Wednesday, 27th November 2024

ದೇಗುಲದ ಪೂಜೆ ಮಾಡುವವರು ದಲಿತರೇ : ಗ್ರಾಮಸ್ಥರ ಸ್ಪಷ್ಟನೆ

ಮಧುಗಿರಿ: ನಮ್ಮೂರಿನ ದೇಗುಲಕ್ಕೆ ದಲಿತರೇ ಪೂಜಾರಿಯಾಗಿದ್ದು ದಲಿತ ಪೂಜಾರಿಗೆ ಅನ್ಯಾಯ ಎಂದು ಕೆಲ ಕಿಡಿಗೇಡಿಗಳು ಅಪಪ್ರಚಾರ ಮಾಡಿದ್ದು ಇದೆಲ್ಲ ಸುಳ್ಳು ಸುದ್ದಿಯಾಗಿದೆ ಎಂದು ಗ್ರಾಮಸ್ಥರು ಸ್ಪಷ್ಟನೆ ನೀಡಿದ್ದಾರೆ.

ತಾಲೂಕಿನ ದೊಡ್ಡೇರಿ ಹೋಬಳಿಯ ಪೂಜಾರಹಳ್ಳಿಯ ಶ್ರೀ ಕಾವಲಮ್ಮ ದೇವಸ್ಥಾನದ ಪೂಜಾರಿ ಕಾರ್ಯಕ್ಕೆ ಹಲವು ಅಪ ಪ್ರಚಾರಕ್ಕೆ ಸ್ಪಷ್ಟನೆ ನೀಡಿದ ದೇಗುಲ ಸಮಿತಿಯ ಗೌರವಾಧ್ಯಕ್ಷ ಸಿದ್ದಬಸಪ್ಪನವರು ಈಗಲೂ ಈ ದೇಗುಲದಲ್ಲಿ ಪೂಜೆಗೆ ನೀಮಿಸಿರುವುದು ದಲಿತರನ್ನೇ. ಈ ದೇಗುಲಕ್ಕೆ ೬೦೦ ವರ್ಷದ ಇತಿಹಾಸವಿದೆ.

೮ ಗ್ರಾಮದ ಭಕ್ತರು ಇಲ್ಲಿ ಪೂಜೆಗೆ ರ‍್ತಾರೆ. ಇಲ್ಲಿ ಹಿಂದೆ ಪೂಜಾರಿ ಕೆಲಸ ಮಾಡುತ್ತಿದ್ದ ಕಾಮರಾಜು ಎಂಬುವವನು ಪೂಜೆ ನಿರಾಕರಿಸಿ ಗಂಟೆ-ತಟ್ಟೆಯನ್ನು ಎಸೆದು ದೇವರನ್ನು ಕಾಲಲ್ಲಿ ತುಳಿದು ಹೋದ ಹಿನ್ನೆಲೆಯಲ್ಲಿ ಅವನ ಬದಲಾಗಿ ಅವರ ಕುಟುಂಬದವರನ್ನೇ ಪೂಜಾ ಕಾರ್ಯಕ್ಕೆ ನೇಮಿಸಿದ್ದೇವೆ.

ಈಗ ನ್ಯಾಯಾಲಯಕ್ಕೆ ಹೋಗಿದ್ದು ಕಾಮರಾಜುಗೆ ಪೂಜೆ ಜವಾಬ್ದಾರಿ ನೀಡಿದ್ದು ನಾವು ಪ್ರಶ್ನಿಸಿಲ್ಲ. ಆದರೆ ದಲಿತರಿಗೆ ಪೂಜೆಗೆ ಅವಕಾಶ ಕೊಡುತ್ತಿಲ್ಲ ಎಂದು ಆರೋಪಿಸಿದ್ದು ದೇವರ ಒಡವೆಗಳನ್ನು ಸಮಿತಿಯವರು ಕದ್ದಿದ್ದಾರೆ ಎಂಬುದು ಸುಳ್ಳಾಗಿದೆ. ಅವನೇ ನಕಲಿ ಬೀಗದ ಕೈಲಿ ಹೊಂದಿದ್ದು ತಹಶೀಲ್ದಾರ್ ಪತ್ತೆ ಹಚ್ಚಿದ್ದು ಛೀಮಾರಿ ಹಾಕಿದ್ದಾರೆ ಎಂದರು.

ಪೂಜೆ ನಿರ್ವಹಿಸುವ ಜುಂಜ ನಾಯಕ ಮಾತನಾಡಿ, ಅನಾದಿ ಕಾಲದಿಂದಲ್ಲೂ ಕೂಡ ನಮ್ಮ ಕುಟುಂಬದವರೇ ಇಲ್ಲಿ ಪೂಜೆ ಮಾಡುತ್ತಿದ್ದು ಜಾತಿಭೇದ ಮಾಡಿಲ್ಲ. ದೇವರ ಸೇವೆಯನ್ನು ಕಾಲಲ್ಲಿ ಒದ್ದು ಹೋದವನಿಗೆ ಯಾರೂ ಬೆಂಬಲ ನೀಡುತ್ತಿಲ್ಲ. ಅದಕ್ಕಾಗಿ ವಾಮ ಮಾರ್ಗದಿಂದ ಆರೋಪ ಮಾಡುತ್ತಿದ್ದಾನೆ. ಇದು ಸರಿಯಲ್ಲ ಎಂದರು.

