Friday, 25th October 2024

Tumkur Breaking: ಅಮಾನಿಕೆರೆ ಕೋಡಿ ನೀರಿನಿಂದ ದಿಬ್ಬೂರು ಜಲಾವೃತ

ತುಮಕೂರು: ನಿರಂತರ ಮಳೆಯಿಂದಾಗಿ ನಗರದ ಅಮಾನಿಕೆರೆ ಕೋಡಿ ನೀರು ನುಗ್ಗಿ ದಿಬ್ಬೂರು ಬಡಾವಣೆಯ ಮನೆ, ಅಂಗಡಿ, ತೋಟಗಳು ಜಲಾವೃತಗೊಂಡಿದ್ದು, ಶಾಸಕ ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಪಾಲಿಕೆ ಆಯುಕ್ತೆ ಅಶ್ವಿಜ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕೋಡಿ ನೀರಿನಿಂದ 2 ಮನೆಗಳು ಬಿದ್ದಿದ್ದು, ಹಲವಾರು ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿರುವು ದನ್ನು ಕಂಡ ಜಿಲ್ಲಾಧಿಕಾರಿಗಳು ಕೂಡಲೇ ಜಲಾವೃತವಾಗಿರುವ ಮನೆಗಳ ಕುಟುಂಬದ ಸದಸ್ಯರನ್ನು ಜಿಲ್ಲಾಡಳಿತದ ವತಿಯಿಂದ ದಿಬ್ಬೂರು ಸಮುದಾಯ ಭವನದಲ್ಲಿ ತಾತ್ಕಾಲಿಕವಾಗಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಕೂಡಲೇ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕೆಂದು ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ಅವರಿಗೆ ನಿರ್ದೇಶನ ನೀಡಿದರು.

ಸ್ಥಳದಲ್ಲಿದ್ದ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಕಳೆದ 2019 ಹಾಗೂ 2022ರಲ್ಲಿ ಅಮಾನಿಕೆರೆ ಕೋಡಿ ನೀರು ನುಗ್ಗಿ ಇಲ್ಲಿನ ನಿವಾಸಿಗಳ ಜೀವನ ಅಸ್ತವ್ಯಸ್ತವಾಗಿತ್ತು. ಇದೇ ಬಡಾವಣೆಯ ಸರ್ವೇ ನಂಬರ್ 207 ಹಾಗೂ ೨೦೮ರಲ್ಲಿರುವ ರಾಜಗಾಲುವೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲದ ಕಾರಣ ದಿಬ್ಬೂರು ಬಡಾವಣೆ ಜಲಾವೃತಗೊಂಡಿದೆ. ಅಲ್ಲದೆ ನಗರದಲ್ಲಿರುವ ಮುಖ್ಯ ರಾಜಗಾಲುವೆಗಳು ಒತ್ತುವರಿಯಾಗಿರುವುದರಿಂದಲೂ ಜನರು ಇಂತಹ ಸಮಸ್ಯೆಯನ್ನು ಎದುರಿಸುವ ಸಂದರ್ಭ ಎದುರಾಗಿದೆ. ಈ ನಿಟ್ಟಿನಲ್ಲಿ ರಾಜಗಾಲುವೆ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ನಂತರ ಹರಿಯುತ್ತಿದ್ದ ಮಳೆ ನೀರಿನಲ್ಲಿಯೇ ಜಿಲ್ಲಾಧಿಕಾರಿಗಳು ಮತ್ತು ಅಧಿಕಾರಿಗಳ ತಂಡ ಜಲಾವೃತಗೊಂಡಿದ್ದ ಮನೆ, ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕಂದಾಯ ಹಾಗೂ ಪಾಲಿಕೆ ವತಿಯಿಂದ ಕೂಡಲೇ ಜಂಟಿ ಸಮೀಕ್ಷೆ ನಡೆಸಿ ಒತ್ತುವರಿಯಾಗಿರುವ ರಾಜಗಾಲುವೆಗಳನ್ನು ತೆರವುಗೊಳಿಸಬೇಕು. ರಾಜಗಾಲುವೆಗಳಲ್ಲಿರುವ ಕಸ-ಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸುವ ಮೂಲಕ ಮಳೆನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕಲ್ಲದೆ, ಮಳೆಯಿಂದ ಯಾವುದೇ ಜೀವಹಾನಿಯಾಗದಂತೆ ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತುಮಕೂರಿನ ದೇವರಾಯಪಟ್ಟಣ ಕೆರೆ, ಅಕ್ಕ-ತಂಗಿ ಕೆರೆ, ಸತ್ಯಮಂಗಲ ಕೆರೆ ಸೇರಿದಂತೆ ವಿವಿಧ ಕೆರೆಗಳ ಕೋಡಿ ನೀರಿನಿಂದ ನಗರದ ಅಮಾನಿಕೆರೆ ತುಂಬಿ ಕೋಡಿ ಬಿದ್ದಿದ್ದು, ಹೆಚ್ಚುವರಿ ನೀರು ದಿಬ್ಬೂರು ಮಾರ್ಗವಾಗಿ ಭೀಮಸಂದ್ರ ಕೆರೆಯನ್ನು ತಲುಪುತ್ತದೆ. ಆದರೆ ಮಳೆನೀರಿನ ಪ್ರಮಾಣ ಹೆಚ್ಚಿರುವುದರಿಂದ ಬಡಾವಣೆಗೆ ನೀರು ನುಗ್ಗಿದೆ.

