Thursday, 28th November 2024

ಜಿಲ್ಲಾ ಆಸ್ಪತ್ರೆಗಳಲ್ಲಿ 24*7 ಕಾರ್ಯ ನಿರ್ವಹಿಸುವ ಸಹಾಯವಾಣಿ ಆರಂಭ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ತುಮಕೂರು: ಜಿಲ್ಲಾ ಆಸ್ಪತ್ರೆಗಳಲ್ಲಿ 24*7 ಕಾರ್ಯ ನಿರ್ವಹಿಸುವ ಸಹಾಯವಾಣಿ ತೆರೆಯಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಹಾಯ ಮಾಡುವ ಸಲುವಾಗಿ ಸಹಾಯವಾಣಿ ಆರಂಭಿಸಲಾಗುತ್ತಿದೆ. ಇದಕ್ಕಾಗಿ ನಾಲ್ವರು ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಪ್ರತಿ ಪಾಳಿಯಲ್ಲಿ ಇಬ್ಬರು ಕೆಲಸ ನಿರ್ವಹಿಸ ಲಿದ್ದಾರೆ ಎಂದರು.

ಸಹಾಯ ಅಗತ್ಯವಿದ್ದವರಿಗೆ ಈ ಸಿಬ್ಬಂದಿ ಮಾರ್ಗದರ್ಶನ ಮಾಡುತ್ತಾರೆ. ರೋಗಿಯ ಸಮಸ್ಯೆ ಕೇಳಿಕೊಂಡು ಎಲ್ಲಿ ದಾಖಲಿಸ ಬೇಕು, ಯಾವ ವೈದ್ಯರನ್ನು ಭೇಟಿ ಮಾಡಬೇಕು ಮೊದಲಾದ ವಿವರಗಳನ್ನು ನೀಡುತ್ತಾರೆ. ಅಗತ್ಯ ಸಂದರ್ಭಗಳಲ್ಲಿ ರೋಗಿ ಯನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲು ನೆರವಾಗುತ್ತಾರೆ.

108 ಆಂಬುಲೆನ್ಸ್ ಸಿಬ್ಬಂದಿ ಮುಷ್ಕರದ ಬೆದರಿಕೆ ಹಾಕಿರುವ ಸಂಬಂಧ ಪ್ರತಿಕ್ರಿಯಿಸಿ, ಈಗಿರುವ ವ್ಯವಸ್ಥೆ ಡಿಸೆಂಬರ್‌ವರೆಗೂ ಮುಂದುವರಿಯಲಿದೆ. ನಂತರ ಹೊಸದಾಗಿ ಟೆಂಡರ್ ಕರೆದು ಅರ್ಹರಿಗೆ ಗುತ್ತಿಗೆ ನೀಡಲಾಗುವುದು. ಹೊಸ ವ್ಯವಸ್ಥೆ ಜನವರಿಯಿಂದ ಆರಂಭವಾಗಲಿದೆ. 108 ಸಿಬ್ಬಂದಿ ಸಮಸ್ಯೆ, ವೇತನ ಬಾಕಿ ಕೊಡಿಸುವ ಸಂಬಂಧ ಮಾತುಕತೆ ನಡೆಸಿ, ಸಮಸ್ಯೆ ಪರಿಹರಿಸಲಾಗುವುದು ಎಂದು ತಿಳಿಸಿದರು.

ಸಿದ್ದರಾಮಯ್ಯರನ್ನು ಬಲಿಕೊಡುತ್ತಾರೆ

ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸುವ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸಿ, ಕೋಲಾರದಲ್ಲಿ ಕೆಲ ದೊಡ್ಡ ನಾಯಕರು ಇದ್ದಾರೆ. ಅವರ ಬುಡ ಅಲ್ಲಾಡುತ್ತಿದೆ. ಅದನ್ನು ಸರಿಪಡಿಸಿಕೊಳ್ಳಲು ಅವರಿಗೆ ಆಹ್ವಾನ ನೀಡಿದ್ದಾರೆ. ಬಲಿ ಕೊಡಲು ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ’ ಎಂದು ಆರೋಪಿಸಿದರು.

ಅನಾಥ ಬಾಲಕಿಗೆ 10 ಲಕ್ಷ ನೆರವು
ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ತಾಯಿ, ಅವಳಿ ಶಿಶುಗಳು ಮರಣಹೊಂದಿದ ನಂತರ ಅನಾಥವಾಗಿರುವ ಬಾಲಕಿಗೆ ಆರೋಗ್ಯ ಇಲಾಖೆಯಿಂದ ೧೦ ಲಕ್ಷ ನೆರವು ನೀಡಲು ನಿರ್ಧರಿಸಲಾಗಿದೆ ಎಂದ ಸಚಿವವರು ಈ ಹಣವನ್ನು ಬಾಲಕಿ ಹೆಸರಿನಲ್ಲಿ ಠೇವಣಿ ಮಾಡಲಾಗುತ್ತದೆ. 18 ವರ್ಷ ತುಂಬಿದ ನಂತರ ಉನ್ನತ ಶಿಕ್ಷಣ ಹಾಗೂ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದಲೇ ತಾಯಿ, ಅವಳಿ ಶಿಶುಗಳು ಸಾವನ್ನಪ್ಪಿರುವುದು ಕಂಡುಬಂದಿದೆ. ಈ ಸಂಬಂಧ ಆರೋಗ್ಯ ಇಲಾಖೆ ಆಯುಕ್ತರು ತನಿಖೆ ನಡೆಸುತ್ತಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ನನ್ನದೇನೂ ತಪ್ಪಿಲ್ಲ ಎಂದು ಹೇಳಿ ಘಟನೆ ನಡೆದ ದಿನ ಕರ್ತವ್ಯದಲ್ಲಿದ್ದ ಡಾ.ಉಷಾ ಅವರು ಸರಕಾರಿ ವೈದ್ಯರ ಸಂಘಕ್ಕೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿ, ನಾನು ಸಿಸಿ ಟಿವಿ ದೃಶ್ಯಾವಳಿ ಗಮನಿಸಿದ್ದೇನೆ. ಮೃತ ಮಹಿಳೆ ಹಾಗೂ ವೈದ್ಯೆ ಉಷಾ ಒಟ್ಟಿಗೆ ಇರುವುದನ್ನು ನೋಡಿದ್ದೇನೆ. ಇದನ್ನು ಗಮನಿಸಿದ ನಂತರವೇ ವೈದ್ಯರು ತಪ್ಪು ಮಾಡಿರುವುದು ಕಂಡುಬಂದಿದ್ದು, ಅಮಾನತು ಮಾಡಲಾಗಿದೆ. ಇದು ಏಕಪಕ್ಷೀಯ ನಿರ್ಧಾರವಲ್ಲ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಶಾಸಕ ಜ್ಯೋತಿಗಣೇಶ್, ಡಿಹೆಚ್ಒ ಮಂಜುನಾಥ್, ಡಿಎಸ್ ವೀಣಾ, ಅಧಿಕಾರಿಗಳು ಇದ್ದರು.