ಗೌರಿಬಿದನೂರು : ತಾಲೂಕಿನ ಡಿ.ಪಾಳ್ಯ ಗ್ರಾ.ಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ ಪಂಚಾಯತಿ ಸದಸ್ಯರು ಬುಧುವಾರ ಅವಿಶ್ವಾಸ ನಿರ್ಣಯ ಕೈಗೊಳ್ಳುವ ಮೂಲಕ ಅಧ್ಯಕ್ಷ ಹಾಗೂ ಉಪಾ ಧ್ಯಕ್ಷರನ್ನು ಪದಚ್ಯುತಿ ಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಡಿ.ಪಾಳ್ಯ ಗ್ರಾ.ಪಂ ನ ಎರಡನೇ ಅವಧಿಯಲ್ಲಿ ಸುಮಾರು ಹದಿನೈದು ತಿಂಗಳ ಹಿಂದೆ ಸಾಮಾನ್ಯ ಮೀಸಲಾತಿ ಯಡಿಯಲ್ಲಿ ಲಲಿತಮ್ಮ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ರೆಡ್ಡಿ ಕೂಡ ಸಾಮಾನ್ಯ ಮೀಸಲಾತಿಯಡಿ ಆಯ್ಕೆಯಾಗಿದ್ದರು.
ಇತ್ತೀಚಿಗೆ ಪಂಚಾಯತಿ ಸದಸ್ಯರು ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರಿಬ್ನರೂ ಮೇಲೆ ಅವಿಶ್ವಾಸ ಮಂಡನೆ ಕುರಿತು ಸಹಿ ಮಾಡಿ ಉಪವಿಭಾಗಾಧಿಕಾರಿ ಅವರಿಗೆ ಪತ್ರ ನೀಡಿದರು. ಅದರಂತೆ, ಉಪವಿಭಾಗಾಧಿಕಾರಿ ಅಶ್ವಿನ್ ಬುಧವಾರ ಪಂಚಾಯತಿಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆಗೆ ಸಭೆ ಕರೆದಿದ್ದರು.
ಹದಿನೆಂಟು ಮಂದಿ ಸದಸ್ಯರ ಬಲ ಹೊಂದಿರುವ ಡಿ.ಪಾಳ್ಯ ಗ್ರಾಮ ಪಂಚಾಯತಿಯ ಇಂದಿನ ಅವಿಶ್ವಾಸ ನಿರ್ಣಯ ಮಂಡನೆಯ ಸಭೆಯಲ್ಲಿ ಹದಿನೇಳು ಮಂದಿ ಗ್ರಾಮ ಪಂಚಾಯತಿ ಸದಸ್ಯರು ಸಭೆಯಲ್ಲಿ ಹಾಜರಿದ್ದು, ಹದಿನೈದು ಮಂದಿ ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆಯ ಪರವಾಗಿ ಕೈ ಎತ್ತಿದ್ದ ಪರಿಣಾಮ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ರಿಬ್ಬರೂ ಅಧಿಕಾರದಿಂದ ಪದಚ್ಯತಿಗೊಂಡಿದ್ದಾರೆ.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಅಶ್ವಿನ್, ತಹಶಿಲ್ದಾರ್ ಮಹೇಶ್ ಎಸ್ ಪತ್ರಿ,ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸಯ್ಯ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.
ಯಾವುದೇ ರೀತಿಯ ಅವಗಡ ಸಂಭವಿಸದಂತೆ ಮಂಚೇನಹಳ್ಳಿ ಪೋಲಿಸ್ ಠಾಣೆಯ ಪೋಲಿಸರು ಬಿಗಿ ಪೋಲಿಸ್ ಬಂದೋಬಸ್ತು ಒದಗಿಸಿದ್ದರು