Thursday, 28th November 2024

ಭಾರತೀಯ ಪ್ರಾಚೀನ ಉತ್ಕೃಷ್ಟ ಸಂಸ್ಕೃತಿ ಉಳಿಯಲಿ: ಡಾ.ವಿಲಿಯಂ ಕ್ರ್ಯಾನ್ಟ್ಜ್

ತುಮಕೂರು: ‘ಹತ್ತು ಸಾವಿರ ವರ್ಷಗಳ ಇತಿಹಾಸವುಳ್ಳ, ಅತ್ಯಂತ ಪ್ರಾಚೀನವೂ, ಅದ್ಭುತವೂ ಆದ ಭಾರತೀಯ ಸಂಸ್ಕೃತಿ ಯನ್ನು ನಾನು ಸಾಕಷ್ಟು ಗಮನಿಸಿದ್ದೇನೆ ಹಾಗು ಆನಂದಿಸಿದ್ದೇನೆ. ಇಲ್ಲಿನ ಕೌಟುಂಬಿಕ ವ್ಯವಸ್ಥೆ ಅಪೂರ್ವವಾದದ್ದು.

ಭಾರತೀಯರು ತಮ್ಮ ಈ ಅತ್ಯುತ್ಕೃಷ್ಟ ಸಂಸ್ಕೃತಿಯ ಹಿನ್ನೆಲೆಯನ್ನು ದಯವಿಟ್ಟು ಅಧ್ಯಯನ ಮಾಡಿ, ಇದನ್ನು ನಿರ್ಲಕ್ಷಿಸದೇ ಉತ್ತಮ ರೀತಿಯಲ್ಲಿ ಮುಂದುವರೆಸಬೇಕು’ ಎಂದು ಕೊಲರೆಡೊ ವಿಶ್ವವಿದ್ಯಾನಿಲಯದ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಹಿರಿಯ ವಿಜ್ಞಾನಿ-ಸಂಶೋಧಕ ಹಾಗು ಅಮೇರಿಕಾ ನ್ಯಾಷನಲ್ ಸೈನ್ಸ್ ಫೌಂಡೇಶನ್ನಿನ ಮಾಜಿ ಪ್ರೋಗ್ರಾಮ್ ಡೈರೆಕ್ಟರ್ ಡಾ. ವಿಲಿಯಂ ಕ್ರ್ಯಾನ್ಟ್ಜ್ ಅಭಿಪ್ರಾಯಪಟ್ಟರು.

ಅವರು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ಏರ್ಪಾಡಾಗಿದ್ದ ಶಿಕ್ಷಕರಿಗೆ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ‘ಜೀವನವು ನನಗೆ ಕಳಿಸಿದ ಪಾಠಗಳು’ ಎಂಬ ವಿಷಯವಾಗಿ ವಿಶೇಷ ಪ್ರವಚನ ಮತ್ತು ಸಂವಾದ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು.

‘ಭಾರತೀಯ ವಿದ್ಯಾರ್ಥಿಗಳಲ್ಲಿ ಅತ್ಯದ್ಭುತ ಬೌದ್ಧಿಕ ಸಾಮರ್ಥ್ಯವಿದ್ದು ಭಾರತೀಯರು ಭಾರತಕ್ಕಾಗಿ ಬದುಕುವ ಕಲೆಯನ್ನು ಮಗೂಡಿಸಿಕೊಳ್ಳಿ. ಉಪನಿಷತ್ತುಗಳನ್ನು ಗಮನಿಸಿ ರುವ ನನಗೆ ನಮ್ಮೆಲ್ಲ ಪ್ರಶ್ನೆಗಳಿಗೆ ನಮ್ಮ ಆಂತರ್ಯವೇ ಉತ್ತರಿಸುತ್ತದೆಂಬ ಅಚಲ ವಿಶ್ವಾಸವಿದೆ’ ಎಂದು ಭಾರತೀಯರಿಗೆ ಕಿವಿಮಾತು ಹೇಳಿದರು.

