ಚಿಕ್ಕಬಳ್ಳಾಪುರ: ಗಣೇಶೋತ್ಸವದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಸಹೋದರ ಬುದ್ಧಿವಾದ ಹೇಳಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ತಾಲೂಕಿನ ಚಿಕ್ಕಪ್ಯಾಯಲಗುರ್ಕಿ ಗ್ರಾಮದಲ್ಲಿ ನಡೆದಿದೆ. ಗಿರೀಶ್ (21) ಆತ್ಮಹತ್ಯೆ ಮಾಡಿಕೊಂಡ ಯುವಕ.
ಗಿರೀಶ್ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಜಾಗದಲ್ಲಿ ಹಾಡು ಹಾಕಿ ಡ್ಯಾನ್ಸ್ ಮಾಡುತ್ತಿದ್ದ. ಮಧ್ಯರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಯುವಕನ ತಾಯಿ ಹಾಗೂ ಸಹೋದರ ಬೈದು ಬುದ್ಧಿ ಹೇಳಿದ್ದಾರೆ. ಡ್ಯಾನ್ಸ್ ಮಾಡಿದ್ದು ಸಾಕು ಮನೆಗೆ ಬಾ ಎಂದು ಕರೆದಿದ್ದಾರೆ. ಇದರಿಂದ ಮನನೊಂದ ಯುವಕ ಗ್ರಾಮದ ಹೊರವಲಯದ ಮುತ್ತುರಾಯಸ್ವಾಮಿ ದೇವಾಲಯದ ಬಳಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಳಗ್ಗೆ ಹೊಲದ ಕೆಲಸಕ್ಕೆ ಹೋಗುತ್ತಿದ್ದ ಗ್ರಾಮಸ್ಥರು ಮರದಲ್ಲಿ ನೇತಾಡುತ್ತಿದ್ದ ಯುವಕನ ಶವ ಕಂಡು ಮನೆಯವರಿಗೆ ತಿಳಿಸಿದ್ದಾರೆ. ಪೇರೆಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | Israel-Palestine War: ಒತ್ತೆಯಾಳುಗಳನ್ನು ಸುರಂಗದಲ್ಲಿ ಕೂಡಿಟ್ಟು ಭೀಕರವಾಗಿ ಹತ್ಯೆ ಮಾಡಿದ ಹಮಾಸ್ ಉಗ್ರರು; ವೀಡಿಯೊ ಇಲ್ಲಿದೆ
ಶಾಲೆಯಲ್ಲಿ ಲೋ ಬಿಪಿಯಿಂದ ಕುಸಿದು ಬಿದ್ದು ವಿದ್ಯಾರ್ಥಿ ಸಾವು
ರಾಯಚೂರು: ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಲೋ ಬಿಪಿಯಿಂದ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ರಾಯಚೂರಿನ (Raichur News) ಸಿರವಾರದಲ್ಲಿ ನಡೆದಿದೆ. ತರಗತಿಯಲ್ಲಿ ಕುಳಿತಿದ್ದ ವೇಳೆ ಲೋ ಬಿಪಿಯಿಂದ ತಲೆ ಸುತ್ತು ಬಂದು 8 ನೇ ತರಗತಿ ವಿದ್ಯಾರ್ಥಿ ಕುಸಿದು ಬಿದ್ದಿದ್ದಾನೆ. ತಕ್ಷಣ ವಿದ್ಯಾರ್ಥಿಯನ್ನು ಶಿಕ್ಷಕರು ಅಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯದಲ್ಲಿಯೇ ವಿದ್ಯಾರ್ಥಿ ಕೊನೆಯುಸಿರೆಳೆದಿದ್ದಾನೆ.
ಸಿರವಾರ ತಾಲೂಕಿನ ಅತ್ತನೂರು ಗ್ರಾಮದ ಎಂಟನೇ ತರಗತಿ ವಿದ್ಯಾರ್ಥಿ ತರುಣ್ ಮೃತ ವಿದ್ಯಾರ್ಥಿ. ಈತ ಎಂದಿನಂತೆ ಶಾಲೆಗೆ ಆಗಮಿಸಿದ್ದ. ಆದರೆ ಶಾಲೆಯಲ್ಲಿ ಲೋ ಬಿಪಿಯಿಂದ ಏಕಾಏಕಿ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಸಿರವಾರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮಾರ್ಗ ಮಧ್ಯೆ ಹೃದಯಾಘಾತದಿಂದ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಗಣೇಶನ ಪೆಂಡಾಲ್‌ನಲ್ಲಿ ನಡೀತು ʼಗರುಡ ಗಮನ ವೃಷಭ ವಾಹನʼ ಸಿನಿಮಾ ಮಾದರಿ ಕೊಲೆ!
