾಡುವುದ ಕ್ಕಾಗಿಯೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಅಂದಿನ ಸಂಸದ ಅನಂತಕುಮಾರ್ ಹೆಗ್ಗಡೆ ಹೇಳಿದ್ದರು. ಈಗ ಶಾಸನ ಮಾಡುವ ಲೋಕಸಭೆಯಲ್ಲಿಯೇ ಪದೇ ಪದೇ ಅಂಬೇಡ್ಕರ್ ಹೆಸರೇಳುವುದು ತಪ್ಪು. ಬದಲಿಗೆ ದೇವರ ಹೆಸರು ಹೇಳಿ ಎಂದು ಪರೋಕ್ಷವಾಗಿ ಗೃಹಸಚಿವರೇ ಹೇಳುತ್ತಿದ್ದಾರೆ.ಇದನ್ನು ಪ್ರತಿಪಕ್ಷಗಳು ಖಂಡಿಸಿದರೆ ಪ್ರಧಾನ ಶಾ ಹೇಳಿಕೆಯಲ್ಲಿ ತಪ್ಪಿಲ್ಲ ಎನ್ನುತ್ತಾ ಸಮರ್ಥಿಸಿದ್ದಾರೆ. ಕೇಂದ್ರದ ಮೋದಿ ಸರಕಾರ ದಲಿತ ವಿರೋಧಿ,ಅಂಬೇಡ್ಕರ್ ವಿರೋಧಿ, ಸಂವಿಧಾನ ವಿರೋಧಿ ಸರಕಾರವಾಗಿದೆ. ಇಲ್ಲಿರುವ ಮನುವಾದಿಗಳಿಂದ ಇದನ್ನಲ್ಲದೆ ಬೇರೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಹರಿಹಾಯ್ದರು.
ಅಂಬೇಡ್ಕರ್ ವಿಶ್ವಶ್ರೇಷ್ಟ ಸಂವಿಧಾನವನ್ನು ಭಾರತಕ್ಕೆ ನೀಡಿದ್ದರೂ, ಇದರ ಮೂಲಕವೇ ಅಧಿಕಾರಕ್ಕೆ ಬಂದಿರುವ ಬಿಜೆಪಿಯ ಮನುಸಂತಾನ ಹೆಜ್ಜೆಹೆಜ್ಜೆಗೂ ಸಂವಿಧಾನದ ಮೇಲೆ ದಾಳಿ ಮಾಡುತ್ತಲೇ ಬಂದಿದೆ.ಇದನ್ನು ಗ್ರಹಿಸಿಯೇ ದೇಶಕ್ಕೆ ಸಂವಿಧಾನ ಸಮರ್ಪಣೆ ಮಾಡುವ ಸಂದರ್ಭದಲ್ಲಿ ಬಾಬಾ ಸಾಹೇಬರು ಹೇಳಿದ್ದರು, ನಾನು ಭಾರತ ದೇಶಕ್ಕೆ ಒಪ್ಪುವ ಉತ್ತಮ ಸಂವಿಧಾನವನ್ನೇ ನೀಡಿದ್ದೇನೆ. ಆದರೆ ಇದನ್ನು ಜಾರಿಮಾಡುವ ಸ್ಥಾನದಲ್ಲಿ ಕುಳಿತುಕೊಳ್ಳುವ ಜನ ಒಳ್ಳೆಯವರಿದ್ದರೆ, ಒಳ್ಳೆಯದೇ ಆಗಲಿದೆ, ಕೆಟ್ಟವರಿದ್ದರೆ ಕೆಟ್ಟದ್ದೇ ಆಗಲಿದೆ ಎಂದಿದ್ದರು. ಅ0ಬೇಡ್ಕರ್ ಹೇಳಿರುವ ಮಾತು ಇಂದಿಗೆ ನಿಜವಾಗಿದೆ.ಗುಜರಾತ್‌ನಲ್ಲಿ ಹಲವು ಕೇಸುಗಳನ್ನು ಮೈಲೇಮೆ ಹಾಕಿಸಿಕೊಂಡು ಜೈಲಿಗೆ ಹೋಗಿ ಬಂದಿದ್ದ, ಗಡಿಪಾರು ಆಗಿದ್ದ ಅಮಿತ್ ಷಾ ಇಂದು ದೇಶದ ಗೃಹಮಂತ್ರಿಯಾಗಿ ಸರ್ವಾಧಿಕಾರಿಯಂತೆ ವರ್ತಿಸು ತ್ತಿದ್ದಾರೆ. ಇಂತಹ ಕೆಟ್ಟ ವ್ಯಕ್ತಿಯನ್ನು ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯಲು ಬಿಡದೆ ರಾಜೀನಾಮೆ ಪಡೆಯಬೇಕು ಎಂದು ಪ್ರಧಾನಿಗಳನ್ನು ಒತ್ತಾಯಿಸಿದರು.
