ತುಮಕೂರು : 2023ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದ ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಮಾಜಿ ವಿಪ ಸದಸ್ಯ ರಮೇಶ್ ಬಾಬು ಅವರು ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಪಾರದರ್ಶಕ ಮತ್ತು ನ್ಯಾಯಯುತ ಚುನಾವಣೆ ನಡೆಸುವ ಕಾರಣಕ್ಕಾಗಿ ಚುನಾವಣಾ ಆಯೋಗವು ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಧೀರ್ಘಕಾಲದಿಂದ ಒಂದೇ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಶಾಸಕರ, ಮಂತ್ರಿಗಳ ಮತ್ತು ಅಭ್ಯರ್ಥಿಗಳ ಸಂಬಂಧಿಕರಾಗಿ ಚುನಾವಣೆಯ ಮೇಲೆ ಪ್ರಭಾವ ಬೀರುವಂತಹ ಸರಕಾರಿ ಅಧಿಕಾರಿಗಳನ್ನು ಚುನಾವಣಾ ಪೂರ್ವದಲ್ಲಿ ವರ್ಗಾವಣೆ ಮಾಡುವುದು ಸಹಜ ಪ್ರಕ್ರಿಯೆ ಆಗಿರುತ್ತದೆ.
ತುಮಕೂರು ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳ ಚುನಾವಣೆ ನಡೆಯಬೇಕಾಗಿದ್ದು, ಈ ಜಿಲ್ಲೆಯು ಕಂದಾಯ ವಿಭಾಗದಲ್ಲಿ 10 ತಾಲ್ಲೂಕಿನ ತಹಸೀಲ್ದಾರ್‌ಗಳು, 3 ಉಪವಿಭಾಗ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯಲ್ಲಿ 42 ಪಿಎಸ್‌ಐ, 13 ಸಿಪಿಐಗಳು, 5 ಡಿವೈ ಎಸ್‌ಪಿಗಳು ಹಾಗೂ ಇತರ ಇಲಾಖೆಗಳಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವುಗಳಲ್ಲಿ ಕೆಲವರು 2 ವರ್ಷಗಳಿಗೂ ಮೇಲ್ಪಟ್ಟು ಒಂದೇ ಇಲಾಖೆಯಲ್ಲಿ ಒಂದೇ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಚುನಾವಣಾ ಸಮಯದಲ್ಲಿ ಹಾಲಿ ಸಚಿವರ ಮತ್ತು ಶಾಸಕರ ಅನುಕೂಲಕ್ಕೆ ಅನುಗುಣವಾಗಿ ಕೆಲಸ ಮಾಡುವ ಸಾಧ್ಯತೆಯಿ ರುತ್ತದೆ. ಕೆಲವು ಅಧಿಕಾರಿಗಳು ಹಾಲಿ ಸಚಿವರ ಮತ್ತು ಶಾಸಕರ ಸಂಬಂಧಿಕರಾಗಿದ್ದು, ಮತದಾರರ ಮೇಲೆ ತಮ್ಮ ಪ್ರಭಾವವನ್ನು ಬೀರುವ ಸಾಧ್ಯತೆಯಿರುತ್ತದೆ.
ಇಂತಹ ಅಧಿಕಾರಿಗಳನ್ನು ಚುನಾವಣಾ ಪೂರ್ವದಲ್ಲಿ ವರ್ಗಾವಣೆ ಮಾಡದೇ ಇದ್ದರೆ, ಪಾರದರ್ಶಕ ಮತ್ತು ನ್ಯಾಯಯುತ ಚುನಾವಣೆ ಮಾಡಲು ಸಾದ್ಯವಿರುವುದಿಲ್ಲ. ಆದ ಕಾರಣ ಕೇಂದ್ರ ಚುನಾವಣಾ ಆಯೋಗವು ತುಮಕೂರು ಜಿಲ್ಲೆಯಲ್ಲಿ ಒಂದೇ ಸ್ಥಳದಲ್ಲಿ 2 ವರ್ಷಕ್ಕೂ ಮೇಲ್ಪಟ್ಟು ಹಾಗೂ ಧೀರ್ಘ ಕಾಲದಿಂದ ಒಂದೇ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತು ಹಾಲಿ ಸಚಿವರ, ಶಾಸಕರ ಸಂಬಂಧಿಕರ ಮಾಹಿತಿಯನ್ನು ಪಡೆದುಕೊಂಡು ಇಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಬೇಕಾಗಿ ಕೋರುತ್ತೇನೆ. ಯಾವುದೇ ಸರ್ಕಾರಿ ಅಧಿಕಾರಿಗಳ ಮೇಲೆ ನಿರ್ದಿಷ್ಟವಾಗಿ ದೂರುಗಳು ಬಂದಲ್ಲಿ, ಅಂತಹ ಅಧಿಕಾರಿಗಳನ್ನು ಅಲ್ಲಿಂದ ವರ್ಗಾವಣೆ ಮಾಡಲು ಮತ್ತು ಚುನಾವಣಾ ಕಾರ್ಯದಿಂದ ವಿಮುಕ್ತಗೊಳಿಸಲು ಚುನಾವಣಾ ಆಯೋಗವು ಕೂಡಲೇ ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಮಾಡಿದ್ದಾರೆ.
Read E-Paper click here