Friday, 18th October 2024

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ವಿಶ್ವವಿದ್ಯಾನಿಲಯಗಳ ಪಾತ್ರ ದೊಡ್ಡದು: ಸಚಿವ  ಅಶ್ವತ್ಥ ನಾರಾಯಣ

ತುಮಕೂರು: ಜ್ಞಾನಕ್ಕೆ ಯಾವುದೇ ರೀತಿಯ ಇತಿಮಿತಿಗಳು ಇರುವುದಿಲ್ಲ. ಅದನ್ನು ಗರಿಷ್ಠ ಮಟ್ಟದಲ್ಲಿ ಯುವಜನರಿಗೆ ನೀಡು ವಲ್ಲಿ ವಿಶ್ವವಿದ್ಯಾನಿಲಯಗಳ ಪಾತ್ರ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ತುಮಕೂರು ವಿಶ್ವವಿದ್ಯಾನಿಲಯ ಸಮಕುಲಾಧಿಪತಿ ಡಾ. ಸಿ. ಎನ್. ಅಶ್ವತ್ಥ ನಾರಾಯಣ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ಬಿದರಕಟ್ಟೆ ಕ್ಯಾಂಪಸ್‌ನಲ್ಲಿ ನಿರ್ಮಿಸ ಲಾಗಿರುವ ನೂತನ ಕಟ್ಟಡಗಳ ಉದ್ಘಾಟನೆ ನೆರವೇರಿ ಸಿದ ಬಳಿಕ, ವಿವಿ ಸಭಾಂಗಣದಲ್ಲಿ ನಡೆದ ‘ಉನ್ನತ ಶಿಕ್ಷಣದಲ್ಲಿ ಸುಶಾಸನ: ಪರಿಕಲ್ಪನೆ ಮತ್ತು ಅನುಷ್ಠಾನ’ ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಜ್ಞಾನ ನೀಡುವವರು ಒಂದು ಪರಿಕಲ್ಪನೆಯನ್ನು ರೂಪಿಸಿ ಅದನ್ನು ಅನುಷ್ಠಾನಗೊಳಿಸಿದಾಗ ಮಾತ್ರ ಅದು ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಕಾಲೇಜಿಗೆ ಕೇವಲ ಮೋಜು ಮಸ್ತಿ ಮಾಡಲು ಬರುವುದಲ್ಲ. ಇಲ್ಲಿ ಜ್ಞಾನ ಪಡೆಯಲು, ತನ್ನನ್ನು ತಾನು ರೂಪಿಸಿ ಕೊಳ್ಳಲು ಬಂದಿರುವುದು ಎಂಬುದು ವಿದ್ಯಾರ್ಥಿಗಳ ಅರಿವಿನಲ್ಲಿರಬೇಕು ಎಂದು ತಿಳಿಸಿದರು.
ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಗೌರವ ಸಲ್ಲಿಸಲು ಅವರ ಜನ್ಮದಿನವನ್ನು ಸುಶಾಸನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ಹೊಸ ಕ್ಯಾಂಪಸ್ ಅಭಿವೃದ್ಧಿಗೆ ಅಗತ್ಯ ವಿರುವ ರೂ. 30 ಕೋಟಿ ಹಣವನ್ನು ಒಂದೇ ಕಂತಿನಲ್ಲಿ ಸರ್ಕಾರ ಬಿಡುಗಡೆ ಮಾಡುವಂತೆ ಕೋರಿದರು.
ವಿವಿಯ ಇಬ್ಬರು ಪ್ರಾಧ್ಯಾಪಕರು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಉತ್ತಮ ಅಧ್ಯಾಪಕವರ್ಗವನ್ನು ಒಳಗೊಂಡಿದೆ. ಬೋಧನೆಯ ಜೊತೆಗೆ ಆಡಳಿತಾತ್ಮಕ ಜವಾಬ್ದಾರಿಯನ್ನೂ ಹೆಚ್ಚುವರಿಯಾಗಿ ನಿರ್ವಹಿಸುತ್ತಿದ್ದಾರೆ ಎಂದರು.
ಹೊಸ ಶಿಕ್ಷಣ ನೀತಿ ಅಳವಡಿಕೆಯಲ್ಲಿ ತುಮಕೂರು ವಿಶ್ವವಿದ್ಯಾನಿಲಯ ಇಡೀ ರಾಜ್ಯ ದಲ್ಲಿಯೇ ಅತ್ಯುತ್ತಮ ಸಾಧನೆ ಮಾಡಿದೆ. ಸಿಂಡಿಕೇಟ್ ಸದಸ್ಯರ ಉತ್ತಮ ಸಹಕಾರದಿಂದಾಗಿ ವಿಶ್ವವಿದ್ಯಾನಿಲಯದ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.
ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಎಸ್. ಕೆ. ಸೈದಾಪುರ್ ಹಾಗೂ ನೃಪತುಂಗ ವಿಶ್ವವಿದ್ಯಾ ನಿಲಯ ಕುಲಪತಿ ಪ್ರೊ. ಶ್ರೀನಿವಾಸ ಎಸ್. ಬಳ್ಳಿ ಉತ್ತಮ ಆಡಳಿತದ ಪರಿಕಲ್ಪನೆಗಳ ಕುರಿತು ವಿಚಾರ ಮಂಡಿಸಿದರು.
ಹೊಸ ಕಟ್ಟಡಗಳ ಉದ್ಘಾಟನೆ: ಇದಕ್ಕೂ ಮುನ್ನ ಬಿದರಕಟ್ಟೆಯ ನೂತನ ಕ್ಯಾಂಪಸ್‌ನಲ್ಲಿ ರೂಸಾ ಅನುದಾನ, ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಅನುದಾನದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ವಿದ್ಯಾರ್ಥಿ ನಿಲಯಗಳನ್ನು ಸಚಿವರು ಉದ್ಘಾಟಿಸಿದರು. ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಪರೀಕ್ಷಾಂಗ ಕುಲಸಚಿವ ಪ್ರೊ. ನಿರ್ಮಲ್ ರಾಜು, ಸಿಂಡಿಕೇಟ್ ಸದಸ್ಯರಾದ ಟಿ.ಎಸ್. ಸುನಿಲ್ ಪ್ರಸಾದ್, ರಾಜು, ಪ್ರಸನ್ನಕುಮಾರ್ ಎಚ್., ಭಾಗ್ಯಲಕ್ಷ್ಮಿ ಹಿರೇಂದ್ರ ಶಾ, ಕೆ.ಆರ್. ದೇವರಾಜು, ಪ್ರೊ. ಪಾಟೀಲ ಮಲ್ಲಿಕಾರ್ಜುನ ಮತ್ತಿತರರು ಉಪಸ್ಥಿತರಿದ್ದರು.