Sunday, 5th January 2025

Dr MC Sudhakar: ನಂದಿಗಿರಿ ಧಾಮದಲ್ಲಿ ಸಚಿವ ಸಂಪುಟ ಸಭೆಗೆ ಚಿಂತನೆ: ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್

ಚಿಕ್ಕಬಳ್ಳಾಪುರ : ನಂದಿ ಗಿರಿಧಾಮದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸುವಂತೆ ಕೋರಿ ಮಾನ್ಯ ಮುಖ್ಯಮಂತ್ರಿ ಗಳಾದ ಸಿದ್ದಾರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ ಎಂದು  ಉನ್ನತ ಶಿಕ್ಷಣ ಸಚಿವರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಸಿ ಸುಧಾಕರ್ ಅವರು ತಿಳಿಸಿದರು.

ನಗರದ ಎಂ.ಜಿ.ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕಾಲೇಜು ಮತ್ತು ಶಿಕ್ಷಣ ಇಲಾಖೆ ಇವರ  ಸಂಯುಕ್ತಾಶ್ರದಲ್ಲಿನಡೆದ ನೂತನ ಕಟ್ಟಡದ ಶಂಕು ಸ್ಥಾಪನೆ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿಯವರು ೧೯೨೭ರಲ್ಲಿ ೪೫ ದಿನ ಮತ್ತು ೧೯೩೬ ರಲ್ಲಿ ೨೦ ದಿನ ಒಟ್ಟು ೬೫ ದಿನ ನಂದಿ ಬೆಟ್ಟದಲ್ಲಿ ವಾಸ್ತವ್ಯ ಮಾಡಿ ಆರೋಗ್ಯವನ್ನು ಸುಧಾರಿಸಿಕೊಂಡಿದ್ದರು. ಇಂತಹ ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಗಾಂಧೀಜಿ ಯವರ ಹೆಜ್ಜೆ ಗುರುತುಗಳಿರುವ ಜಾಗದಲ್ಲಿ ರಾಜ್ಯ ಸಚಿವ ಸಂಪುಟ ಸಭೆಯನ್ನು ನಡೆಸಬೇಕೆಂದು ಚಿಂತನೆ ಇದೆ. ಸದ್ಯದಲ್ಲೆ ಚಾಮರಾಜ ನಗರ  ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಅದೇ ರೀತಿ ನಮ್ಮ ಜಿಲ್ಲೆಯಲ್ಲಿಯೂ ಕೂಡ ಸಭೆ ನಡೆಯಬೇಕು.  ನಂದಿ ಗಿರಿಧಾಮದ ರಾಜ್ಯದ ಏಕೈಕ ರೋಪ್ ವೇ ಕಾಮಗಾರಿಗೆ ವೇಗ ನೀಡಬೇಕು ಹಾಗೂ ಈ ಭಾಗದ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ಸಳೆಯುವ ನಿಟ್ಟಿನಲ್ಲಿ ಸಂಪುಟ ಸಭೆ ಸಹಕಾರಿಯಾಗಲಿದ್ದು ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದರು.

ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಮಹತ್ತರವಾದ ಸುಧಾರಣೆಗಳನ್ನು ಜಾರಿಗೊಳಿಸುವ ಉದ್ದೇಶಕ್ಕಾಗಿ ವಿಶ್ವ ಬ್ಯಾಂಕಿನಿAದ ೨೫೦೦ ಕೋಟಿಗಳ ಸಾಲವನ್ನು ಪಡೆಯಲು ರಾಜ್ಯ ಸರ್ಕಾರ ಸಂಪುಟದ ಅನುಮತಿಯನ್ನು ಪಡೆಯಲಾಗಿದೆ. ಈ ಅನುದಾನವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡು ಕೈಗಾರಿಕೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಉದ್ಯೋಗ ಖಾತರಿಪಡಿಸುವಂತಹ ಮತ್ತಷ್ಟು ಹೊಸ ಕೋರ್ಸ್ಗ ಳನ್ನು ಪ್ರಾರಂಭಿಸಲಾಗುವುದು, ೨೦೨೪-೨೫ನೇ ಶೈಕ್ಷಣಿಕ ಸಾಲಿನಲ್ಲಿ ಆರಂಭಿಸಲಾಗಿರುವ ಎಇಡಿಪಿ ಕೌಶಲ್ಯ ಆಧಾರಿತ ಪದವಿ ತರಗತಿಗಳಿಗೆ ರಾಜ್ಯದಲ್ಲಿ ೧೬೦೦ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಎಂದರು.

ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಸಹ ನೇರವಾಗಿ ಉದ್ಯೋಗದ ಅವಕಾಶಗಳನ್ನು ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ೨೦೨೪-೨೫ ನೇ ಸಾಲಿನಲ್ಲಿ ಕೌಶಲ್ಯಾಧಾರಿತ ಅಪ್ರೆಂಟ್‌ಶಿಪ್ ಎಂಬೇಡೆಡ್ ಡಿಗ್ರಿ ಪ್ರೋಗ್ರಾಮ್ ಶೈಕ್ಷಣಿಕ ಕೋರ್ಸುಗಳನ್ನು ಪರಿಚಯಿಸಿದೆ.ಮುಖ್ಯವಾಗಿ ಬಿಕಾಂ ಲಾಜಿಸ್ಟಿಕ್, ಇ- ಕಾಮರ್ಸ್, ಬಿಕಾಂ ರೀಟೈಲ್ ಮತ್ತು ಬಿಎಫ್‌ಎಸ್‌ಐ ಕೋರ್ಸ್ ಗಳನ್ನು ಈ ವರ್ಷ ಆರಂಭಿಸಲಾಗಿದ್ದು ಈ ಕೋರ್ಸುಗಳನ್ನು ಆಯ್ಕೆ ಮಾಡಿಕೊಂಡು ಪದವಿಗೆ ಸೇರಿದ ವಿದ್ಯಾರ್ಥಿಗಳಿಗೆ ಪದವಿ ಜೊತೆಗೆ ಪ್ರತ್ಯೇಕ ಪಠ್ಯ ಚಟುವಟಿಕೆಗಳಲ್ಲಿ ತರಬೇತಿ ನೀಡಿ ಅಂತಿಮ ವರ್ಷದ ಐದು ಮತ್ತು ಆರನೇ  ಸೆಮಿಸ್ಟರ್ ವೇಳೆಗೆ ನೇರವಾಗಿ  ಕಂಪೆನಿಗಳಲ್ಲಿ  ಉದ್ಯೋಗವಕಾಶಗಳನ್ನು  ಶಿಷ್ಯವೇತನದೊಂದಿಗೆ ನೀಡಲಾಗುವುದು. ಶಿಷ್ಯವೇತನವು ೮೦೦೦ ದಿಂದ ಆರಂಭವಾಗಿ ೨೦ ಸಾವಿರದ ವರೆಗೂ ಇರಲಿದೆ. ಈ ಮಾದರಿಯ ಶೈಕ್ಷಣಿಕ ವ್ಯವಸ್ಥೆಯನ್ನು  ಜಾರಿಗೆ ತಂದು ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಲು ಸರ್ಕಾರ ಮುಂದಾಗಿದೆ ಈ ನಿಟ್ಟಿನಲ್ಲಿ ಮತ್ತಷ್ಟು ಪರಿಣಾಮಕಾರಿ ಯುಕ್ತ ಕ್ರಮಗಳನ್ನು ಕೈಗೊಂಡು ಕಾಲೇಜು ಶಿಕ್ಷಣ ಇಲಾಖೆ ಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರಲು ಪ್ರಯತ್ನಿಸಲಾಗುವುದೆಂದು ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡವನ್ನು ೫.೮೭ ಕೋಟಿಯಲ್ಲಿ ಹಾಗೂ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆಚ್ಚುವರಿ ಕೊಠಡಿಗಳನ್ನು ೩.೧೮ ಕೋಟಿ ವೆಚ್ಚದಲ್ಲಿ ನಿರ್ಮಿಸಲು ಇಂದು ಶಂಕು ಸ್ಥಾಪನೆ ಯನ್ನು ನೆರವೇರಿಸಲಾಗಿದೆ. ಈ ನೂತನ ಕಟ್ಟಡಗಳನ್ನು ಖಾಸಗಿ ಕಾಲೇಜುಗಳನ್ನು ಮೀರಿಸುವಂತೆ ನಿರ್ಮಾಣ ಮಾಡಲಾಗುತ್ತದೆ. ಈ ಭಾಗದ ಕಾಲೇಜುಗಳಲ್ಲಿ ಮೂಲಭೂತವಾಗಿ ಅಗತ್ಯವಿರುವ ಸೌಕರ್ಯಗಳನ್ನು ಒದಗಿಸಲು ಅನುದಾನ ನೀಡಲಾಗುವುದು. ಈ ಕುರಿತು ಪ್ರಸ್ತಾವನೆ ಸಲ್ಲಿಸಲು ಸಂಬAಧಪಟ್ಟ ಪ್ರಾಂಶುಪಾಲರುಗಳಿಗೆ ತಿಳಿಸ ಲಾಗಿದೆ. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿಜ್ಞಾನ ವಿಭಾಗವನ್ನು ತೆರೆಯಲು ಚಿಂತಿಸಲಾಗಿದೆ ಎಂದು ತಿಳಿಸಿದರು.

ಕನ್ನಡ ಭವನದಲ್ಲಿ ಸಮ್ಮೇಳನ

ಜಿಲ್ಲೆಯಲ್ಲಿ ಆಧುನಿಕ ರೀತಿಯಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗಿರುವ ಜಿಲ್ಲಾ ಕನ್ನಡ ಭವನವನ್ನು ಈ ತಿಂಗಳ ಅಂತ್ಯದೊಳಗೆ ಫೆಬ್ರವರಿ ಮಾಹೆಯಲ್ಲಿ ಉದ್ಘಾಟನೆ ಮಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇದೇ ಭವನದಲ್ಲಿ ಆಯೋಜಿಸಲು ಯೋಜಿಸಲಾಗಿದೆ. ಅತ್ಯಂತ ಯೋಜಿತವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ಬೇಕಾಗುವಂತಹ ಎಲ್ಲಾ ವ್ಯವಸ್ಥೆಗಳನ್ನು ಈ ಭವನದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರ ಸಭೆ ಅಧ್ಯಕ್ಷರಾದ ಎ. ಗಜೇಂದ್ರ, ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಮುನಿರಾಜು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಯ್ಯ ಹಾಗೂ ಬೋಧಕ ಬೋಧಕೇತರ ಆಡಳಿತ ವರ್ಗದವರು ವಿದ್ಯಾರ್ಥಿಗಳು, ಸಾರ್ವಜನಿಕರು ಹಾಜರಿದ್ದರು.

ಇದನ್ನೂ ಓದಿ: #DrSudhakar