ಚಿಕ್ಕನಾಯಕನಹಳ್ಳಿ: ಕೋಟ್ಯಂತರ ರೂ. ತಂದು ಅಭಿವೃದ್ಧಿ ಮಾಡಿದ್ದೇವೆ ಎಂದು ಪ್ರಚಾರ ಪಡೆಯುತ್ತಿರು ವವರು ಕ್ಷೇತ್ರದ ಜನಸಾಮಾನ್ಯರ ಸುಸ್ಥಿರ ಅಭಿವೃದ್ಧಿ ಕಡೆಗಣಿಸಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಘೋಷಿತ ಅಭ್ಯರ್ಥಿ ಭಟ್ಟರಹಳ್ಳಿ ಮಲ್ಲಿಕಾರ್ಜುನಯ್ಯ ಹೇಳಿದರು.
ಪಟ್ಟಣದಲ್ಲಿ ಗುರುವಾರ ಚಿಕ್ಕನಾಯಕನಹಳ್ಳಿ ಕ್ಷೇತ್ರ ವ್ಯಾಪ್ತಿಗೆ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿ, ಕೊಬ್ಬರಿ ಬೆಲೆ ಕುಸಿದು ರೈತರು ಕಂಗಾ ಲಾಗಿದ್ದರೂ ಉತ್ತಮ ಬೆಲೆ ಕೊಡಿಸುವ ಪ್ರಯತ್ನ ಮಾಡಿಲ್ಲ. ನಮ್ಮದು ತೆಂಗು ಬೆಳೆಯ ಸೀಮೆಯಾಗಿದ್ದರೂ ಅದರ ಉತ್ಪನ್ನಗಳಿಗೆ ಮೌಲ್ಯ ವರ್ಧನೆ ಮಾಡಿ ಜಾಗತಿಕ ಮಟ್ಟದಲ್ಲಿ ಮಾರು ಕಟ್ಟೆ ಒದಗಿಸುವ ಕೆಲಸವಾಗಿಲ್ಲ. ಸಾಲ ಸೌಲಭ್ಯಗಳನ್ನು ಕಲ್ಪಿಸಿ ತೆಂಗಿನ ಉಪ ಉತ್ಪನ್ನಗಳ ಉದ್ಯಮ ಆರಂಭಿ ಸಲು ಯುವಕರಿಗೆ ಉತ್ತೇಜನ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೋಟ್ಯಂತರ ರೂ. ಅನುದಾನ ತಂದು ರಸ್ತೆ, ಚರಂಡಿ ಮುಂತಾದ ಸೌಲಭ್ಯಗಳನ್ನು ಕಲ್ಪಿಸಿದ್ದೇ ದೊಡ್ಡ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ನರೇಗಾದಡಿ ಒಂದೇ ಕಾಮಗಾರಿಗೆ ತಾಲೂಕಿನ ಎರಡು ಗ್ರಾಮ ಪಂಚಾ ಯಿತಿಗಳಲ್ಲಿ ಬಿಲ್ ಪಡೆದಿರುವುದನ್ನು ನೋಡಿದರೆ ಅಭಿವೃದ್ಧಿ ಹೆಸರಿನಲ್ಲಿ ಹೇಗೆ ಭ್ರಷ್ಟಾಚಾರ ನಡೆಯುತ್ತದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದರು.
ಚುನಾವಣೆಯಲ್ಲಿ ಸೋತವರು ಪ್ರಾಮಾಣಿಕವಾಗಿ ವಿರೋಧ ಪಕ್ಷದ ಕೆಲಸ ಮಾಡಿದರೆ, ಅಭಿವೃದ್ಧಿ ನೆಪದಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ. ಪ್ರತಿ ತಿಂಗಳು ಸಂಬಳ ಪಡೆಯುವ ಮಾಜಿ ಶಾಸಕರು ವಿರೋಧ ಪಕ್ಷದ ಕೆಲಸ ಮಾಡದೇ ಇದ್ದರೆ ಪ್ರಜಾಪ್ರಭುತ್ವ ಹೇಗೆ ಉಳಿಯುತ್ತದೆ ಎಂದು ಪ್ರಶ್ನಿಸಿದರು.
ನಮ್ಮ ಪಕ್ಷ ಸ್ಥಾಪನೆಯಾದ ದಿನದಿಂದ ಭ್ರಷ್ಟಾಚಾರದ ವಿರುದ್ಧ ದನಿ ಎತ್ತುತ್ತಾ ಬಂದಿದೆ. ಅಧಿಕಾರಕ್ಕೆ ಬಂದರೆ, ಒಂದೇ ವಾರದೊಳಗೆ ಚಿಕ್ಕನಾಯಕನ ಹಳ್ಳಿ ಕ್ಷೇತ್ರದಾದ್ಯಂತ ಎಲ್ಲ ರೀತಿಯ ಅಕ್ರಮ ಮದ್ಯ ಮಾರಾಟ ನಿಲ್ಲಿಸಲಾಗುವುದು. ಸರ್ಕಾರಿ ಕಚೇರಿಗಳಲ್ಲಿ ಎಲ್ಲ ಅಕ್ರಮಗಳಿಗೆ ಕಡಿವಾಣ ಹಾಕಿ ಪಾರದರ್ಶಕ ಆಡಳಿತಕ್ಕೆ ಜನರಿಂದಲೇ ಚಾಲನೆ ನೀಡಲಾಗುವುದು ಎಂಬಿತ್ಯಾದಿ ಹತ್ತು ಅಂಶಗಳ ಪ್ರಣಾಳಿಗೆ ಬಿಡುಗಡೆ ಮಾಡಿದರು.
ಪಕ್ಷದ ತಾಲೂಕು ಅಧ್ಯಕ್ಷ ರವಿನಂದನ್, ಬಸವರಾಜ್, ರಮೇಶ್, ನಾಗರಾಜು, ಪುಟ್ಟಣ್ಣ, ದಾಸೇಗೌಡ ಇತರರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.