ತುಮಕೂರು: ನಗರದ ಸಿದ್ಧಗಂಗಾ ಮಠಕ್ಕೆ ನಟ ಡಾಲಿ ಧನಂಜಯ (Daali Dhananjaya) ಅವರು ಶುಕ್ರವಾರ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ಇದೇ ವೇಳೆ ಸಿದ್ದಲಿಂಗ ಸ್ವಾಮೀಜಿ ಅವರಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡಿ ಆಶೀರ್ವಾದ ಪಡೆದರು.
ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ಬಳಿ ನಟ ವೆಡ್ಡಿಂಗ್ ಕಾರ್ಡ್ ಇಟ್ಟು, ಸಹಸ್ರನಾಮಾರ್ಚನೆ ಪೂಜೆ ಸಲ್ಲಿಸಿದರು. ಬಳಿಕ ಸಿದ್ದಲಿಂಗ ಸ್ವಾಮೀಜಿಗಳನ್ನ ಭೇಟಿಯಾದ ಡಾಲಿ, ವಿವಾಹ ಆಮಂತ್ರಣ ಪತ್ರಿಕೆ ನೀಡಿ ಆಶೀರ್ವಾದ ಪಡೆದರು. ಈ ವೇಳೆ ಮಠಕ್ಕೆ ಪುನೀತ್ ರಾಜ್ ಕುಮಾರ್ ಜೊತೆಗೆ ಬಂದಿದ್ದನ್ನು ಡಾಲಿ ಧನಂಜಯ ನೆನಪು ಮಾಡಿಕೊಂಡರು. ಈ ವೇಳೆ ಡಾಲಿ ಧನಂಜಯ ಅವರನ್ನು ನೋಡಿ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿ ಬಿದ್ದರು.
ಸಿದ್ದಗಂಗಾ ಮಠಕ್ಕೆ ಭೇಟಿ ಬಳಿಕ ಮಾತನಾಡಿದ ನಟ ಡಾಲಿ ಧನಂಜಯ ಅವರು, ನಾನು ಸಿದ್ಧಗಂಗಾ ಮಠಕ್ಕೆ ಆಗಾಗ್ಗೆ ಬರುತ್ತಲೇ ಇರುತ್ತೇನೆ. ಇಲ್ಲಿಗೆ ಬರಲು ಯಾವಾಗಲೂ ನನಗೆ ಖುಷಿ. ಸಾವಿರಾರು ಮಕ್ಕಳಿಗೆ ಎಜುಕೇಶನ್ ಕೊಡೋ ಜಾಗ ಇದು, ಸಾವಿರಾರು ಜನಕ್ಕೆ ಊಟ ಹಾಕುವ ಜಾಗ, ಸಾವಿರಾರು ಜನರ ಭವಿಷ್ಯ ಕಟ್ಟಿಕೊಟ್ಟ ಜಾಗ ಇದು. ಗುರುಗಳು, ಸ್ವಾಮೀಜಿ ಅವರನ್ನು ಮದುವೆಗೆ ಕರೆಯಬೇಕಿತ್ತು. ಹಾಗಾಗಿ ಬಂದಿದ್ದೆ. ಪೂಜೆ ಮುಗಿಸಿ, ಮದುವೆ ಆಮಂತ್ರಣ ಪತ್ರಿಕೆ ಕೊಡಲಾಗಿದೆ ಎಂದು ತಿಳಿಸಿದರು.
ಗುರುಹಿರಿಯರು ಬಂದು ಹರಸಿದರೇ ಅಲ್ವಾ ಒಳ್ಳೆದು ಆಗೋದು. ಮದುವೆ ಸಿದ್ಧತೆ ನಡೆಯುತ್ತಿದೆ. ಸದ್ಯ ಎಲ್ಲಾ ಹಿರಿಯರು, ಪ್ರಮುಖರಿಗೆ ಆಮಂತ್ರಣ ನೀಡುತ್ತಿದ್ದೇನೆ. ಇನ್ನು ನಮ್ಮ ಸಿನಿಮಾದವರನ್ನು ಕರೆಯೋಕೆ ಶುರು ಮಾಡಬೇಕು. ಅಭಿಮಾನಿಗಳಿಗೂ ಸಹ ಖಂಡಿತ ಆಹ್ವಾನಿಸುತ್ತೇನೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Daali Dhananjay: ನೇತ್ರಾಣಿಯಲ್ಲಿ ಜಾಲಿಯಾಗಿ ಸ್ಕ್ಯೂಬಾ ಡೈವಿಂಗ್ ಮಾಡಿದ ಡಾಲಿ ಧನಂಜಯ
ನಟ ಡಾಲಿ ಧನಂಜಯ್ ಮತ್ತು ಡಾ. ಧನ್ಯತಾ ಇತ್ತೀಚೆಗೆ ಚಾಮುಂಡಿ ಬೆಟ್ಟಕ್ಕೆ(Chamundi Hill) ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದರು. ಚಾಮುಂಡೇಶ್ವರಿಯ ದರ್ಶನ ಪಡೆದ ಭಾವಿ ದಂಪತಿ ಬಳಿಕ ಲಗ್ನಪತ್ರಿಕೆಗೆ ಪೂಜೆ ಮಾಡಿಸಿದ್ದರು. ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡಾಲಿ “ಮದುವೆಗೆ ಸಾಕಷ್ಟು ಸಿದ್ಧತೆಗಳು ನಡೆಯುತ್ತಿವೆ. ಲಗ್ನಪತ್ರಿಕೆ ಕೊಡುವುದನ್ನು ಶುರು ಮಾಡಿದ್ದೇವೆ. ಹಿರಿಯರನ್ನು ಖುದ್ದು ನಾವಿಬ್ಬರೇ ಭೇಟಿ ಮಾಡಿ ಆಶೀರ್ವಾದ ಪಡೆದು ಲಗ್ನಪತ್ರಿಕೆ ನೀಡಿದ್ದೇವೆ. ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ್ದೇವೆ. ಮೈಸೂರಿನಲ್ಲೇ ಮದುವೆ ನಡೆಯುತ್ತಿದೆ. ಎಲ್ಲರೂ ಬಂದು ನಮ್ಮ ವೈವಾಹಿಕ ಜೀವನಕ್ಕೆ ಆಶೀರ್ವಾದ ಮಾಡಿ. ಎಲ್ಲರಿಗೂ ಲಗ್ನಪತ್ರಿಕೆ ಕೊಡುತ್ತೇನೆ” ಎಂದು ಹೇಳಿದ್ದರು.