Monday, 28th October 2024

Chikkaballapur News: ಗುಡಿಬಂಡೆ ಪ.ಪಂ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ, ಕಾಂಗ್ರೆಸ್ ಪಾಲಾದ ಗುಡಿಬಂಡೆ ಪ.ಪಂ

ಗುಡಿಬಂಡೆ: ಸ್ಥಳೀಯ ಪಟ್ಟಣ ಪಂಚಾಯತಿ(Pattana Panchayat) ಯ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ವಿಕಾಸ್, ಉಪಾಧ್ಯಕ್ಷ ಸ್ಥಾನಕ್ಕೆ ಗಂಗರಾಜು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಸಿಗ್ಬತ್ತುಲ್ಲಾ ತಿಳಿಸಿದರು.

ಗುಡಿಬಂಡೆ (Gudibande) ಪಟ್ಟಣ ಪಂಚಾಯತಿಯ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲು ಘೋಷಣೆ ಮಾಡಲಾಗಿತ್ತು. ಅದರಂತೆ ಸೆ.25 ರಂದು ಚುನಾವಣೆ ಘೋಷಣೆ ಮಾಡಿದ್ದು, ಅಧ್ಯಕ್ಷ ವಿಕಾಸ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗಂಗರಾಜು ಇಬ್ಬರು ಮಾತ್ರ ನಾಮಪತ್ರ ಸಲ್ಲಿಕೆ ಮಾಡಿ ದ್ದರು. ಈ ಕಾರಣದಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡೂ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದರು.

ಇನ್ನೂ ಪಕ್ಷೇತರ ಸದಸ್ಯ ರಾಜೇಶ್, ಜೆಡಿಎಸ್‌ನ ಬಷೀರ್ ಹಾಗೂ ಅನುಷಾ ಗೈರು ಹಾಜರಿಯಾಗಿದ್ದರು. ಪ.ಪಂ. ಎರಡನೇ ಅವಧಿಯ ಆಡಳಿತ ಕಾಂಗ್ರೇಸ್ ಪಕ್ಷದ ಪಾಲಾಗಿದೆ.

ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಕಾಂಗ್ರೆಸ್ ಪಕ್ಷದ ವಿಕಾಸ್ ಹಾಗೂ ಗಂಗರಾಜು ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಸಂತಸದ ವಿಚಾರ. ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನ ಮೀಸಲಾಗಿದ್ದ ಕಾರಣ ಆಂಕಾಕ್ಷಿಗಳು ಹೆಚ್ಚಾಗಿದ್ದರು. ಆದರೆ ಎಲ್ಲರ ಮನವೊಲಿಸಿ ಮೂರನೇ ವಾರ್ಡಿನ ಕಾಂಗ್ರೆಸ್ ಸದಸ್ಯ ವಿಕಾಸ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಗಂಗರಾಜು ಅವರನ್ನು ಆಯ್ಕೆ ಮಾಡಲಾಗಿದೆ. ಒಂದು ವರ್ಷದಲ್ಲಿ ಗುಡಿಬಂಡೆಯನ್ನು ಮಾದರಿ ಗುಡಿಬಂಡೆ ಯನ್ನಾಗಿ ಅಭಿವೃದ್ದಿ ಮಾಡಬೇಕೆಂದು ತಿಳಿಸಿದ್ದೇನೆ. ಅದರಂತೆ ಅಭಿವೃದ್ದಿ ಮಾಡುತ್ತಾರೆಂಬ ವಿಶ್ವಾಸವಿದೆ. ಸರಕಾರದಿಂದ ಪ.ಪಂ.ಗೆ ಹೆಚ್ಚು ಅನುದಾನ ಒದಗಿಸಲು ಕ್ರಮ ವಹಿಸುತ್ತೇನೆ ಎಂದರು.

ಗುಡಿಬಂಡೆ ಪ.ಪಂ ನೂತನ ಅಧ್ಯಕ್ಷ ವಿಕಾಸ್ ಮಾತನಾಡಿ, ಶಾಸಕ ಸುಬ್ಬಾರೆಡ್ಡಿ ಮಾರ್ಗದರ್ಶನದಂತೆ ಗುಡಿಬಂಡೆ ಪಟ್ಟಣ ಪಂಚಾಯತಿಯನ್ನು ಅಭಿವೃದ್ದಿ ಮಾಡುತ್ತೇವೆ. ನನ್ನ ಮೇಲೆ ನಂಬಿಕೆಯಿಟ್ಟು ಬೆಂಬಲಿಸಿದ ಎಲ್ಲಾ ಸದಸ್ಯ ರಿಗೂ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗುಡಿಬಂಡೆ ಯನ್ನು ಅಭಿವೃದ್ದಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.

ಈ ವೇಳೆ ನೂತನ ಪ.ಪಂ. ಉಪಾಧ್ಯಕ್ಷ ಗಂಗರಾಜು, ಸದಸ್ಯರಾದ ಇಸ್ಮಾಯಿಲ್ ಆಜಾದ್ ಬಾಬು, ಮಂಜುಳ, ರಾಜೇಶ್, ವೀಣಾ, ನಗೀನ್ ತಾಜ್, ಬಷೀರಾ, ಮುಖಂಡರಾದ ಆದಿರೆಡ್ಡಿ, ಹೆಚ್.ಪಿ.ಲಕ್ಷ್ಮೀನಾರಾಯಣ, ಮಂಜುನಾಥ್, ರಿಯಾಜ್, ತಿರುಮಣಿ ಮಂಜುನಾಥ್, ರಮೇಶ್, ಅಜಯ್, ಸಂಜಯ್ ಸೇರಿದಂತೆ ಹಲವರು ಇದ್ದರು.