ಪಕ್ಷೇತರರ ಪಾಲಾದ ಗೌರಿಬಿದನೂರು ನಗರಸಭೆ
ಗೌರಿಬಿದನೂರು: ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಸೆ.9 ಸೋಮವಾರ ಉಪವಿಭಾಗಾ ಧಿಕಾರಿ ಅಶ್ವಿನ್ ರವರ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಪಕ್ಷೇತರ ಅಭ್ಯರ್ಥಿ ಲಕ್ಷ್ಮೀನಾರಾ ಯಣಪ್ಪ ಹಾಗೂ ಉಪಾಧ್ಯಕ್ಷರಾಗಿ ಫರೀದ್ ಆಯ್ಕೆಯಾಗಿದ್ದಾರೆ.
ಗೌರಿಬಿದನೂರು ನಗರಸಭೆಯಲ್ಲಿ ಒಟ್ಟು 31 ಸದಸ್ಯರ ಬಲವಿದ್ದು. ಅದರಲ್ಲಿ ಕಾಂಗ್ರೆಸ್ 15, ಜೆಡಿಎಸ್ 6, ಬಿಜೆಪಿ 3, ಉಳಿದಂತೆ 7 ಪಕ್ಷೇತರ ಸದಸ್ಯರಿದ್ದರು.
ಚುನಾವಣಾ ಕಣದಲ್ಲಿ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿ ಸಕ್ರಿಯವಾಗಿದ್ದು, ಬಿಜೆಪಿ ಸದಸ್ಯೆ ಪುಣ್ಯವತಿ ಜಯಣ್ಣ ಹಾಗೂ ಜೆಡಿಎಸ್ ಸದಸ್ಯೆ ಸುಬ್ಬಮ್ಮ ಗೈರಾಗಿದ್ದರು.
ನಗರಸಭೆಯ ಚುನಾವಣೆಯಲ್ಲಿ, ಮಾಜಿ ಸಚಿವ ಶಿವಶಂಕರ ರೆಡ್ಡಿಯವರು ವಿಧಾನಸಭೆ ಚುನಾವಣೆಯ ನಂತರ ಮತ್ತೊಮ್ಮೆ ಸೋಲನ್ನು ಎದುರಿಸಿ ನಿರಾಶೆಗೊಂಡಿದ್ದಾರೆ.
ಇತ್ತ, ನಗರಸಭೆಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವಲ್ಲಿ ಶಾಸಕ ಪುಟ್ಟಸ್ವಾಮಿಗೌಡರು ಯಶಸ್ವಿಯಾದರು.ಈ ಆಯ್ಕೆ ನಂತರ, ನೂತನ ಅಧ್ಯಕ್ಷ ಲಕ್ಷ್ಮಿನಾರಾಯಣಪ್ಪ ಮತ್ತು ಉಪಾಧ್ಯಕ್ಷ ಫರೀದ್ ಅವರಿಗೆ ಶಾಸಕ ಪುಟ್ಟಸ್ವಾಮಿ ಗೌಡರು ಹಾರ ಹಾಕಿ ಸನ್ಮಾನಿಸಿದರು.
ನಗರಸಭೆಯಲ್ಲಿ ಕೆಎಚ್‌ಪಿ ಬಣ ಗೆಲುವು ಕಂಡ ಹಿನ್ನೆಲೆಯಲ್ಲಿ ಮುಖಂಡರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ, ಮಾಜಿ ಸಚಿವ ಎನ್.ಹೆಚ್. ಶಿವಶಂಕರ ರೆಡ್ಡಿ ರಾಜ್ಯ ರಾಜಕಾರಣದಲ್ಲಿ ಪ್ರಭಾವಿ ನಾಯಕನಾಗಿದ್ದರೂ ಕೂಡ ಸ್ವಕ್ಷೇತ್ರದಲ್ಲಿ ಸಾಲು ಸಾಲು ಸೋಲುಗಳಾಗುತ್ತಿರುವುದು ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಉಂಟಾಗಿದೆ.
ಈ ಚುನಾವಣೆ ಫಲಿತಾಂಶವು ಮತದಾರರಿಗೆ ಅಭಿವೃದ್ಧಿ ಮುಖ್ಯವೇ ವಿನಃ ರಾಷ್ಟ್ರೀಯ ಪಕ್ಷಗಳ ಬಲವಲ್ಲ. ಪ್ರಾದೇಶಿಕ ರಾಜಕೀಯದತ್ತ ಮತದಾರ ಚಿತ್ತ ಎಂಬ ಬಗ್ಗೆ ಹೊಸ ಮುನ್ನೋಟವನ್ನು ನೀಡಿದೆ.