ಮಾಜಿ ನಗರಸಭೆ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ ಅಮಿತ್ ಶಾ ಅವರಿಗೆ ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ.ಅವರ ಪಾದದೂಳಿಗೂ ಸಮನಿಲ್ಲದ ಈ ವ್ಯಕ್ತಿ ಅವರ ಹೆಸರು ಹೇಳುವುದನ್ನು ಸಹಿಸಲ್ಲ ಎಂದರೆ ಎಂತಹ ಕೆಟ್ಟ ಮನುಷ್ಯ ಎನ್ನುವುದು ದೇಶದ ಜನತೆಗೆ ತಿಳಿಯಲಿದೆ.ಈತನ ಮಾತನ್ನು ನಾವು ಯಾರು ಒಪ್ಪುವುದಿಲ್ಲ. ನೀವು ಕೂಡಲೇ ರಾಜೀನಾಮೆ ಕೊಡಲಿಲ್ಲ ಎಂದರೆ ದೇಶಧ್ಯಂತ ಉಗ್ರವಾಗಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ದಸಂಸ ಮುಖಂಡ ಬಿ.ವಿ.ಆನಂದ್ ಮಾತಾಡಿ ದಲಿತರು ಅಂಬೇಡ್ಕರ್ ಅವರ ಧ್ಯಾನ ಮಾಡದೆ ಇನ್ನಾರನ್ನು ಧ್ಯಾನ ಮಾಡಲು ಸಾಧ್ಯ.ಪ್ರಧಾನಿ ವಿದೇಶಕ್ಕೆ ಹೋದಾಗ ನಾವು ಬುದ್ದನ ನಾಡಿನಿಂದ ಬಂದಿದ್ದೇವೆ ಎಂದು ಹೇಳುವ ಇವರು ದೇಶದಲ್ಲಿ ಅಂಬೇಡ್ಕರ್ ವಿರುದ್ದ ನಡೆದುಕೊಳ್ಳುತ್ತಿರುವುದು ಖಂಡನೀಯ. ಇವರು ಗುಜರಾತ್ ಸರಕಾರದಲ್ಲಿ ಗೃಹ ಮಂತ್ರಿ ಆಗಿದ್ದಾಗ ಗಡಿಪಾರು ಆಗಿ ಜೈಲುವಾಸ ಅನುಭವಿಸಿ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದು ಕೇಂದ್ರ ದಲ್ಲಿ ಗೃಹಮಂತ್ರಿ ಆಗಿದ್ದಾರೆ. ಇವರು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಬೇಕು. ಅಲ್ಲಿಯವರೆಗೆ ದಸಂಸ ವಿರಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಮುಖಂಡರಾದ ಎನ್.ಶ್ರೀನಿವಾಸ್, ಬಿ.ವಿ.ಆನಂದ್, ಕಂಗಾನಹಳ್ಳಿ ನಾರಾಯಣಸ್ವಾಮಿ, ವೆಂಕಟೇಶ್, ರಮಣಪ್ಪ, ಸಾಗರ್ ಮತ್ತಿತರರು ಇದ್ದರು.