ಮಹಾನಗರ ಪಾಲಿಕೆ ವತಿಯಿಂದ ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ರಾಜ ಕಾಲುವೆ ತೆರೆವು ಕಾರ್ಯ ಕೈಗೊಳ್ಳಲಾಗಿದೆ. ಯಾವುದೇ ಅವಘಡಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಡಾವಣೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಶೇ. 50ರಷ್ಟು ಹೆಚ್ಚುವರಿ ಮಳೆಯಾಗಿದ್ದು, ಮುಂದುವರೆಯುವ ಸಾಧ್ಯತೆ ಇರುವುದರಿಂದ ತಗ್ಗು ಪ್ರದೇಶದಲ್ಲಿರುವ ಜನರು ಸುರಕ್ಷಿತ ಸ್ಥಳ, ಜಿಲ್ಲಾಡಳಿತದಿಂದ ತಾತ್ಕಾಲಿಕವಾಗಿ ತೆರೆದಿರುವ ಗಂಜಿ ಕೇಂದ್ರಗಳಿಗೆ ತೆರಳಬೇಕೆಂದು ಮನವಿ ಮಾಡಿದರು.

ಮಹಾನಗರ ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ಮಾತನಾಡಿ, ಜಿಲ್ಲೆಯಲ್ಲಿ ಮಳೆ ಆರಂಭಕ್ಕೂ ಮುನ್ನವೇ ರಾಜ ಕಾಲುವೆಗಳ ತೆರವು ಕಾರ್ಯ ಕೈಗೊಳ್ಳಲಾಗಿತ್ತು, ಕೆಲವು ಪ್ರದೇಶಗಳಲ್ಲಿ ರಾಜ ಕಾಲುವೆ ಒತ್ತುವರಿಯಾಗಿದ್ದು, ಜಿಲ್ಲಾಡಳಿತ ಮತ್ತು ಪಾಲಿಕೆಯಿಂದ ಜಂಟಿ ಸರ್ವೇ ಕಾರ್ಯ ಕೈಗೊಂಡು ರಾಜ ಕಾಲುವೆ ತೆರವಿಗೆ ಕ್ರಮ ಕೈಗೊಳ್ಳ ಲಾಗುವುದು. ಮಳೆಯಿಂದ ನಿರಾಶ್ರಿತರಾದವರಿಗೆ ಗಂಜಿ ಕೇಂದ್ರದಲ್ಲಿ ಹಾಸಿಗೆ-ಹೊದಿಕೆ, ಕುಡಿಯುವ ನೀರು, ಆಹಾರ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಭೂದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕ ಸಣ್ಣಯ್ಯ, ಪಾಲಿಕೆ ಇಂಜಿನಿಯರ್ ವಿನಯ್, ಅಗ್ನಿಶಾಮಕ, ಕಂದಾಯ ಹಾಗೂ ಪಾಲಿಕೆ ಅಧಿಕಾರಿಗಳು ಹಾಜರಿದ್ದರು.