Thursday, 12th December 2024

ಮೀಸಲಾತಿ ಸಮುದಾಯವನ್ನು ಸರಕಾರ ಮಂಗ ಮಾಡಿದೆ: ಎಚ್ಡಿಕೆ ಕಿಡಿ

ಜೆಡಿಎಸ್ ಯಾತ್ರೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ 
ತುಮಕೂರು: ಲಿಂಗಾಯತ ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ನೀಡಲು ಪ್ರತ್ಯೇಕ ಪ್ರವರ್ಗ ರಚಿಸಲು ನಿರ್ಧಾರ ಕೈಗೊಳ್ಳುವ ಮೂಲಕ ಬಿಜೆಪಿ ಸರಕಾರ ಈ ಎರಡು ಸಮುದಾಯವನ್ನು ಮಂಗ ಮಾಡಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಗ್ರಾಮಾಂತರ ಕ್ಷೇತ್ರದ ಯಲ್ಲಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೀಸಲಾತಿ ವಿಚಾರವಾಗಿ ಸರ್ಕಾರದ ಮೇಲೆ ಒತ್ತಡ ಇದೆ ನಿಜ. ಆದರೆ ಕೆಲವು ಮಾರ್ಪಾಡು ಮಾಡುವ ಮೂಲಕ ಇಷ್ಟು ದಿನ ರಂಗ ಎಂದು ಕರೆಯಲಾಗಿತ್ತು. ಆದರೆ ಈಗ ರಂಗನನ್ನು ಮಂಗ ಎಂದು ಕರೆದಿದ್ದಾರೆ. ಈ ಮೂಲಕ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗರನ್ನು ಮಂಗ ಮಾಡಿದ್ದಾರೆ. ೩ಎ ಮತ್ತು ೩ಬಿ ಪ್ರವರ್ಗಗಳನ್ನು ಸೈಲೆಂಟ್ ಮಾಡಿದ್ದಾರೆ. ಈ ಸಮುದಾಯ ಗಳಿಗೆ ಮೀಸಲಾತಿ ಕೊಡುವಷ್ಟರಲ್ಲಿ ಈ ಸರ್ಕಾರವೇ ಇರುವುದಿಲ್ಲ.
ಉತ್ತರ ಪ್ರದೇಶದಲ್ಲಿ ಮೀಸಲಾತಿಯನ್ನೆ ಹೈಕೋರ್ಟ್ ತೆಗೆದು ಹಾಕಿದೆ. ಮುಂದೆ ಕರ್ನಾ ಟಕದಲ್ಲೂ ಅದೇ ಪರಿಸ್ಥಿತಿ ಬರಬಹುದು. ಬಿಜೆಪಿಯವರು ಚುನಾವಣೆ ಗಿಮಿಕ್‌ಗಾಗಿ ಈ ರೀತಿ ಮಾಡುತ್ತಿದ್ದಾರೆ. ಪಂಚಮಸಾಲಿಗಳು ೨ಎಗೆ ಸೇರಿಸಿ ಎಂದು ಬೇಡಿಕೆ ಇಟ್ಟಿ ದ್ದರು. ಆದರೆ ೨ಡಿ ಮಾಡಿದ್ದಾರೆ. ಸರ್ಕಾರದ ನಿನ್ನೆಯ ತೀರ್ಮಾನ ನಾಡಿನ ಜನತೆಗೆ ಮಾಡಿದ ದ್ರೋಹ ವಾಗಿದೆ ಎಂದರು.
ಮೀಸಲಾತಿ ಎಂಬುದು ಧ್ವನಿ ಇಲ್ಲದ ವರ್ಗಕ್ಕೆ ಅನುಕೂಲವಾಗಬೇಕು. ಈ ಹಿಂದೆ ವಾಸನೆ ನೋಡಿಕೊಳ್ಳಿ ಎಂದು ಮೂಗಿಗೆ ತುಪ್ಪ ಸವರುತ್ತಿದ್ದರು. ಆದರೆ ಈಗಿರುವ ಬಿಜೆಪಿ ಸರ್ಕಾರ ಮೂಗಿಗೂ ತುಪ್ಪ ಸವರಿಲ್ಲ, ಬದಲಾಗಿ ಹಣೆಗೆ ತುಪ್ಪ ಸವರಿದ್ದಾರೇನೋ. ಕಳಸಾ ಬಂಡೂರಿ ಯೋಜನೆಗೆ ೧೦೦ ಕೋಟಿ ಅನುದಾನ ನೀಡಿದ್ದು ನಾನು, ಪ್ರಚಾರಕ್ಕಾಗಿ ಬಿಜೆಪಿ ಯೋಜನೆ ಮಾಡುತ್ತಾರೆ. ಮೀಸಲಾತಿ ಮೀರಬಾರದು ಎಂಬ ನಿಯಮವಿದೆ. ತಮಿಳು ನಾಡು ಸರ್ಕಾರದ ಮೀಸಲಾತಿ ಪ್ರಕರಣ ನ್ಯಾಯಾಲಯದಲ್ಲಿದೆ, ಕಾನೂನಿನ ಚೌಕಟ್ಟಿನೊಳಗೆ ನಿಯಮಗಳನ್ನು ಮಾಡಬೇಕು ನ್ಯಾಯಾಲಯಗಳು ಮೀಸಲಾತಿ ಮೀರಿದ ಯೋಜನೆ ರದ್ದು ಗೊಳಿಸಿದ ಉದಾಹರಣೆ ಇದೆ ಎಂದರು.
ಸದ್ಯ ಕಳಸಾ ಬಂಡೂರಿ ಯೋಜನೆಗೆ ಸಂಬಂಧ ಡಿಪಿಆರ್‌ಗೆ ಅನುಮೋದನೆ ಸಿಕ್ಕಿದೆ ಅಷ್ಟೇ. ಆದರೆ ಅರಣ್ಯ ಇಲಾಖೆ ಹಾಗೂ ಸುಪ್ರೀಂ ಕೋರ್ಟಿನಿಂದ ಅನುಮತಿ ಸಿಗಬೇಕಿದೆ. ಈ ಪ್ರಕ್ರಿಯೆ ಮುಗಿಯುವಷ್ಟರಲ್ಲಿ ಚುನಾವಣೆ ಮುಗಿದು ಹೋಗುತ್ತದೆ. ಕೇವಲ ಪ್ರಚಾರಕ್ಕಾಗಿ ಅಷ್ಟೇ ಈ ರೀತಿ ಮಾಡುತ್ತಿದ್ದಾರೆ. ಜಿಎಸ್‌ಟಿ ಸಂಗ್ರಹದಲ್ಲಿ ನಮ್ಮ ರಾಜ್ಯ ೨ನೇ ಸ್ಥಾನದಲ್ಲಿದೆ.
