ಮಧುಗಿರಿ: ತಾಲ್ಲೂಕಿನ ಮಿಡಿಗೇಶಿ ಗ್ರಾಮದಲ್ಲಿ ಗುರುವಾರ ರಾತ್ರಿ ಜೋಡಿ ಕೊಲೆಯಾದ ರಾಮಾಂಜಿನಪ್ಪ ಹಾಗೂ ಶಿಲ್ಪಾ ಹಾಗೂ ಗಾಯಗೊಂಡಿರುವ ಮಲ್ಲಿಕಾರ್ಜುನ ರವರುಗಳ ಕುಟುಂಬದವರನ್ನು ಕೆಪಿಸಿಸಿ ಉಪಾಧ್ಯಕ್ಷರು, ಮಾಜಿ ಶಾಸಕರಾದ ಕೆ.ಎನ್. ರಾಜಣ್ಣ ಮಧುಗಿರಿಯ ಸಾರ್ವಜನಿಕರ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ ಸಾಂತ್ವನ ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲ್ಲೂಕಿನ ಇತಿಹಾಸದಲ್ಲಿ ಇಂತಹ ಅಮಾನುಷ ಕೃತ್ಯ ನಡೆದು ಹೋಗಿರು ವುದು ಇದೇ ಮೊದಲು, ಈ ಕೃತ್ಯವನ್ನು ಖಂಡಿಸುತ್ತೇನೆ. ಈ ಪ್ರಕರಣದಲ್ಲಿ ಯಾವುದೇ ಪ್ರಭಾವಿ ವ್ಯಕ್ತಿಗಳು ಇದ್ದರೂ ಪೊಲೀಸರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಪೊಲೀಸರು ಈ ಪ್ರಕರಣದ ತನಿಖೆಯನ್ನು ಅದಷ್ಟು ಬೇಗ ನಡೆಸಿ ಕೊಲೆಯಾದವರಿಗೆ ಶೀಘ್ರ ನ್ಯಾಯ ಸಿಗುವಂತೆ ಮಾಡಬೇಕು. ನಾವು ಪೊಲೀಸರಲ್ಲಿ ಸಂಪೂರ್ಣ ನಂಬಿಕೆ ಇಟ್ಟಿದ್ದೇವೆ. ಈ ಪ್ರಕರಣದಲ್ಲಿ ನ್ಯಾಯ ಸಿಗುತ್ತದೆಂದು, ಕೊಲೆಯಾದ ಕುಟುಂಬ ದವರಿಗೆ ನ್ಯಾಯ ಒದಗಿಸಲು ಪೊಲೀಸರು ವಿಫಲರಾದರೆ ಮುಂದಿನ ದಿನಗಳಲ್ಲಿ ೨೫ ಸಾವಿರ ಜನರನ್ನು ಸೇರಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಕೃತ್ಯದಲ್ಲಿ ಸ್ಥಳೀಯ ಶಾಸಕರ ಕೈವಾಡವಿರುವುದಿಲ್ಲ. ಅವರನ್ನು ನಾನು ಬಹಳ ವರ್ಷಗಳಿಂದ ಕಂಡಿದ್ದೇನೆ. ಆದರೆ, ಶಾಸಕರ ಸಹೋದರನ ಇಂತಹವರಿಗೆ ರಕ್ಷಣೆ ನೀಡಿರಬಹುದು. ಹಾಗಾಗಿ ಪೊಲೀಸರು ಆರೋಪಿಗಳ ಹಾಗೂ ಶಾಸಕರ ಸಹೋದರನ ಪೋನ್ ಕರೆಗಳನ್ನು ಒಮ್ಮೆ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಮರಣೋತ್ತರ ಪರೀಕ್ಷೆಯ ನಂತರ ಮಿಡಿಗೇಶಿ ಗ್ರಾಮಕ್ಕೆ ತೆರಳಿ ಮೃತಪಟ್ಟ ಕುಟುಂಬದವರನ್ನು ಭೇಟಿ ಮಾಡಿದರು. ಮೃತೆ ಶಿಲ್ಪ ರವರ ಮಗಳನ್ನು ಭೇಟಿ ಮಾಡಿ ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸ ಮೊಟಕುಗೊಳಿಸದಂತೆ ಸೂಚಿಸಿ ವಿದ್ಯಾಭ್ಯಾಸದ ಖರ್ಚು ನ್ನು ಸಂಪೂರ್ಣವಾಗಿ ಭರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ , ಜಿ.ಜೆ.ರಾಜಣ್ಣ , ಪಿ.ಸಿ.ಕೃಷ್ಣ ರೆಡ್ಡಿ , ನಿಖಿತ್ ಕುಮಾರ್ ಮೌರ್ಯ, ಕಮ್ಮನಕೋಟೆ ಶಿವಣ್ಣ , ಶಾಂತಲರಾಜಣ್ಣ , ಎಸ್ ಎನ್ ರಾಜು ಹಾಗೂ ಮುಖಂಡರುಗಳು ಇದ್ದರು.