Monday, 25th November 2024

Chikkaballapur News: ಭಗವಂತನಷ್ಟೇ ತೂಕ ಇರುವ ಮತ್ತೊಂದು ಶಬ್ಧವೆಂದರೆ ಅದು ಸ್ನೇಹ ಮಾತ್ರ-ವಿನಯ್ ಗುರೂಜಿ

ಚಿಕ್ಕಬಳ್ಳಾಪುರ: ಶಿಕ್ಷಣಕ್ಕಿರುವ ಶಕ್ತಿಯೆಂದರೆ ಅದು ನಮ್ಮನ್ನು ಎಲ್ಲಿಗೆ ಬೇಕಾದರೂ ಕರೆದುಕೊಂಡು ಹೋಗಿ ಬದುಕಿಸುತ್ತದೆ. ಇದರ ಮೂಲಕ ಮೂರು ಜನರ ಋಣ ತೀರಿಸಲೇಬೇಕು. ತಂದೆ ತಾಯಿಯ ಗುರು ಮತ್ತು ಜತೆಗೆ ಸ್ನೇಹಿತರ ಋಣ ತೀರಿಸಿ.ಏಕೆಂದರೆ ಭಗವಂತನಷ್ಟೇ ತೂಕ ಇರುವ ಮತ್ತೊಂದು ಶಬ್ಧವೆಂದರೆ ಅದು ಸ್ನೇಹ ಮಾತ್ರ ಎಂದು ಅವಧೂತ ವಿನಯ್ ಗುರೂಜಿ ತಿಳಿಸಿದರು.

ನಗರ ಹೊರವಲಯ ನಾಗಾರ್ಜುನ ಕಾಲೇಜಿನ ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ನಡೆದ ಪದವಿ ಪ್ರಧಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ದಿಸೆಯಲ್ಲಿ ಅಪರಿಚಿತರಾಗಿಯೇ ಪರಿಚಿತರಾಗುವವರು ದಿನಕಳೆದಂತೆ ಅತ್ಯುತ್ತಮ ಸ್ನೇಹಿತರಾಗುತ್ತಾರೆ. ಇಂತಹ ಸ್ನೇಹವನ್ನು ಪದವಿ ಮುಗಿದ ತಕ್ಷಣಕ್ಕೆ ಕಳೆದುಕೊಳ್ಳದೆ ಜೀವನಪರ್ಯಂತ ಉಳಿಸಿಕೊಳ್ಳಿ. ಅವರ ಕಷ್ಟಕ್ಕೆ ನೀವು ನಿಮ್ಮ ಕಷ್ಟಕ್ಕೆ ಅವರು ಹೆಗಲಾಗಬೇಕು.ಇಂತಹ ಬಳಗ ಹೆಚ್ಚಿದಷ್ಟು ಆರೋಗ್ಯವಂತ ಸಮಾಜ ಕಟ್ಟಲು ಸಾಧ್ಯವಾಗಲಿದೆ ಎಂದರು.

ನಿಮ್ಮ ಜತೆಗಿದ್ದ ಸ್ನೇಹಿತ ಕಷ್ಟದಲ್ಲಿದ್ದರೆ, ನೋಡಿ ಅಪಹಾಸ್ಯ ಮಾಡಿ ನಗುವುದಲ್ಲ.ಬದಲಿಗೆ ಅವನ ಕಷ್ಟಕ್ಕೆ ನೆರವಾ ಗುವ ಗುಣ ಬೆಳೆಸಿಕೊಳ್ಳಿ. ನಿಮ್ಮ ಬ್ಯಾಚ್‌ನ ಎಲ್ಲಾ ಗೆಳೆಯರು ಕೂಡಿ ಇಂತಿಷ್ಟು ಹಣ ಕೂಡಿಸಿ ಅವನ ಕಷ್ಟಕ್ಕೆ ನೆರವು ನೀಡಿದರೆ ಅವರ ಬದುಕು ಬಂಗಾರವಾಗಲಿದೆ ಎಂದರು ಹೇಳಿದರು.

