Monday, 25th November 2024

Ganesh Visarjan: ಹಿಂದೂ ಮಹಾಗಣಪತಿ ಅದ್ದೂರಿ ವಿಸರ್ಜನೆ 

ತುಮಕೂರು: ನಗರದ  ನಾಗರಕಟ್ಟೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಗಣಪತಿಯ ವಿಸರ್ಜನಾ (Ganesh Visarjan) ಮಹೋತ್ಸವ ಶನಿವಾರ ಅತ್ಯಂತ ವಿಜೃಂಭಣೆಯಿಂದ ನಡೆಯಿತು. 

ನಾಗರಕಟ್ಟೆ ದೇವಾಲಯದ ಮುಂಭಾದಲ್ಲಿ ಹಿಂದೂ ಮಹಾಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮುಖೇನ ವಿವಿಧ ಮಠಾಧೀಶರು ಗಣೇಶೋತ್ಸವಕ್ಕೆ ಚಾಲನೆ ನೀಡಿದರು.

ಗಣೇಶೋತ್ಸವದ ಅಂಗವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ , ನಾಗರಕಟ್ಟೆ ದೇವಾಲಯಕ್ಕೆ ಭೇಟಿ ನೀಡಿ ಹಿಂದೂ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. 

ಸಚಿವ ವಿ.ಸೋಮಣ್ಣ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ ಮಾತನಾಡಿ, ಗಣೇಶೋತ್ಸವ ಈ ದೇಶದ ಸತ್ ಸಂಪ್ರದಾಯ. ಬಾಲಗಂಗಾಧರನಾಥ ತಿಲಕ್ ಅವರು ಗಣೇಶಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿ ಸ್ವಾತಂತ್ರ್ಯ ಚಳವಳಿಗೆ ನಾಂದಿ ಹಾಡಿದರು. ಸೂರ್ಯ-ಚಂದ್ರ ಎಲ್ಲಿಯವರೆಗೂ ಇರುತ್ತಾರೋ ಅಲ್ಲಿಯವರೆಗೂ ಹಿಂದೂ ರಾಷ್ಟ್ರದಲ್ಲಿ ಗಣೇಶೋತ್ಸವಗಳು ನಡೆಯುತ್ತವೆ ಎಂದರು.

ವಿವಿಧ ಮಠಾಧೀಶರುಗಳಾದ ಡಾ. ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶ್ರೀ ಅಟವೀ ಶಿವಲಿಂಗ ಸ್ವಾಮೀಜಿ, ಶ್ರೀ ಕಾರದೇಶ್ವರ ಸ್ವಾಮೀಜಿ, ಶಾಸಕ ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಕೋರಿ ಮಂಜಣ್ಣ, ಜಿ.ಕೆ. ಶ್ರೀನಿವಾಸ್, ಟಿ.ಬಿ. ಶೇಖರ್, ಡಾ. ಪರಮೇಶ್, ರವಿಶಂಕರ್ ಹೆಬ್ಬಾಕ, ಮಂಜು ಭಾರ್ಗವ್ ಸೇರಿದಂತೆ ಅನೇಕ ಭಕ್ತರು ಗಣೇಶಮೂರ್ತಿಗೆ ಪೂಜೆ ಸಲ್ಲಿಸುವ ಮುಖೇನ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. 

ಟೌನ್‌ಹಾಲ್ ವೃತ್ತದಿಂದ ಲಕ್ಕಪ್ಪ ವೃತ್ತ, ಜೆ.ಸಿ.ರಸ್ತೆ ಮೂಲಕ ಸಾಗಿ ಆಂಜನೇಯಸ್ವಾಮಿ ವೃತ್ತ, ಗಾರ್ಡನ್ ರಸ್ತೆ ಮುಖೇನ ಕೆ.ಎನ್.ಎಸ್. ಕಲ್ಯಾಣಿಗೆ ತಲುಪಿತು. ನಂತರ ಗಣೇಶಮೂರ್ತಿಯನ್ನು ಕಲ್ಯಾಣಿಯಲ್ಲಿ ಭಕ್ತರ ಅಬ್ಬರದ ಜೈಕಾರಗಳೊಂದಿಗೆ ವಿಸರ್ಜಿಸಲಾಯಿತು. 

