ತುಮಕೂರು: ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಅ. 18, 19 ಹಾಗೂ 20ರಂದು ೩ ದಿನಗಳ ಕಾಲ ಜಿಲ್ಲೆಗೆ ಭೇಟಿ ನೀಡಿ ಸಾರ್ವಜನಿಕ ಕುಂದು ಕೊರತೆ ಸ್ವೀಕಾರ, ದೂರು ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆ, ಲೋಕಾಯುಕ್ತ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮ, ಸಾರ್ವಜನಿಕ ಆಡಳಿತದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪಾತ್ರ, ಜಿಲ್ಲೆಯಲ್ಲಿ ಬಾಕಿ ಇರುವ ಲೋಕಾಯುಕ್ತ ದೂರುಗಳ ವಿಚಾರಣೆ ಹಾಗೂ ವಿಲೇವಾರಿ ಕಾರ್ಯಕ್ರಮಗಳನ್ನು ನಡೆಸಲಿದ್ದು, ಅಗತ್ಯ ಮಾಹಿತಿಯೊಂದಿಗೆ ಉಪ ಲೋಕಾಯುಕ್ತರ ಎಲ್ಲಾ ಕಾರ್ಯಕ್ರಮಗಳಲ್ಲೂ ಹಾಜರಾಗಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಪೂರ್ವ ಸಭೆ ನಡೆಸಿ ಮಾತನಾಡಿದ ಅವರು, ಉಪ ಲೋಕಾಯುಕ್ತರು ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿ ತನಿಖೆಗೆ ಬಾಕಿ ಇರುವ ದೂರು ಪ್ರಕರಣಗಳ ವಿಚಾರಣೆ ಮತ್ತು ಸಭೆ ನಡೆಸಲಿದ್ದಾರೆ. ಈವರೆಗೆ ನೋಂದಣಿಯಾದ ದೂರು ಪ್ರಕರಣಗಳ ಮಾಹಿತಿ ಪಡೆದ ಅವರು, ಉಪ ಲೋಕಾಯುಕ್ತರ ಕಾರ್ಯಕ್ರಮಗಳಿಗೆ ಎಲ್ಲಾ ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಹಾಜರಾಗಬೇಕು. ಲೋಕಾಯುಕ್ತ ಪ್ರಕರಣ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿಸಿಕೊಂಡಿದ್ದಲ್ಲಿ ಸೂಕ್ತ ಕಾರಣವನ್ನು ಉಪ ಲೋಕಾಯುಕ್ತರ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಬಾಕಿ ಉಳಿದಿರುವ ಲೋಕಾಯುಕ್ತ ದೂರು ಅರ್ಜಿಗಳನ್ನು ವೈಯಕ್ತಿಕ ಗಮನಹರಿಸಿ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ವಿಲೇವಾರಿ ಮಾಡಲು ಕಾನೂನು ಚೌಕಟ್ಟಿನಲ್ಲಿ ಅವಕಾಶವಿಲ್ಲದಿದ್ದಲ್ಲಿ ದೂರುದಾರರರಿಗೆ ಹಿಂಬರಹ ನೀಡಬೇಕು. ಹಿಂಬರಹ ನೀಡಿರುವ ಬಗ್ಗೆ ಅಗತ್ಯ ದಾಖಲೆಗಳನ್ನು ಸಂಬಂಧಿಸಿದ ಇಲಾಖಾಧಿ ಕಾರಿಗಳು ಹೊಂದಿರಬೇಕು ಎಂದು ನಿರ್ದೇಶನ ನೀಡಿದರು.
ತಾಲ್ಲೂಕುವಾರು ಬಾಕಿ ಇರುವ ಲೋಕಾಯುಕ್ತ ದೂರು ಅರ್ಜಿಗಳ ಮಾಹಿತಿ ಪಡೆದ ಅವರು, ದೂರು ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ಇತ್ತೀಚೆಗಷ್ಟೇ ವರ್ಗಾವಣೆ ಹೊಂದಿ ಅಧಿಕಾರವಹಿಸಿಕೊಂಡಿದ್ದೇನೆ. ದೂರು ಅರ್ಜಿಗಳ ಬಗ್ಗೆ ಮಾಹಿತಿ ಇಲ್ಲ ಎಂದು ನೆಪ ಹೇಳದೆ ಉಪ ಲೋಕಾಯುಕ್ತರಿಗೆ ಸಮರ್ಪಕ ಉತ್ತರ ವನ್ನು ನೀಡಬೇಕು ಎಂದು ತಾಕೀತು ಮಾಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ ೪೯, ಕಂದಾಯ ಇಲಾಖೆಯ ೨೦, ನಗರಾಭಿವೃದ್ಧಿ ಕೋಶದ ೧೨, ಆರೋಗ್ಯ ಇಲಾಖೆ ೧, ನಿರ್ಮಿತಿ ಕೇಂದ್ರದ ೧ ದೂರು ಅರ್ಜಿಗಳು ಬಾಕಿ ಇವೆ ಎಂದು ಸಂಬ0ಧಿಸಿದ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಉಪ ಲೋಕಾಯುಕ್ತರೊಂದಿಗೆ ಕರ್ನಾಟಕ ಲೋಕಾಯುಕ್ತ ಅಪರ ನಿಬಂಧಕ(ವಿಚಾರಣೆಗಳು-೫)ರಾದ ಜೆ.ವಿ. ವಿಜಯಾನಂದ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ, ಕರ್ನಾಟಕ ಲೋಕಾಯುಕ್ತ ಉಪ ನಿಬಂಧಕ(ವಿಚಾರಣೆಗಳು-೨)ರಾದ ಕೆ.ಎಂ. ಬಸವರಾಜಪ್ಪ ಹಾಗೂ ಉಪ ನಿಬಂಧಕ(ವಿಚಾರಣೆಗಳು-೧)ರಾದ ಎನ್.ವಿ. ಅರವಿಂದ ಸೇರಿದಂತೆ ವಿವಿಧ ನ್ಯಾಯಾಧೀಶರು ಸಭೆಯಲ್ಲಿ ಹಾಜರಿದ್ದು, ಸಾರ್ವಜನಿಕರ ಅಹವಾಲುಗಳ ವಿಚಾರಣೆ ನಡೆಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಿದ್ದಾರೆ. ಸಂಬ0ಧಿಸಿದ ಇಲಾಖಾ ಅಧಿಕಾರಿಗಳು ತಮ್ಮ ವಿಷಯ ನಿರ್ವಾಹಕರೊಂದಿಗೆ ದೂರು ಅರ್ಜಿಗಳಿಗೆ ಸಂಬ0ಧಿಸಿದ ಸಂಪೂರ್ಣ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕೆಂದು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಎನ್.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಗಳು, ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಇದನ್ನು ಓದಿ:Tumkur News: ಜಗತ್ತಿನಲ್ಲಿ ಯುದ್ಧ ಮೇಳೈಸುತ್ತಿರು ವಾಗ ವಿಶ್ವಸಂಸ್ಥೆ ಮೌನಕ್ಕೆ ಜಾರಿದೆ: ಚಿಂತಕ ಸಿದ್ದರಾಮಯ್ಯ