ನಿಮ್ಮಿಷ್ಟದ ಪದವಿಗೆ ಸೇರುವ ನೀವು ಗುರುಗಳನ್ನು ತಂದೆ ತಾಯಿಯಂತೆ ಕಂಡಾಗ ಅವರ ಮಾತು ನಿಮಗೆ ತೊಂದರೆ ಕೊಡುವುದಿಲ್ಲ.ಅವರನ್ನು ಹಿಯಾಳಿಸಿ ಮಾತನಾಡಲು ಬಾಯಿ ಬರುವುದಿಲ್ಲ.ಉದ್ಯೋಗ ಬಯಸುವವರು ನಮ್ಮ ಆಶ್ರಮಕ್ಕೆ ಬಂದು ಸ್ವವಿಳಾಸದ ಪತ್ರಕೊಟ್ಟರೆ ಕೆಲಸ ಕೊಡಿಸುತ್ತೇನೆ ಎಂದರು.

ಹೊಟ್ಟೆಪಾಡಿನ ವಿದ್ಯೆಗಿಂತ ಒಟ್ಟಿಗೆ ಬಾಳುವ, ಬಾಳು ಬೆಳಗುವ ವಿದ್ಯೆ ನಮ್ಮದಾಗಬೇಕು. ನಾವು ಪಡೆದ ಶಿಕ್ಷಣವು ನಮಗೆ ಉತ್ತಮ ಸಂಸ್ಕಾರ ಕಲಿಸಬೇಕೇ ವಿನಃ ಸುಳ್ಳನ್ನು ಕಲಿಸಬಾರದು, ಮೋಸವಂಚನೆ ಕಲಿಸಬಾರದು ಎಂದು ಹೇಳುತ್ತಾ ನಾಗಾರ್ಜುನ ಕಾಲೇಜಿನಲ್ಲಿ ತಾವು ಓದುತ್ತಿದ್ದಾಗ ನಡೆದ ಘಟನೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಸಭೆಯನ್ನು ಬೇರೊಂದು ಲೋಕಕ್ಕೆ ಕೊಂಡೊಯ್ದರು.

ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆತ್ತವರು ಪಡುವ ಕಷ್ಟವನ್ನು ಮಕ್ಕಳು ಆರ್ಥಮಾಡಿಕೊಂಡಾಗ ಮಾತ್ರ, ತಮ್ಮ ಗುರಿಮುಟ್ಟಲು ಸಾಧ್ಯವಾಗುತ್ತದೆ.ಮಾನವ ಜನ್ಮ ಸಾರ್ಥಕವಾಗಬೇಕಾದರೆ ಇದ್ದಷ್ಟು ಕಾಲ ನಾವಿರುವ ಪರಿಸರದಲ್ಲಿ ಸಂತೋಷ ಉಳಿಯುವಂತೆ ಮಾಡಿ.ಇದಾದಲ್ಲಿ ನೀವೂ ಸಂತೋಷವಾಗಿದ್ದು, ಇತರರನ್ನು ಸಂತೋಷವಾಗಿರುವAತೆ ಮಾಡಲು ಸಾಧ್ಯವಾಗಲಿದೆ ಎಂದರು.
ಹಳ್ಳಿಯ ಬದುಕಿನ ಮುಗ್ದತೆಗೂ,ನಗರ ಜೀವನದ ಬುದ್ದಿವಂತಿಕೆಗೂ ಅಜಗಜಾಂತರ ವ್ಯತ್ಯಾಸವಿದೆ.ಬೆಲೆಕಟ್ಟಲಾಗದ ಯಾವುದಾದರೂ ನಿಧಿ ಇದ್ದರೆ ಅದು ಸ್ನೇಹ ಮಾತ್ರ.ಕಷ್ಟದಲ್ಲಿರುವವರ ಕೈಹಿಡಿದು ಬದುಕಿನ ಮಾರ್ಗ ತೋರಲು ಹಣ ಬೇಕಿಲ್ಲ. ಒಳ್ಳೆಯಗುಣವಿದ್ದರೆ ಸಾಕು.ಅಡಿಗೆ ಮಾಡುವ ಭಟ್ಟನಿಗೆ ವಿದ್ಯೆ ಬೇಕಿಲ್ಲ, ಅಡಿಗೆ ಮಾಡುವ ಕೌಶಲ್ಯ ವಿದ್ದರೆ ಸಾಕು. ಹಾಗಂತ ಹೇಳಿ ಪುಸ್ತಕದಿಂದ ಪಡೆದದ್ದು ಮಾತ್ರ ಜ್ಞಾನವಲ್ಲ, ಅನುಭವದಿಂದ ಕಲಿತದ್ದು ಜ್ಞಾನವೇ ಎಂಬ ಸತ್ಯ ನಿಮಗೆ ಗೊತ್ತಾದ ದಿನ,ಶ್ರೇಷ್ಟತೆಯ ವ್ಯಸನ ದೂರವಾಗಲಿದೆ ಎಂದರು.