ಗಣೇಶೋತ್ಸವದ ಮೆರವಣಿಗೆ ಸಾಗಿದ ಉದ್ದಕ್ಕೂ ಬಜರಂಗದಳದ ಕಾರ್ಯಕರ್ತರ ಜೈಕಾರ ಮುಗಿಲು ಮುಟ್ಟಿತ್ತು. ಮೆರವಣಿಗೆಯಲ್ಲಿ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕುಣಿದು ಕುಪ್ಪಳಿಸಿದ್ದು ವಿಶೇಷವಾಗಿತ್ತು. 

ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಹಿಂದೂ ಮಹಾಗಣಪತಿ ಮೂರ್ತಿಯ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಭಕ್ತರು ಹಾಗೂ ಸಾರ್ವಜನಿಕರು ಜಮಾಯಿಸಿದ್ದರು.

ಗಣೇಶೋತ್ಸವದ ಶೋಭಯಾತ್ರೆಯ ಉದ್ದಕ್ಕೂ ರಾಧೆ ಕೃಷ್ಣ ಕೋಲಾಟ, ಜಟಾಯು ಕುಣಿತ, ನಾಸಿಕ್ ಡೋಲ್, ವೀರ ಸಾವರ್ಕರ್ ಪ್ರತಿಮೆ,  ಛತ್ರಪತಿ ಶಿವಾಜಿ ಮಹಾರಾಜ್, ವಾಯುಪುತ್ರ ಆಂಜನೇಯ ಟ್ಯಾಬ್ಲೋ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ನೋಡುಗರ ಗಮನ ಸೆಳೆದವು. 

ಗಣೇಶೋತ್ಸವದ ಅಂಗವಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ನೇತೃತ್ವದಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡ ಲಾಗಿತ್ತು. 

ಭಾವೈಕ್ಯತೆ ಮೆರೆದ ಮುಸ್ಲಿಂ ಬಾಂಧವರು

ಟೌನ್‌ಹಾಲ್ ವೃತ್ತದಲ್ಲಿ ಗಣೇಶೋತ್ಸವದ ಮೆರವಣಿಗೆ ಆರಂಭವಾಗುತ್ತಿದ್ದಂತೆ ಮುಸ್ಲಿಂ ಬಾಂಧವರು ಸಹ ದರ್ಗಾ ಬಳಿ ಗಣೇಶಮೂರ್ತಿಗೆ ಪೂಜೆ ಸಲ್ಲಿಸಿ, ಶೋಭಯಾತ್ರೆಯಲ್ಲಿ ಪಾಲ್ಗೊಂಡಿದ್ದ ನೂರಾರು ಮಂದಿಗೆ ಭಕ್ತರಿಗೆ ಕುಡಿಯುವ ನೀರು ಕೊಡುವ ಮೂಲಕ ಭಾವೈಕ್ಯತೆ ಮೆರೆದರು.

ಪೋಲೀಸರ ವಿರುದ್ಧ ಮುಖಂಡರು ಕಿಡಿ 

ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವದಲ್ಲಿ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸ ದಂತೆ ಎಚ್ಚರಿಕೆ ನೀಡಲು ತುಮಕೂರು ವಿವಿ ಸೇರಿದಂತೆ ಹಲವು ಕಾಲೇಜಿನ ಪ್ರಾಂಶುಪಾಲರಿಗೆ ಪೊಲೀಸ್ ಅಧಿಕಾರಿಗಳು ಪತ್ರ ಬರೆದಿದ್ದ ಬಗ್ಗೆ ಹಿಂದೂ ಮುಖಂಡರು ಕಿಡಿಕಾರಿ, ಪೊಲೀಸರ‌ ಕ್ರಮ ಅಸಮಂಜಸ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: Ganeshotsava: ಗಣೇಶೋತ್ಸವದ ಮೂಲಕ ಬ್ರಿಟೀಷರ ಒಡೆದು ಆಳುವ ನೀತಿಗೆ ಸೆಡ್ಡು ಹೊಡೆ ದವರು ತಿಲಕರು- ನ್ಯಾ.ಎನ್.ಕುಮಾರ್ ಅಭಿಮತ