ತಮ್ಮ ವಿದ್ಯಾರ್ಥಿ ಜೀವನದ ಬಗ್ಗೆ ಪ್ರಸ್ತಾಪಿಸುತ್ತಾ ಶ್ರೀಯುತರು, ‘ವಿದ್ಯಾರ್ಥಿ ಜೀವನದ ಪ್ರಾರಂಭದಲ್ಲಿ ನಾನೇನೂ ಅತ್ಯಂತ ಪ್ರತಿಭಾವಂತನಲ್ಲ, ಆದರೆ ಪ್ರಶ್ನಿಸುವ ಪ್ರವೃತ್ತಿ ಬೆಳೆಸಿಕೊಂಡೆ. ಬಾಲ್ಯದಿಂದಲೂ ಸಂಗೀತದ ಬಗ್ಗೆ ಅಪಾರ ಒಲವಿತ್ತು. ಮಾತಾ ಪಿತೃಗಳನ್ನು ಗೌರವಿಸಿ ಅವರನ್ನು ಅನುಸರಿಸಬೇಕು, ಏಕೆಂದರೆ ಅವರು ದೊಡ್ಡ ವಿದ್ಯಾವಂತರಲ್ಲದಿದ್ದರೂ ತಮ್ಮ ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿಸಬಯಸಿ ಬೆಂಬಲಿಸುತ್ತಾ ಸಾಗುತ್ತಾರೆ’ ಎಂದರು.

ತಮ್ಮ ಯಶಸ್ವಿ ಜೀವನದ ರಹಸ್ಯ ಕುರಿತು ಮಾತನಾಡುತ್ತಾ, ‘ಜ್ಞಾನವೃದ್ಧಿಗಾಗಿ ಸ್ಮೃತಿ ಸರ್ಕಲ್ಸ್ ಗಳಿಗೆ ಮೊರೆಹೋದೆ, ಯುವ ಜನರನ್ನು ನಾನು ಬಹಳ ಇಷ್ಟಪಟ್ಟಿದ್ದರಿಂದಲೇ ಶಿಕ್ಷಣ ಕ್ಷೇತ್ರಕ್ಕೆ ಬಂದೆ. ಹಣ, ಅಧಿಕಾರ, ಗೌರವಗಳಿಗಾಗಿ ಜೀವನದಲ್ಲಿ ಎಂದೂ ಹಲುಬಲಿಲ್ಲ. ಜ್ಞಾನವೃದ್ಧಿಗೆ ಹೆಚ್ಚು ತಲೆಕೆಡೆಸಿಕೊಂಡಿದ್ದೇನೆ. ಎಂಭತ್ತು ದೇಶಗಳಲ್ಲಿ ನಾನು ಪ್ರವಚನಕ್ಕಾಗಿ ಹಾಗು ಸಂಶೋಧನೆ ಕುರಿತಾದ ವಿಷಯಗಳ ಮಾರ್ಗದರ್ಶಕನಾಗಿ ಆಹ್ವಾನಿತನಾಗಿದ್ದೇನೆ’ ಎಂದರು.

ತುಮಕೂರಿನ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತೀ, ಸ್ವಾಮಿ ಧೀರಾನಂದಜೀ, ಜಿಲ್ಲಾಧಿಕಾರಿ ಡಾ.ವೈ .ಎಸ್.ಪಾಟೀಲ್, ಅಕ್ಷಯ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀನಿವಾಸ ರಾವ್ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶು ಪಾಲರಾದ ಡಾ. ಲೀಲಾವತಿ ಲೇಪಾಕ್ಷಿ ರವರು ವೇದಿಕೆಯಲ್ಲಿದ್ದರು.

ಜಿಲ್ಲೆಯ ವಿವಿಧ ಇಂಜಿನಿಯರಿಂಗ್ ಮತ್ತು ಪದವಿ ಕಾಲೇಜುಗಳಿಂದ ಪ್ರಾಧ್ಯಾಪಕರು ಮತ್ತು ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿ ದ್ದರು. ಪ್ರೊ.ರಮ್ಯ ಕಲ್ಲೂರ್ ಸ್ವಾಗತಿಸಿದರೆ ಪ್ರೊ.ಸುಧೀರ್ ರಂಗನಾಥ್ ಅತಿಥಿಗಳನ್ನು ಪರಿಚಯಿಸಿ ವಂದಿಸಿದರು.