ಬೆಂಗಳೂರು: ದಾದಿಯರ ಕೌಶಲ್ಯವನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ತರಬೇತಿಗಳ ಅವಶ್ಯಕತೆ ಇದೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಎಚ್ಸಿಜಿ ಆಯೋಜಿಸಿದ್ದ ಭಾರತದ ಅತಿದೊಡ್ಡ ಕ್ಯಾನ್ಸರ್ ಕೇರ್ ನೆಟ್ವರ್ಕ್ನ “5ನೇ ವಾರ್ಷಿಕ ರಾಷ್ಟ್ರೀಯ ನರ್ಸಿಂಗ್ ಕಾನ್ಫರೆನ್ಸ್- 2024” ನನ್ನು ಉದ್ಘಾಟಿಸಿ ಮಾತನಾಡಿದರು.
ವೈದ್ಯರಷ್ಟೇ ಪ್ರಬುದ್ಧರಾಗಿ ದಾದಿಯರು ನಮ್ಮ ಆರೋಗ್ಯದ ಆರೈಕೆ ಮಾಡುತ್ತಿದ್ದು, ಇಡೀ ಆರೋಗ್ಯ ವ್ಯವಸ್ಥೆಗೇ ಅವರು ಬೆನ್ನೆಲುಬಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ದಾದಿಯರು ತಮ್ಮ ಜೀವದ ಆಸೆ ಬದಿಗಿಟ್ಟು ರೋಗಿಗಳ ಸೇವೆ ಮಾಡಿದ್ದಾರೆ.
ವೈದ್ಯರು ಚಿಕಿತ್ಸೆ ನೀಡಿದರೆ, ದಾದಿಯರು ರೋಗಿಯು ಆಸ್ಪತ್ರೆಯಿಂದ ಬಿಡುಗಡೆ ಆಗುವವರೆಗೂ ಆರೈಕೆ ಮಾಡುತ್ತಾರೆ. ದಾದಿಯರ ಕೆಲಸ ಗೌರವಾನ್ವಿತ ವೃತ್ತಿಯಾಗಿದ್ದು, ಅವರ ನಿಸ್ವಾರ್ಥ ಸೇವೆಯನ್ನು ಪ್ರತಿಯೊಬ್ಬರು ಸ್ಮರಿಸಬೇಕು. ದಾದಿಯರ ಕೌಶಲ್ಯವನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ತರಬೇತಿಗಳ ಅವಶ್ಯಕತೆ ಇದೆ ಎಂದು ಹೇಳಿದರು.
ಭಾರತವು ನರ್ಸಿಂಗ್ ವೃತ್ತಿಯಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿದೆ, ನಮ್ಮ ದಾದಿಯರು ತಮ್ಮ ಪರಿಣತಿ ಮತ್ತು ಬದ್ಧತೆಗಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿದ್ದಾರೆ. ನಾವು ಅವರಿಗೆ ನೀಡಬೇಕಾದ ತರಬೇತಿ, ಸೌಲಭ್ಯಗಳು ಮತ್ತು ಭಾವನಾತ್ಮಕ ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಮೂಲಕ ಅವರಿಗೆ ಸಹಕಾರಿಯಾಗಿ ನಿಲ್ಲಬೇಕು ಎಂದರು,
ಎಚ್ಸಿಜಿ ಸಿಇಒ ರಾಜ್ ಗೋರ್ ಮಾತನಾಡಿ, ದಾದಿಯರು ಎದುರಿಸುತ್ತಿರುವ ಸವಾಲುಗಳನ್ನು ಚರ್ಚಿಸಲು ಈ ಅಧಿವೇಶನ ಹೆಚ್ಚು ಅವಶ್ಯಕ. ಎಚ್ಸಿಜಿ ದಾದಿಯರಿಗೆ ವಿಶೇಷ ಸ್ಥಾನಮಾನ ನೀಡಿದ್ದು, ಅವರಿಗೆ ಕಾಲಕ್ಕೆ ತಕ್ಕಂತೆ ತರಬೇತಿ ನೀಡುವ ಮೂಲಕ ಮೇಲ್ದರ್ಜೆಗೇರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. ಸಮಾವೇಶದಲ್ಲಿ ಅನೇಕ ವಿಷಯಗಳ ಮೇಲೆ ಚರ್ಚೆ ನಡೆಸಲಾಯಿತು.
ಇದನ್ನೂ ಓದಿ: @dineshgunduraoofficial