ರಾಜ್ಯದ ಸಾಲ ಹೆಚ್ಚುತ್ತಿದೆ. ಹೀಗಾಗಿ ಆರ್ಥಿಕ ಸ್ಥಿತಿ ಕೆಟ್ಟದಾಗಿದೆ. ಹಣಕಾಸು ಆಯೋಗದಲ್ಲಿ ಅನ್ಯಾಯ ಆಗಿದೆ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಕುಳಿತು ಮುಖ್ಯಮಂತ್ರಿಗಳು ಮಾತನಾಡುವ ಧಮ್ಮು ತಾಕತ್ತು ತೋರಿ ಸಲಿ, ನಮ್ಮ ರಾಜ್ಯದ ಜಿಎಸ್‌ಟಿ ಪಾಲು ತರಲಿ ಎಂದು ಸವಾಲು ಹಾಕಿದರು.
ರಾಜ್ಯಕ್ಕೆ ಬಿಜೆಪಿಯ ಕೇಂದ್ರ ನಾಯಕರು ಲಗ್ಗೆ ಇಡಲಿ. ನಮಗೇನು ಚಿಂತೆಯಿಲ್ಲ. ಈಗಾಗಲೇ ರಾಜ್ಯದಲ್ಲಿ ಕಮಲ ಅರಳುತ್ತಿಲ್ಲ, ಮುದುಡಿ ಹೋಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಹೇಗೆ ಕಮಲ ಅರಳಿಸುತ್ತಾರೆ ಎಂದು ಅವರು ಪರೋಕ್ಷವಾಗಿ ಅಮಿತ್ ಶಾ ರಾಜ್ಯ ಪ್ರವಾಸದ ಕುರಿತು ಪ್ರಸ್ತಾಪಿಸಿದರು.
ಶಾಸಕರಾದ ಡಿ.ಸಿ. ಗೌರಿಶಂಕರ್, ಬೋಜೇಗೌಡ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ. ಆಂಜಿನಪ್ಪ, ಮಾಜಿ ಶಾಸಕ ಕೆ.ಎಂ. ತಿಮ್ಮ ರಾಯಪ್ಪ ಮತ್ತಿತರರಿದ್ದರು.
ದಾಖಲೆ ಬರೆದ ಪಂಚರತ್ನ ಯಾತ್ರೆ
ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ ರಥಯಾತ್ರೆ ಕೈಗೊಂಡು ೩೪ ದಿನಗಳು ಕಳೆದಿದ್ದು, ಈ ಯಾತ್ರೆ ಅವಧಿಯಲ್ಲಿ ತಮ್ಮ ನೆಚ್ಚಿನ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ರೈತರು ಹಾಗೂ ಅಭಿಮಾನಿ ಗಳು ಹಾಕಿರುವ ಹಾರಗಳ ಸಂಖ್ಯೆ ೫೦೦ ಗಡಿ ದಾಟಿರುವ ಹಿನ್ನೆಲೆಯಲ್ಲಿ ಈ ಯಾತ್ರೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆ ಯಾಗಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೋದಲೆಲ್ಲಾ ಜನ ಅದ್ದೂರಿಯಾಗಿ ಸ್ವಾಗತ ಕೋರುತ್ತಿದ್ದು, ರೈತರೇ ವಿವಿಧ ಬಗೆಯ ಹಾರಗಳನ್ನು ತಯಾರಿಸಿ ಹಾಕುತ್ತಿರುವುದರಿಂದ ಈ ಯಾತ್ರೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾ ಗಿದೆ.
ಪಂಚರತ್ನ ಯಾತ್ರೆಯಲ್ಲಿ ಈಗಾಗಲೇ ಹಾಕಿರುವ ಹಾರಗಳ ಸಂಖ್ಯೆ ೫೦೦ ರ ಗಡಿ ದಾಟಿದೆ. ಹಲವು ರೀತಿಯ ಹಾರಗಳನ್ನ ತಯಾರಿಸಿ ಕುಮಾರಸ್ವಾಮಿಗೆ ಸ್ವಾಗತ ಮಾಡಿದ್ದಾರೆ. ಇಡೀ ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಹಾರಗಳನ್ನು ಹಾಕಿ ಸ್ವಾಗತ ಮಾಡಲಾಗಿದೆ ಎಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ ತಂಡ ತಿಳಿಸಿದೆ. ತುಮಕೂರಿಗೆ ಆಗಮಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ನ ತಂಡ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮೆಡಲ್ ಕೊಟ್ಟು ಗೌರವಿಸಿತು.

Read E-Paper click here