ತುಮಕೂರು: ʼಗರುಡ ಗಮನ ವೃಷಭ ವಾಹನʼ ಸಿನಿಮಾದಲ್ಲಿ (Garuda Gamana Vrishabha Vahana movie) ಬರುವ ಒಂದು ಸನ್ನಿವೇಶ ನಿಮಗೆ ನೆನಪಿರಬಹುದು. ಕಾರ್ಯಕ್ರಮವೊಂದರಲ್ಲಿ ಡಿಜೆ ಮ್ಯೂಸಿಕ್‌ನಲ್ಲಿ ಯಾವ ಹಾಡು ಹಾಕಬೇಕು ಎಂಬ ವಿಚಾರಕ್ಕೆ ಎರಡು ರೌಡಿ ಗುಂಪುಗಳ ನಡುವೆ ಜಗಳ ಸೃಷ್ಟಿಯಾಗಿ ಅದು ಒಬ್ಬನ ಕೊಲೆಯಲ್ಲಿ (Murder Case) ಕೊನೆಗೊಳ್ಳುತ್ತದೆ. ಅಂಥದೇ ಒಂದು ಘಟನೆ ತುಮಕೂರಿನಲ್ಲಿ (Tumkur news) ನಡೆದಿದೆ.
ಇಲ್ಲಿ ಕೊಲೆಯಾದವನು ಬಿಹಾರದ ಯುವಕ. ತುಮಕೂರು ನಗರ ಹೊರವಲಯದ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಶನಿವಾರ ರಾತ್ರಿ ಗಣೇಶ ಮೂರ್ತಿ (Ganesh festival) ಪ್ರತಿಷ್ಠಾಪನೆಗೆ ಹಾಕಿದ್ದ ಪೆಂಡಾಲ್‌ನಲ್ಲಿ ಹಾಡು ಬದಲಾಯಿಸುವ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಬಿಹಾರದ ಚೋಟನ್ ಕುಮಾರ್ (19) ಕೊಲೆಯಾದ ಯುವಕ.
ಬಿಹಾರದ ರಾಂಬಾಬು (20), ಮೌಂಟುಕುಮಾರ್ (20), ಸಂಜೀವ್‌ಕುಮಾರ್ (20) ಕೊಲೆ ಆರೋಪಿಗಳು. ಎಲ್ಲರೂ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು.
ಸೆ. 7ರಂದು ರಾತ್ರಿ ಗಣಪತಿ ಪ್ರತಿಷ್ಠಾಪನೆ ನಂತರ ಎಲ್ಲರೂ ನೃತ್ಯ ಮಾಡುತ್ತಿದ್ದರು. ಇದೇ ಸಮಯದಲ್ಲಿ ಹಾಡು ಬದಲಾಯಿಸುವ ವಿಚಾರಕ್ಕೆ ಕೊಲೆಯಾದ ಯುವಕ ಮತ್ತು ಆರೋಪಿಗಳ ಮಧ್ಯೆ ಗಲಾಟೆ ನಡೆದಿದೆ. ಸ್ಥಳದಲ್ಲಿದ್ದವರು ಅವರನ್ನು ಸಮಾಧಾನ ಪಡಿಸಿ, ಅಲ್ಲಿಂದ ಹೊರಗಡೆ ಕಳುಹಿಸಿದ್ದರು.
ಈ ಸುದ್ದಿ ಓದಿ: Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್‌ಶೀಟ್ ವಿವರ ಪ್ರಸಾರಕ್ಕೆ ತಡೆ ಹಾಕಿದ ಹೈಕೋರ್ಟ್
ಹೊರ ಬಂದ ಆರೋಪಿಗಳು ಚಾಕುವಿನಿಂದ ಚೋಟನ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ. ಕುತ್ತಿಗೆ, ಬೆನ್ನಿಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಆತನನ್ನು ಶ್ರೀದೇವಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.