ಚಿಕ್ಕಬಳ್ಳಾಪುರ : ಜಿಲ್ಲೆಯ ಭ್ರೂಣಲಿಂಗ ಪತ್ತೆ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಜ್ಞ ವೈದ್ಯರು ಹಾಗೂ ಸಿಬ್ಬಂದಿಯ ಚಲನವಲನಗಳ ಮೇಲೆ ನಿಗಾ ಇಡುವಂತೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಗುರುವಾರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ನ ಸರ್. ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಪ್ರಸವ ಪೂರ್ವ ಮತ್ತು ಗರ್ಭ ಪೂರ್ವ ಲಿಂಗ ಪತ್ತೆ ತಂತ್ರಗಳ ಕುರಿತ ಕಾರ್ಯಾಗಾರ (ಪಿ.ಸಿ.&ಪಿ.ಎನ್.ಡಿ.ಟಿ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ೯ ಸರ್ಕಾರಿ ಹಾಗೂ ೩೪ ಖಾಸಗಿ ಒಟ್ಟು ೪೨ ಭ್ರೂಣ ಪತ್ತೆ ಕೇಂದ್ರಗಳು ನೋಂದಣಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಈ ಕೇಂದ್ರಗಳ ಮಾಲೀಕರು, ಮುಖ್ಯಸ್ಥರು, ವೈದ್ಯರು, ರೆಡಿಯೋಲಜಿಸ್ಟ್ ಗಳು, ಸಿಬ್ಬಂದಿಗಳು ಬಹಳ ಎಚ್ಚರಿಕೆಯಿಂದ ಕೆಲಸವನ್ನು ನಿರ್ವಹಿಸಬೇಕು. ನಿಯಮ ಬಾಹಿರವಾಗಿ ಭ್ರೂಣಲಿಂಗ ಪತ್ತೆ ಮಾಡುವುದನ್ನು ಸಂಪೂರ್ಣವಾಗಿ ತಡೆಗಟ್ಟಬೇಕು. ತಾವು ಮಾಡುವ ಸ್ಕ್ಯಾನಿಂಗ್ ಗಳ ವಿವರವನ್ನು ದಾಖಲೆ ಸಮೇತ ಕ್ರಮವಾಗಿ ಇಟ್ಟಿರಬೇಕು. ಅನಿರೀಕ್ಷಿತ ದಾಳಿವೇಳೆ ಅಥವಾ ಯಾವುದೇ ಸಂದರ್ಭದಲ್ಲಿ ಮೇಲಿನ ಅಧಿಕಾರಿಗಳು (ಪಿ.ಸಿ.& ಪಿ.ಎನ್.ಡಿ.ಟಿ) ತಂಡದವರು ಕೇಳುವ ಎಲ್ಲಾ ದಾಖಲೆಗಳನ್ನು ಹಾಗೂ ಮಾಹಿತಿಯನ್ನು ಸಮರ್ಪಕವಾಗಿ ನೀಡಬೇಕು. ಯಾವುದೇ ಕಾರಣಕ್ಕೂ ಅಕ್ರಮ ಲಿಂಗಪತ್ತೆ ಕಾರ್ಯಗಳಲ್ಲಿ ತೊಡಗಬಾರದು, ನಿಯಮಾವಳಿ ರೀತ್ಯವೇ ಕಾರ್ಯನಿರ್ವಹಿಸಬೇಕು.
ಯಾವುದೇ ವ್ಯಕ್ತಿಗಳು, ಗರ್ಭಿಣಿಯರು ಲಿಂಗ ಪತ್ತೆ ಮಾಡಿ ಮಾಹಿತಿ ತಿಳಿಸುವಂತೆ ಯಾರಾದರೂ ಒತ್ತಾಯಪಡಿಸಿದರೆ ಅಥವಾ ಪ್ರೆರೇಪಿಸಿದರೆ ಕೂಡಲೆ ಮೇಲಾಧಿಕಾರಿಗಳಿಗೆ, ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಅಂತಹವರ ಮಾಹಿತಿ ನೀಡಿ ಶಿಸ್ತು ಕ್ರಮಕ್ಕೆ ಒಳಪಡಿಸಬೇಕು. ಆಗ ಮಾತ್ರ ಲಿಂಗಾನುಪಾತದ ಸಮತೋಲನವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದು ವೈದ್ಯಾಧಿಕಾರಿಗಳಿಗೆ, ರೆಡಿಯಾಲಜಿಸ್ಟ್ ಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ೨೦೨೨-೨೩ ಲಿಂಗಾನುಪಾತದ ಪ್ರಮಾಣವು ೮೭೦ ಇದ್ದು, ೨೦೨೩-೨೪ರಲ್ಲಿ ೯೩೬ಕ್ಕೆ ಲಿಂಗಾನುಪಾತವು ಹೆಚ್ಚಾಗಿರುತ್ತದೆ ಈ ಬೆಳವಣಿಗೆಯು ಸಮಾದಾನಕರವಾದರೂ ಕೂಡ ೧೦೦೦ ಪುರುಷರಿಗೆ ೧೦೦೦ ಮಹಿಳೆಯರು ಇರುವಂತಹ ಲಿಂಗಾನು ಪಾತ ಪ್ರಮಾಣದ ವಾತಾವರಣವನ್ನು ಜಿಲ್ಲೆಯಲ್ಲಿ ಸೃಷ್ಠಿಸಬೇಕು. ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಪ್ರಸ್ತುತ ೧೦೦೦ ಪುರುಷರಿಗೆ ೧೦೨೬ ಮಹಿಳಾ ಮತದಾರರು ಇದ್ದಾರೆ ಅದೇ ರೀತಿ ಲಿಂಗಾನುಪಾತದ ಪ್ರಮಾಣವು ಕೂಡ ಹೆಚ್ಚಳವಾಗಬೇಕು. ಆ ನಿಟ್ಟಿನಲ್ಲಿ ನಾಗರೀಕರು ಹಾಗೂ ಈ ಕ್ಷೇತ್ರದಲ್ಲಿ ದುಡಿಯುವ ವೈದ್ಯರು, ಸಿಬ್ಬಂದಿಯು ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್, ಆರ್.ಸಿ.ಹೆಚ್ ಅಧಿಕಾರಿ ಡಾ. ಸಂತೋಷ್ ಬಾಬು, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರ ರೆಡ್ಡಿ, ವಕೀಲರಾದ ಸುಧಾಕರ್, ತಾಲ್ಲೂಕು ಆರೋಗ್ಯಾಧಿಕಾರಿಗಳು, ಸ್ಕ್ಯಾನಿಂಗ್ ಕೇಂದ್ರಗಳ ಮುಖ್ಯಸ್ಥರು, ಸಿಬ್ಬಂದಿಗಳು ಇದ್ದರು.
ಇದನ್ನೂ ಓದಿ: #BranchInauguration