ನಾಗಾರ್ಜುನ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಎಸ್.ಜಿ.ಗೋಪಾಲಕೃಷ್ಣ ಮಾತನಾಡಿ, ವಿದ್ಯಾರ್ಥಿ ದಿಸೆಯಿಂದಲೇ ಅವಧೂತನಂತೆ ನಡೆದುಕೊಳ್ಳುತ್ತಿದ್ದ ವಿನಯ್ ಗುರೂಜಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ. ಅವರ ಸಹಪಾಠಿಗಳಿಗೆ ಎದುರಾಗುತ್ತಿದ್ದ ಅನೇಕ ಸಮಸ್ಯೆಗಳಿಗೆ ಕ್ಷಣ ಮಾತ್ರದಲ್ಲಿ ಪರಿಹಾರ ತೋರುತ್ತಿದ್ದರು. ಇಂತಹ ದಿವ್ಯತೇಜಸ್ವಿ ನಮ್ಮ ಕಾಲೇಜಿನ ವಿದ್ಯಾರ್ಥಿ ಎಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ ಎಂದರು.

ನಾಗಾರ್ಜುನ ಕಾಲೇಜಿನ ಮನೋಹರ್ ನರಜ್ಜಿ ಮಾತನಾಡಿ ಸಾಕ್ಷಾತ್ ಭಗವಂತನೇ ನಮ್ಮ ಕಣ್ಣ ಮುಂದೆ ಪ್ರತ್ಯಕ್ಷ ವಾಗಿದ್ದಾರೆ ಎಂಬ ಭಾವ ಅವಧೂತ ವಿನಯ್ ಗುರೂಜಿ ಅವರನ್ನು ಕಂಡಾಗ ಮೂಡಿದೆ. ಇವರ ಮಾತುಗಳನ್ನು ಆಲಿಸಿದ ನೀವೆಲ್ಲಾ ಧನ್ಯರೇ ಸರಿ. ತಾನು ಓದಿರುವ ಕಾಲೇಜಿಗೆ ಬಂದಿ ಆಶೀರ್ವಚನ ನೀಡಿದ್ದಲ್ಲದೆ, ಯಾರಿಗೆ ಉದ್ಯೋಗದ ಅಗತ್ಯವಿದೆಯೋ ಅಂತಹವರಿಗೆ ಉದ್ಯೋಗ ನೀಡುವ ಅಭಯ ನೀಡಿದ್ದಾರೆ. ಉದ್ಯೋಗದ ಮೂಲಕ ಒಬ್ಬರ ಬಾಳು ಬೆಳಗಲು ಕಾರಣರಾದ ವಿನಯ್ ಗುರೂಜಿ ದೇವರ ಸ್ವರೂಪರು ಎಂದರು.

ಕಾರ್ಯಕ್ರಮದಲ್ಲಿ ಬಿಕಾಂ, ಬಿಸಿಎ, ಬಿಬಿಎ, ಬಿಎಸ್‌ಸಿ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲೆ ಡಾ. ಆನಂದಮ್ಮ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ್ ರಾವ್ ಸೇರಿದಂತೆ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಪೋಷಕರು ಇದ್ದರು.

ಇದನ್ನೂ ಓದಿ: Chikkaballapur News: ಭಜನೆ, ದೇವರ ನಾಮ ಕೋಲಾಟ ಭಾರತೀಯ ಸಂಸ್ಕೃತಿಯ ಪ್ರತಿಬಿಂಬ-ಶ್ರೀ ಮಂಗಳನಾಥ ಸ್ವಾಮೀಜಿ