ಚಿಕ್ಕಬಳ್ಳಾಪುರ : ಕ್ರೈಸ್ತ ಧರ್ಮ ಸ್ಥಾಪಕ ಮತ್ತು ಜಗತ್ತಿಗೆ ಸೇವೆಯ ಪಾವಿತ್ರತೆಯನ್ನು ಬೋಧಿಸಿದ ಯೇಸುಕ್ರಿಸ್ತರ ಬೋಧನೆಗಳು, ಸಂದೇಶಗಳು ಸರ್ವಕಾಲಿಕ ಮಾನ್ಯತೆ ಹೊಂದಿವೆ ಎಂದು ಶಾಂತ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಕೋಡಿ ರಂಗಪ್ಪ ಅಭಿಪ್ರಾಯ ಪಟ್ಟರು.
ಅವರು ಶಾಂತಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಯೇಸುಕ್ರಿಸ್ತ ಜಯಂತಿಯ ಮಕ್ಕಳ ಕಾರ್ಯಕ್ರಮದಲ್ಲಿ ಮಾತ ನಾಡುತ್ತಾ ಎರಡು ಸಾವಿರದ ವರ್ಷಗಳ ಹಿಂದೆ ಯೇಸುಕ್ರಿಸ್ತರು ಬೋಧಿಸಿದ ಸರಳತೆ ,ಸಂಯಮ, ಮಾನವೀಯತೆ ಕ್ಷಮಾ ಗುಣ ಕಾರುಣ್ಯ ಹಾಗೂ ಸೇವೆ ಮುಂತಾದ ಸರಳ ಸರಳ ಸಂದೇಶಗಳು ಸರ್ವಕಾಲಿಕ ಯೋಗ್ಯವಾಗಿದ್ದು ಪ್ರತಿಯೊಬ್ಬರೂ ಈ ಮೌಲ್ಯಗಳನ್ನು ಪಾಲಿಸುವುದರಿಂದ ಜಗತ್ತು ಇನ್ನೂ ಹೆಚ್ಚು ಸೋದರತ್ವ,ಶಾಂತಿ ಮತ್ತು ನೆಮ್ಮದಿಯನ್ನು ಕಾಣುತ್ತದೆ ಎಂದು ಅಭಿಪ್ರಾಯ ಪಟ್ಟರು.
ಜಗತ್ತಿನಲ್ಲಿ ಅತಿ ಹೆಚ್ಚು ಜನರು ಮತ್ತು ದೇಶಗಳು ಆಚರಿಸಲ್ಪಡುವ ಕ್ರೈಸ್ತ ಧರ್ಮ ಮತ್ತು ಕ್ರಿಶ್ಚಿಯನ್ ಮಿಷನರಿಗಳು ನೊಂದವರು ಮತ್ತು ಅಶಕ್ತರ ಬಗ್ಗೆ ಕಾಳಜಿ ಹೊಂದಿದ್ದು ಎಲ್ಲ ದೇಶಗಳಲ್ಲಿಯೂ ಸಾಮೂಹಿಕ ಪ್ರಾರ್ಥನೆಗೆ ಚರ್ಚ್ ಗಳು, ಶಾಲೆಗಳು ಹಾಗೂ ಆಸ್ಪತ್ರೆಗಳನ್ನು ನಿರ್ಮಿಸಿ ಮನುಕುಲದ ಸೇವೆಗಾಗಿ ರಚನಾತ್ಮಕ ಕಾರ್ಯಗಳನ್ನು ನಡೆಸುತ್ತಿವೆ.
ನಮ್ಮ ದೇಶವು ಸರ್ವಧರ್ಮಗಳನ್ನು ಗೌರವಿಸುವ ಹಾಗೂ ಧರ್ಮಗಳ ನಡುವೆ ಸಾಮರಸ್ಯ ಸಹೋದರತ್ವವನ್ನು ಬೆಳೆಸುವ ಆಶಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ನಾವೆಲ್ಲರೂ ಎಲ್ಲ ಧರ್ಮಗಳನ್ನು ಗೌರವಿಸಬೇಕು ಹಾಗೂ ಎಲ್ಲ ಧರ್ಮಗಳ ಮಾನವೀಯ ಸಂದೇಶಗಳನ್ನು ಪಾಲಿಸುವುದನ್ನು ರೂಢಿ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಂತ ಸಂಸ್ಥೆಗಳ ಪ್ರಾಂಶುಪಾಲ ಡಾ. ನವೀನ್ ಸೈಮನ್, ಡಾ. ಗೋಪಿನಾಥ್, ಶರವಣ, ಅಂಬಿಕಾ ಮತ್ತು ಶಾಂತ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಯೇಸುಕ್ರಿಸ್ತರ ಪ್ರಾರ್ಥನೆಗಳು ಹಾಗೂ ಪುಟಾಣಿ ಮಕ್ಕಳ ನೃತ್ಯಗಳು ಗಮನ ಸೆಳೆದವು.