ಉಯ್ಯಾಲೆ ಪೂಜಾರಿ ರವಿಯಾದವ್ ಮಾತನಾಡಿ ಕಾಮರಾಜು ಎಂಬಾತನ ಜೊತೆ ೨ ಮನೆಗಳಿಲ್ಲ. ಆದರೆ ೮ ಹಳ್ಳಿಯ ಜನ ಒಗ್ಗಟ್ಟಾಗಿದ್ದು ಪೂಜೆಯ ವಿಚಾರವಾಗಿ ಯಾವುದೇ ಜಾತಿ ಭೇದ ಮಾಡಿಲ್ಲ. ದೇಗುಲಕ್ಕೆ ೬ ಎಕರೆ ಜಮೀನಿದ್ದು ಇದರ ಮೇಲೆ ಅವನು ಕಣ್ಣಿಟ್ಟಿರುವ ಶಂಕೆಯಿದೆ. ಯಾವುದೇ ಕಾರಣಕ್ಕೂ ಅವನನ್ನು ಗ್ರಾಮಸ್ಥರು ಒಪ್ಪಲ್ಲ ಎಂದರು.

ಗ್ರಾಮದ ಮಹಿಳೆ ಮಾತನಾಡಿ, ಕವಣದಾಲದ ಕಾಮರಾಜು ಎಂಬುವವನು ದೇವರ ಗಂಟೆ ಬಿಸಾಕಿ ಹೋದ. ಆದರೂ ನ್ಯಾಯಾ ಲಯಕ್ಕೆ ಗೌರವ ನೀಡಿ ಪೂಜೆಗೆ ಅವಕಾಶ ನೀಡಿದ್ದೇವೆ. ಆದರೆ ಯಾರೋ ಒಬ್ಬ ಸತ್ತಿದ್ದು ನಾಳೆ ಅಡವೀಶಪ್ಪ ಹಾಗೂ ಸೋಮಣ್ಣನ ಮೇಲೆ ಸೇಡು ತೀರಿಸಿಕೊಳ್ಳಲು ಅಪಘಾತ ಮಾಡಿಸುವುದಾಗಿ ಹೇಳಿಕೊಂಡು ತಿರುಗುತ್ತಿದ್ದಾನೆ. ನನ್ನ ಕುಟುಂಬಕ್ಕೆ ಏನಾದರೂ ಅವನೇ ಹೊಣೆ ಎಂದು ಆರೋಪಿಸಿದರು.

ಈಗಾಗಲೇ ಮಿಡಿಗೇಶಿಯಲ್ಲಿ ದೇಗುಲದ ವಿಚಾರಕ್ಕೆ ಜೋಡಿ ಕೊಲೆ ನಡೆದಿದ್ದು ಈ ದೇಗುಲದ ವಿಚಾರವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಪೂಜಾರಿ ಕಾಮರಾಜುವನ್ನು ತನಿಖೆಗೆ ಒಳಪಡಿಸಬೇಕೆಂದು ಗ್ರಾಮಸ್ಥರ ಆಗ್ರಹವಾಗಿದೆ.

***
ತಾಲೂಕಿನಲ್ಲಿ ದೇವಸ್ಥಾನದ ವಿಚಾರವಾಗಿಯೇ ಜೋಡಿ ಕೊಲೆಯಾಗಿದೆ. ಇಲ್ಲಿನ ಪೂಜಾರಿ ಅಂತಹ ಬೆದರಿಕೆ ಹಾಕುತ್ತಿದ್ದು ಅಂತಹ ಮತ್ತೊಂದು ಘಟನೆ ನಡೆಯುವ ಮುನ್ನವೇ ಪೊಲೀಸರು ಎಚ್ಚೆತ್ತುಕೊಳ್ಳಬೇಕು.

– ಗೌರಮ್ಮ.

***

ಗ್ರಾಮಸ್ಥರು ಈ ಸಂದರ್ಭ ದಲ್ಲಿ ದೇಗುಲ ಸಮಿತಿಯ ಸಿದ್ದಬಸಪ್ಪ, ರಮೇಶ್, ಅಡವೀಶ್, ಸೋಮಶೇಖರ್, ಅಶ್ವತ್ಥನಾರಾಯಣ್, ರವಿಯಾದವ್, ಜಗದೀಶ್, ಜುಂಜನಾಯಕ, ಸುರೇಶ್, ಚಂದ್ರಶೇಖರ್, ಉಮೇಶ್, ಮಂಜಣ್ಣ, ಚಂದ್ರಮೋಹನ್, ಸಿದ್ದಮಲ್ಲಪ್ಪ, ಜಯಮ್ಮ, ಗೌರಮ್ಮ, ಪಾರ್ವತಮ್ಮ, ಅನಿತಾ, ವನಿತಾ, ಸಿದ್ದಗಂಗರಾಜು, ದೊಡ್ಡಯ್ಯ, ದೊಡ್ಡಪಾಪಣ್ಣ, ಮಹೇಶ್ ಹಾಗೂ ನೂರಾರು ಗ್ರಾಮಸ್ಥರಿದ್ದರು.