Tuesday, 19th November 2024

Chikkaballapur News: ಬಾಗೇಪಲ್ಲಿ : ಪಟ್ಟಣದ ಚಿತ್ರಾವತಿ ನದಿಗೆ ಬೇಕಿದೆ ನೈರ್ಮಲ್ಯದ ಚಿಕಿತ್ಸೆ

ಬಾಗೇಪಲ್ಲಿ: ಪಟ್ಟಣದ ಮೂಲಕ ಹರಿದು ಆಂದ್ರಪ್ರದೇಶದ ಕಡೆ ಸಾಗುವ ಚಿತ್ರಾವತಿ ನದಿ ನೈರ್ಮಲ್ಯ ಕಾಣದೆ ಗಬ್ಬು ನಾರುವ ಪರಿಸ್ಥಿತಿ ನಿರ್ಮಾಣ ವಾಗಿದೆ.

ನದಿ ದಡದಲ್ಲಿನ ಕೆಲ ಹೋಟೆಲ್, ಗ್ಯಾರೇಜ್ ಸೇರಿದಂತೆ ಹಲವು ಅಂಗಡಿಗಳ ತ್ಯಾಜ್ಯ ನೀರು, ಕಸಕಡ್ಡಿಯ ಜೊತೆಗೆ ಬಿಸಾಡುವ ಪ್ಲಾಸ್ಟಿಕ್ ನದಿ ಪಾತ್ರ ಸೇರುತ್ತಿದೆ. ಇದರಿಂದಾಗಿ ನದಿಯಲ್ಲಿನ ನೀರು ಮಲಿನಗೊಳ್ಳುತ್ತಿದ್ದು, ಹಲವು ರೋಗರುಜುನಗಳನ್ನು ಹರಡುವ ಭೀತಿಯಲ್ಲಿ ಸ್ಥಳೀಯ ವಸತಿ ಪ್ರದೇಶದ ನಿವಾಸಿಗಳು ದಿನದೂಡುತ್ತಿದ್ದಾರೆ. ಇರುವ ಏಕೈಕ ನದಿ ಎನಿಸಿಕೊಂಡಿರುವ ಚಿತ್ರಾವತಿಯನ್ನು ಬರನಾಡಿನ ಜನತೆಯ ಸಮರ್ಪಕ ರೀತಿಯಲ್ಲಿ ರಕ್ಷಿಸಿಕೊಳ್ಳುತ್ತಿಲ್ಲ. ನದಿಯ ದಡದಲ್ಲಿ ಮುಳ್ಳುಗಂಟಿಗಳು, ಪೊದೆಗಳು ಅರಳಿಕೊಂಡಿವೆ. ಅಷ್ಟೇ ಅಲ್ಲದೆ ಬಹಳಷ್ಟು ತ್ಯಾಜ್ಯ ಸುರಿಯುವ ಹಳ್ಳದಂತಾಗಿದ್ದು, ನದಿಯಲ್ಲಿನ ಜಲಚರಗಳಿಗೂ ಹಾನಿಯಾಗುತ್ತಿದೆ.

ಈ ಬಗ್ಗೆ ಪುರಸಭೆಯು ಕ್ರಮ ಕೈಗೊಂಡು ಪಟ್ಟಣದ ವ್ಯಾಪ್ತಿಯ ನದಿ ದಡ ಪ್ರದೇಶದಲ್ಲಿ ಉತ್ತಮ ಉದ್ಯಾನ ಹಾಗೂ ವಾಯು ವಿಹಾರಿಗಳಿಗೆ ಅನುಕೂಲವಾಗುವಂತೆ ಸುಂದರಗೊಳಿಸಬೇಕಿದೆ.

ಇತ್ತೀಚಿಗೆ ಚಿತ್ರಾವತಿ ಮೇಲು ಸೇತುವೆಯಲ್ಲಿ ಸಾರ್ವಜನಿಕರು ಹಾಗೂ ಮೀನುಗಾರರು, ಸೇತುವೆ  ನದಿಯಲ್ಲಿ ಇರುವ ಮೀನು ಹಿಡಿದು ತಿನ್ನುತ್ತಿದ್ದಾರೆ, ಸಾರ್ವಜನಿಕರು ಈ ಸೇತುವೆ ತುಂಬಾ  ತ್ಯಾಜ್ಯ ಪದಾರ್ಥಗಳು ಸುರಿಸಿದ್ದು, ಈ ತ್ಯಾಜ್ಯ   ಪದಾರ್ಥಗಳನ್ನು ಮೀನುಗಳು ತಿಂದು ಜೀವಿಸುತ್ತಿವೆ, ಜನರು  ಮೀನುಗಳನ್ನು ಹಿಡಿದು  ತಿನ್ನುತ್ತಿದ್ದು  ಇದರಿಂದ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳನ್ನು ಹೊರಡುವ ಪರಿಸ್ಥಿತಿ ಮುಂದಾಗಿದೆ. ಇದರಿಂದ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಾಗಿದೆ. ಇನ್ನು ನದಿ ದಡದಲ್ಲಿ ತಂತಿಯ ರಕ್ಷಣಾ ಜಾಲವನ್ನು ನಿರ್ಮಿಸಬೇಕಿದೆ. ಇದರಿಂದಾಗಿ ನದಿಗೆ ತ್ಯಾಜ್ಯ ಎಸೆಯುವವರು ಸುಮ್ಮನಾಗಿ ನದಿಯು ಮಲಿನ ಮುಕ್ತವಾಗುತ್ತದೆ.

ಈ ಬಗ್ಗೆ ಸಿಪಿಎಂ ಮುಖಂಡ ಚನ್ನರಾಯಪ್ಪರವರು ಮಾತನಾಡಿ, ಐತಿಹಾಸಿಕ ಚಾರಿತ್ರ‍್ಯ ಹೊಂದಿರುವ ಚಿತ್ರಾವತಿ ನದಿಯ ಪಾತ್ರವೂ ಪಟ್ಟಣದ ತ್ಯಾಜ್ಯ ನೀರು ಸೇರುತ್ತಿರುವುದರಿಂದ ಸಂಪೂರ್ಣ ಕಲುಷಿತಗೊಂಡಿದೆ. ಜೊತೆಗೆ ಇದೇ ನದಿಯಲ್ಲಿ ಬಡಬಗ್ಗರು ಮೀನುಗಳನ್ನು ಹಿಡಿಯುತ್ತಿದ್ದು, ಅವನ್ನು ಸೇವಿಸುತ್ತಿರುವುದರಿಂದಾಗಿ ರೋಗರುಜುನೆಗಳಿಗೆ ತುತ್ತಾಗುತ್ತಿದ್ದಾರೆ. ಆದರೆ ಈ ಬಗ್ಗೆ ಸಂಬ0ಧಪಟ್ಟ ಪುರಸಭೆಯ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ, ನದಿ ಪಾತ್ರವನ್ನು ಸ್ವಚ್ಛಗೊಳಿಸುವ ಗೋಜಿಗೆ ಹೋಗುತ್ತಿಲ್ಲ. ಜೊತೆಗೆ ತ್ಯಾಜ್ಯವನ್ನು ನದಿಗೆ ಬಿಡುತ್ತಿರುವುದನ್ನು ತಡೆಯುವಂತಹ ಯಾವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು.