Sunday, 27th October 2024

DC P N Ravindra: ಹಿರಿಯ ನಾಗರೀಕರು ಜೀವಿತದ ಕೊನೆಯವರೆಗೂ ದೈಹಿಕ ಮಾನಸಿಕ ಸದೃಡತೆ ಕಾಪಾಡಿಕೊಳ್ಳುವುದು ಅಗತ್ಯ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ಚಿಕ್ಕಬಳ್ಳಾಪುರ: ಹಿರಿಯ ನಾಗರೀಕರು ತಮ್ಮ ಜೀವಿತದ ಕೊನೆಯ ಗಳಿಗೆಯವರೆಗೂ ಕೂಡ ದೈಹಿಕ ಮತ್ತು ಮಾನಸಿಕ ಸದೃಡತೆ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.

ನಗರ ಹೊರವಲಯ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಕ್ರೀಡಾ ಇಲಾಖೆ ಆಶ್ರಯದಲ್ಲಿ “ವಿಶ್ವ ಹಿರಿಯ ನಾಗರೀಕರ ದಿನಾಚರಣೆ” ಅಂಗವಾಗಿ ಏರ್ಪಡಿಸಿದ್ದ ಹಿರಿಯ ನಾಗರಿಕರ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಗಿಡಕ್ಕೆ ನೀರುಣಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ದಿನಗಳು ಉರುಳಿದಂತೆ ದೇಹಕ್ಕೆ ವಯಸ್ಸು ಆಗುತ್ತದೆ. ಈ ಪ್ರಕ್ರಿಯೆ ಪ್ರಕೃತಿ ಸಹಜ ಆದರೆ ನಾವುಗಳು ಮನಸ್ಸು ಮಾಡಿದರೆ ನಮ್ಮ ಮನಸ್ಸನ್ನು ಜೀವಿತದ ಕೊನೆ ಗಳಿಗೆಯವರೆಗೂ ಸದೃಡವಾಗಿಟ್ಟುಕೊಂಡು ಸಂತೋಷವನ್ನು ಅನುಭವಿಸಬಹುದು ಎಂದರು.

ಬಾಲ್ಯಾವಸ್ಥೆ, ಯೌವ್ವನಾವಸ್ಥೆ, ಮುಪ್ಪು ಹಾಗೂ ಕೊನೆಗೆ ಸಾವು. ಇವೆಲ್ಲವು ಜೀವಿತದಲ್ಲಿ ಸಭವಿಸುವ ಸಹಜ ಪ್ರಕ್ರಿಯೆಗಳು. ಬಾಲ್ಯಾವಸ್ಥೆಯ ನಂತರ ನಾವೆಲ್ಲರೂ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಮಾಡುತ್ತೇವೆ. ಒಂದು ನಿರ್ದಿಷ್ಟ ವಯಸ್ಸಿಗೆ ಅಥವಾ ದೇಹವು ದುಡಿಯಲು ಅಸಮರ್ಥವಾದಾಗ ಉದ್ಯೋಗಕ್ಕೆ ವಿದಾಯ ಹೇಳಿ ನಿವೃತ್ತಿ ಯನ್ನು ಪಡೆಯುತ್ತೇವೆ. ಉದ್ಯೋಗವನ್ನು ಮಾಡುವಾಗ ಸಮಾಜದ ಇತರರಿಗೆ ನಮ್ಮ ಅಗತ್ಯತೆ ಇರುತ್ತದೆ. ಆಗ ಜೀವನ ಸುಗಮವಾಗಿರುತ್ತದೆ. ಆದರೆ ನಿವೃತ್ತಿಯ ಸಂದರ್ಭದಲ್ಲಿ ಹಲವಾರು ಸವಾಲುಗಳು ಎದುರಾಗಿ ನಿಜವಾದ ಜೀವನ ಅನಾವರಣ ಆಗುತ್ತದೆ. ನಿರ್ಲಕ್ಷಕ್ಕೆ ಒಳಗಾಗುತ್ತೇವೆ. ಉದ್ಯೋಗದಲ್ಲಿದ್ದ ಅವಧಿಯಲ್ಲಿ ಇದ್ದ ಗೌರವ ಮುಪ್ಪಿನಲ್ಲಿ ಕಡಿಮೆ ಆಗುತ್ತದೆ ಎಂದರು.

ನಾವು ಗಳಿಸಿದ ಆಸ್ತಿ, ಪಾಸ್ತಿ ಸಂಪತ್ತುö ನಮ್ಮ ನಿವೃತ್ತಿಯ ನಂತರ ಅಗತ್ಯಕ್ಕೆ ತಕ್ಕಂತೆ ಪರಿಮಿತಿಯಲ್ಲಿ ವೆಚ್ಚಮಾಡ ಬೇಕು. ರಕ್ತ ಸಂಬಂಧಿಗಳು, ಮಕ್ಕಳು ಎಷ್ಟೆ ಹತ್ತಿರವಿದ್ದರೂ ಇನ್ನೊಬ್ಬರ ಹಿಡಿತಕ್ಕೆ ಅದನ್ನು ನೀಡಬಾರದು. ಕಿರಿಯರು ಚೆನ್ನಾಗಿ ಗೌರವಿಸಿದರೆ ಚಿಂತೆಯಿಲ್ಲ. ನಿರ್ಲಕ್ಷ ಮಾಡಿದರೂ ವ್ಯಥೆ ಪಡಬಾರದು. ತಮ್ಮ ವಿರುದ್ಧ ಅನ್ಯಾಯ ಮಾಡಿದರೆ ಸಕ್ಷಮ ಪ್ರಾಧಿಕಾರಗಳನ್ನು ಸಂಪರ್ಕಿಸಬೇಕು. ಅದೂ ಸಾಧ್ಯವಾಗದಿದ್ದರೆ ಉಚಿತ ಸಹಾಯ ವಾಣಿಗೆ ೧೦೯೧ ಮತ್ತು ೧೦೯೦ ಗೆ ಕರೆ ಮಾಡಿ ತಮ್ಮ ಕುಂದು ಕೊರತೆಗಳ ದೂರುಗಳನ್ನು ನೀಡದರೆ ಸಕ್ಷಮ ಪ್ರಾಧಿಕಾರಗಳು ಪರಿಹರಿಸಲು ಮುಂದಾಗುತ್ತವೆ ಎಂದರು.

ಹಿರಿಯರು ಕಿರಿಯರಿಗೆ ದಾರಿ ದೀಪವಾಗಲಿ

ಹಿರಿಯರ ಜೀವನವು ಕಿರಿಯರಿಗೆ ಮಾರ್ಗದರ್ಶನವಾಗಿ ದಾರಿ ದೀಪವಾಗಬೇಕು. ಆಗಲೇ ನಮ್ಮ ಸಮಾಜ ಸ್ವಾಸ್ಥ್ಯ ಸಮಾಜವಾಗಲು ಸಾಧ್ಯ. ವೃದ್ಧರು ನಿರುಪಯುಕ್ತರಲ್ಲ, ನಮ್ಮ ಅಮೂಲ್ಯ ಆಸ್ತಿ. ವಿಶ್ವ ಹಿರಿಯ ನಾಗರಿಕರ ದಿನವನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಹಿರಿಯ ನಾಗರಿಕರು ಒಂದು ತಲೆಮಾರಿನ ಹಿಂದಿನವರೆಗೂ ನಮ್ಮ ಕುಟುಂಬಗಳ ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ ನೊಗ ಹೊತ್ತವರು. ದುಡಿಯುವ ಶಕ್ತಿ ಕುಂಠಿತಗೊಂಡರೂ ಅವರು ಯಾವತ್ತಿದ್ದರೂ ದೇಶದ ಆಸ್ತಿ. ಅವರಿಗಾಗಿ ಒಂದು ದಿನವನ್ನು ಮುಡಿಪಾಗಿಟ್ಟು ಆಚರಿಸುವುದು ಹೊಸ ತಲೆಮಾರಿನವರ ಭಾಗ್ಯ ಮತ್ತು ಕರ್ತವ್ಯವಾಗಿದೆ ಎಂದು ತಿಳಿಸಿದರು.

ಇಂದಿನ ವೇಗದ ಜೀವನ, ಅಥವಾ ಹಾಗೆ ವೇಗವಾಗಿ ಸಾಗುತ್ತಿದ್ದೇವೆಂಬ ಭ್ರಮೆಯಲ್ಲಿ ನಡೆಯುತ್ತಿರುವ ಈ ಲೋಕದಲ್ಲಿ ಮುಮ್ಮಲ ಮರುಗುತ್ತಿರುವುದು ಹೆಚ್ಚಾಗಿ ಹಿರಿಯ ಜೀವಗಳೇ. ಯುವಜನರು ಸಂಪಾದನೆಯ ಬೇಟೆಗೆ ಬಿದ್ದು ಊರು ತೊರೆದು ಹೋಗುವ ಅಥವಾ ಸಂಗಾತಿಯ ಮಾತಿಗೆ ಕಟ್ಟುಬಿದ್ದು ಕುಟುಂಬ ತೊರೆದು ಹೋಗುವ ಪ್ರವೃತ್ತಿ, ಪರಿಸ್ಥಿತಿ ಅಥವಾ ವೃದ್ದರನ್ನು ಅನಾಥಾಶ್ರಮಗಳಿಗೆ ಸೇರಿಸುವುದು ಹೆಚ್ಚುತ್ತಿದೆ. ಇದರಿಂದ ಬಾಧಿತ ವಾಗಿರುವ ವೃದ್ದರ ಗೋಳನ್ನು ವಿವರಿಸುವುದು ಕಷ್ಟಸಾಧ್ಯ. ನಮ್ಮ ಬದುಕಿಗೆ ದಾರಿ ಮಾಡಿಕೊಟ್ಟ ಹಿರಿಯ ನಾಗರಿಕರ ಕೊನೆಗಾಲದ ಬದುಕನ್ನು ಹಸನುಗೊಳಿಸುವುದು ಪ್ರತಿಯೊಬ್ಬ ಯುವಜನರ ಕರ್ತವ್ಯ ಎಂದು ಹೇಳಿದರು.

ವಿಶ್ವಸಂಸ್ಥೆ ವರದಿಯೊಂದರ ಪ್ರಕಾರ ೨೦೫೦ರಷ್ಟರಲ್ಲಿ ವಿಶ್ವದಾದ್ಯಂತ ಹಿರಿಯ ನಾಗರಿಕ ಸಂಖ್ಯೆ ೧೫೦ ಕೋಟಿ ಆಗಬಹುದು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ವೃದ್ದರು ಇರುವುದರಿಂದ ಅವರ ಮೂಲಭೂತ ಅಗತ್ಯಗಳಿಗೆ ಅನುಕೂಲ ಮಾಡಿಕೊಡುವಂಥ ವ್ಯವಸ್ಥೆಯನ್ನು ನಿರ್ಮಿಸುವುದು ಅತ್ಯಗತ್ಯವಾಗಿದೆ. ಯಾಕೆಂದರೆ ಎಲ್ಲಾ ವೃದ್ದರೂ ಕೂಡ ತಮ್ಮ ಕೊನೆಗಾಲದಲ್ಲಿ ನೆಮ್ಮದಿಯಿಂದ ಇರುತ್ತಾರೆಂದು ಹೇಳಲು ಸಾಧ್ಯವಿಲ್ಲ. ಕೆಲವರಿಗೆ ಅವರ ಮಕ್ಕಳು, ಮೊಮ್ಮಕ್ಕಳ ಆಸರೆ ಸಿಗಬಹುದು. ಈ ಅದೃಷ್ಟ ಎಲ್ಲರಿಗೂ ಇರುವುದಿಲ್ಲ. ತಮ್ಮ ಮಕ್ಕಳಿಗಾಗಿ ಇಡೀ ಜೀವಮಾನ ದುಡಿದು, ಉಳಿತಾಯದ ಹಣ ಇಲ್ಲದೇ ವೃದ್ದಾಪ್ಯಕ್ಕೆ ಕಾಲಿಟ್ಟವರೇ ಬಹುತೇಕರು. ಹಣಕಾಸು ಸಮಸ್ಯೆ ಮಾತ್ರವಲ್ಲ ವೃದ್ದಾಪ್ಯದಲ್ಲಿ ಆರೋಗ್ಯ ಸಮಸ್ಯೆಯೂ ಬಹಳವಾಗಿ ಕಾಡುತ್ತದೆ. ಜೊತೆಗೆ, ದೈಹಿಕ ಮತ್ತು ಮಾನಸಿಕ ದೃಢತೆ ಕಳೆದುಕೊಂಡ ವೃದ್ದರು ಬಹಳ ಸುಲಭವಾಗಿ ದೌರ್ಜನ್ಯಕ್ಕೆ ತುತ್ತಾಗುತ್ತಾರೆ. ಈ ಹಿನ್ನೆಲೆಯಲ್ಲಿ ಹಿರಿಯ ಜೀವಗಳಿಗೆ ಭದ್ರತೆ ಒದಗಿಸುವ ಬಲಿಷ್ಠ ವ್ಯವಸ್ಥೆ ನಿರ್ಮಾಣವಾಗಬೇಕು ಎಂದರು.

ನಮಗಾಗಿ ತಮ್ಮಿಡೀ ಜೀವನ ಮೀಸಲಿಟ್ಟ ವೃದ್ದರಿಗೆ ಪ್ರೀತಿ, ಗೌರವ, ಕಾಳಜಿ ತೋರುವುದು ಎಲ್ಲರ ಕರ್ತವ್ಯ. ಹಿರಿಯ ನಾಗರಿಕರ ದಿನದಂದು  ನಾವು ವೃದ್ಧರ ಜೊತೆ ಸೆಲ್ಫಿ ತೆಗೆದುಕೊಂಡು ಸೋಷಿಯಲ್ ಮೀಡಿಯಾಗೆ ಹಾಕಿಕೊಳ್ಳುವು ದಕ್ಕೆ ಸೀಮಿತವಾದರೆ ಅರ್ಥ ಇಲ್ಲ. ನೀವು ವರ್ಷದ ೩೬೫ ದಿನವೂ ನಿಮ್ಮ ಕುಟುಂಬದ ಹಿರಿಯ ಜೀವಗಳ ಜೊತೆ ಒಡನಾಡುತ್ತಿದ್ದೀರೆಂದರೆ ಅದು ನಿಮ್ಮ ಸೌಭಾಗ್ಯ. ಈಗಿನ ಜಾಗತಿಕ ಆಧುನಿಕ  ದಿನಗಳಲ್ಲಿ ಅದು ಕಷ್ಟ. ಈ ಒಂದು ದಿನವನ್ನು ಇಡಿಯಾಗಿ ನಿಮ್ಮ ಅಜ್ಜ ಅಜ್ಜಿ, ಅಪ್ಪ ಅಮ್ಮನ ಜೊತೆ ಕಳೆಯಿರಿ. ಅವರಿಗೆ ಖುಷಿ ಕೊಡುವ, ನೆಮ್ಮದಿ ತರುವ ಕೆಲಸವನ್ನು ಮಾಡಿಕೊಡಿ. ಅವರ ಮಾತನ್ನು ಆಲಿಸಿ. ಅವರಿಗೆ ಒಂದು ನೋಟಿನ ಕಂತೆ ಕೊಡುವುದಕ್ಕಿಂತ ಈ ಕೆಲಸಗಳು ಹೆಚ್ಚು ಅರ್ಥಪೂರ್ಣವಾಗುತ್ತದೆ.  ನಮ್ಮ ಪ್ರದೇಶದ ಸುತ್ತಮುತ್ತ ಅನೇಕ ವೃದ್ಧಾಶ್ರಮಗಳಿಗೆ. ಅಲ್ಲಿಗೆ ಹೋಗಿ ಅಲ್ಲಿನ ವೃದ್ದರನ್ನು ಭೇಟಿಯಾಗಿ ಕಷ್ಟಸುಖ ಕೇಳಿ. ವೃದ್ಧಾಶ್ರಮಗಳಿಗೆ ಸಹಾಯ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಿ ಎಂದು ತಿಳಿಸಿದರು.

ಸರ್ಕಾರ ವೃದ್ದರಿಗೆಂದು ಹಲವು ಸೌಲಭ್ಯಗಳನ್ನು ಒದಗಿಸುತ್ತದೆ. ಅನೇಕ ಹಿರಿಯ ನಾಗರಿಕರಿಗೆ ಈ ಯೋಜನೆಗಳು ಬೇರೆ ಬೇರೆ ಕಾರಣಕ್ಕೆ ತಲುಪದೇ ಹೋಗಿರಬಹುದು. ನಿಮಗೆ ಇಂಥ ಪ್ರಕರಣಗಳು ಗಮನಕ್ಕೆ ಬಂದರೆ ಅವರಿಗೆ ನೆರವಾಗುವ ಪ್ರಯತ್ನ ಮಾಡಿ. ಹಿರಿಯ ನಾಗರಿಕರ ಕಾರ್ಡ್ ಮಾಡಿಸಿಕೊಡುವುದು, ಪಿಂಚಣಿ ಮಾಡಿಸಿಕೊಡುವುದು ಇತ್ಯಾದಿ ಕಾರ್ಯಗಳಲ್ಲಿ ನೆರವಾಗಿ. ನಿಮ್ಮ ಇಂಥ ಈ ಸಹಾಯವು ಆ ವೃದ್ಧರಿಗೆ ದೊಡ್ಡ ಉಪಕಾರವಾಗಬಹುದು. ವಿಶ್ವ ಹಿರಿಯ ನಾಗರಿಕರ ದಿನ ಆಚರಣೆಗೂ ಒಂದು ಅರ್ಥ ಸಿಗಬಹುದು ಎಂದು ಯುವ ಜನತೆಗೆ ಮನವಿ ಮಾಡಿ ದರು.

ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವೆಂಕಟೇಶರೆಡ್ಡಿ, ಅಂಗವಿಕಲರ ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎನ್.ಎಂ. ಜಗದೀಶ, ಶ್ರೀ ಸಾಯಿ ಇಂಟರ್ ನ್ಯಾಷನಲ್ ಟ್ರಸ್ಟ್ ನ ನಾರಾಯಣಮೂರ್ತಿ, ಹಿರಿಯ ನಾಗರಿಕರ ವೇದಿಕೆಯ ಸುಬ್ಬರಾಯಪ್ಪ, ಶ್ರೀನಿವಾಸರೆಡ್ಡಿ, ಜಯರಾಮರೆಡ್ಡಿ, ಅಶ್ವತ್ತನಾರಾಯಣ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ನಾಗರಿಕರು ಭಾಗವಹಿಸಿದ್ದರು.